×
Ad

"ನೋವು ನಿವಾರಕ ಮಾತ್ರೆ ಹೆಚ್ಚಾಗಿ ಸಮಸ್ಯೆಯಾಯಿತು" ಎಂದು ಸ್ಪಷ್ಟೀಕರಣ ನೀಡಿದ ದೀಪಕ್ ಚೌರಾಸಿಯಾ

Update: 2021-12-15 19:17 IST

ಹೊಸದಿಲ್ಲಿ: ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ನಿಧನರಾದ ಸಂದರ್ಭದಲ್ಲಿ ಸುದ್ದಿವಾಹಿನಿಯೊಂದರಲ್ಲಿ ವಾರ್ತೆ ಓದುತ್ತಿದ್ದ ವೇಳೆ ʼಅಸಂಬದ್ಧ ಮತ್ತು ತಪ್ಪಾಗಿʼ, ವಿಚಿತ್ರ ಶೈಲಿಯಲ್ಲಿ ಓದಿದ್ದ ನಿರೂಪಕ ದೀಪಕ್‌ ಚೌರಾಸಿಯಾ ವ್ಯಾಪಕ ವ್ಯಂಗಕ್ಕೀಡಾಗಿದ್ದರು. ಸಾಮಾಜಿಕ ತಾಣದಾದ್ಯಂತ ಅವರು ಕುಡಿದು ಬಂದು ಸ್ಟೂಡಿಯೋದಲ್ಲಿ ಕುಳಿತಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಆರೋಪಗಳಿಗೆ ಇಂಬು ನೀಡುವಂತೆ, ಬಿಪಿನ್‌ ರಾವತ್‌ ರನ್ನು ಪತ್ರಕರ್ತ ವಿ.ಕೆ ಸಿಂಗ್‌ ಎಂದು ಅವರು ಸಂಬೋಧಿಸಿದ್ದರು.

ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಚೌರಾಸಿಯಾ ತಮ್ಮ ಟ್ವಿಟರ್‌ ಖಾತೆಯಲ್ಲಿ ಸ್ಪಷ್ಟೀಕರಣ ನೀಡಿದ್ದಾರೆ. ತಾನು ನೋವು ನಿವಾರಕ ಮಾತ್ರೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಕುಡಿದಿದ್ದ ಕಾರಣ ಈ ರೀತಿ ಉಂಟಾಗಿತ್ತು ಎಂದು ಸಮಜಾಯಿಷಿ ನೀಡಿದ್ದಾರೆ. "ನನ್ನ ಕುಟುಂಬದಲ್ಲಿ ಮದುವೆ ಸಮಾರಂಭವಿತ್ತು. ಈ ವೇಳೆ ನಾನು ಡ್ಯಾನ್ಸ್‌ ಮಾಡಿದ್ದು ಹೆಚ್ಚಾಗಿದ್ದ ಕಾರಣ ಮಂಡಿಯಲ್ಲಿ ನೋವು ಪ್ರಾರಂಭವಾಗಿತ್ತು. ಮೊದಲೇ ನನಗೆ ಮಂಡಿ ನೋವಿನ ತೊಂದರೆಯಿತ್ತು. ಆದರೆ ಮಾತ್ರೆಯ ಪ್ರಮಾಣ ಹೆಚ್ಚಾಗಿದ್ದ ಕಾರಣ ನನಗೆ ಈ ರೀತಿಯ ಅನುಭವವಾಗಿತ್ತು. ಇದಕ್ಕೆ ಸಂಬಂಧಿಸಿದಂತೆ ನನ್ನ ಎಲ್ಲ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸುತ್ತೇನೆ" ಎಂದು ಹೇಳಿದ್ದಾರೆ.

ಟ್ವೀಟ್‌ ಗೆ ಹಲವಾರು ಪ್ರತಿಕ್ರಿಯೆಗಳು ವ್ಯಕ್ತವಾಗಿದ್ದು, "ನಿಮ್ಮ ಮಂಡಿಯಲ್ಲಿರುವ ಮೆದುಳಿಗೆ ಸಮಸ್ಯೆಯಾಗಬಹುದು" ಎಂದು ವ್ಯಕ್ತಿಯೋರ್ವರು ಕಮೆಂಟ್‌ ಮಾಡಿದರೆ, "ನಿಮಗೆ ಮಂಡಿ ನೋವಿರಹುದು, ನೀವು ನೋವು ನಿವಾರಕ ಮಾತ್ರೆ ತೆಗೆದುಕೊಂಡಿರಬಹುದು ಆದರೆ. ಜನರಲ್‌ ಬಿಪಿನ್‌ ರಾವತ್‌ ಹೆಸರು ವಿಪಿ ಸಿಂಗ್‌ ಎಂದು ಬದಲಾಗಿದ್ದು ಹೇಗೆ?" ಎಂದು ವ್ಯಕ್ತಿಯೋರ್ವರು ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News