×
Ad

ಕೊಲ್ಕತ್ತಾ ದುರ್ಗಾಪೂಜೆಗೆ 'ಯುನೆಸ್ಕೊ' ಗೌರವ

Update: 2021-12-16 07:18 IST
ಫೈಲ್ ಫೋಟೊ

ಕೊಲ್ಕತ್ತಾ: ಕೊಲ್ಕತ್ತಾದ ದುರ್ಗಾಪೂಜೆ ಹಬ್ಬಕ್ಕೆ ಪಾರಂಪರಿಕ ಸ್ಥಾನಮಾನವನ್ನು ನೀಡಿರುವುದನ್ನು ಯುನೆಸ್ಕೊ ಬುಧವಾರ ಪ್ರಕಟಿಸಿದೆ. ಇದು ಭಾರತಕ್ಕೆ ಘನತೆ ತಂದುಕೊಟ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ನಡೆಯನ್ನು ಸ್ವಾಗತಿಸಿದ್ದಾರೆ.

"ಕೊಲ್ಕತ್ತಾದ ದುರ್ಗಾಪೂಜೆಯನ್ನು ಅಮೂರ್ತ ಪರಂಪರೆಯ ಪಟ್ಟಿಯಲ್ಲಿ ದಾಖಲಿಸಲಾಗಿದೆ. ಭಾರತಕ್ಕೆ ಅಭಿನಂದನೆಗಳು" ಎಂದು ಸಂಘಟಕರು ಟ್ವೀಟ್ ಮಾಡಿದ್ದಾರೆ. ಇದರ ಜತೆಗೆ ದುರ್ಗೆಯ ಚಿತ್ರವನ್ನು ಲಿವಿಂಗ್ ಹೆರಿಟೇಜ್ ಎಂಬ ಹ್ಯಾಷ್ ಟ್ಯಾಗ್‌ನೊಂದಿಗೆ ಟ್ವೀಟ್ ಮಾಡಲಾಗಿದೆ.

"ಯುನೆಸ್ಕೊ ನಿರ್ಧಾರ ಅತೀವ ಹೆಮ್ಮೆಯಾಗಿದ್ದು, ಪ್ರತಿ ಭಾರತೀಯರಿಗೆ ಸಂತಸದ ಕ್ಷಣ" ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ. ದುರ್ಗಾಪೂಜೆಯು ನಮ್ಮ ಅತ್ಯುತ್ತಮ ಸಂಪ್ರದಾಯ ಮತ್ತು ಹುರುಪನ್ನು ಬಿಂಬಿಸುವಂಥದ್ದು. ಕೊಲ್ಕತ್ತಾ ದುರ್ಗಾಪೂಜೆಯ ಅನುಭವ ಪ್ರತಿಯೊಬ್ಬರೂ ಆಸ್ವಾದಿಸಲೇಬೇಕಾದ್ದು" ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

"ದುರ್ಗಾಪೂಜೆ ಕೇವಲ ಒಂದು ಹಬ್ಬವಲ್ಲ; ಅದೊಂದು ಅಪೂರ್ವ ಭಾವನೆ" ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ. "ಬಂಗಾಲಕ್ಕೆ ಹೆಮ್ಮೆಯ ಕ್ಷಣ!. ವಿಶ್ವದ ಎಲ್ಲೆಡೆ ಇರುವ ಪ್ರತಿ ಬಂಗಾಲಿಗಳಿಗೆ, ದುರ್ಗಾಪೂಜೆ ಒಂದು ಹಬ್ಬವಷ್ಟೇ ಅಲ್ಲ; ಅದು ಪ್ರತಿಯೊಬ್ಬರನ್ನೂ ಒಗ್ಗೂಡಿಸುವ ಭಾವನೆ. ಇದೀಗ ದುರ್ಗಾಪೂಜೆಯನ್ನು ಮನುಕುಲದ ಅಮೂರ್ತ ಸಾಂಸ್ಕೃತಿಕ ಪರಂಪರೆಯ ಪ್ರಾತಿನಿಧಿಕ ಪಟ್ಟಿಗೆ ಸೇರಿಸಲಾಗಿದೆ. ನಾವೆಲ್ಲ ಸಂತಸದಲ್ಲಿ ತೇಲಾಡುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News