ಉತ್ತರಪ್ರದೇಶ ಚುನಾವಣೆ:ಚಿಕ್ಕಪ್ಪ ಶಿವಪಾಲ್ ಜೊತೆಗಿನ ಭಿನ್ನಾಭಿಪ್ರಾಯ ಸರಿಪಡಿಸಿಕೊಂಡ ಅಖಿಲೇಶ್ ಯಾದವ್

Update: 2021-12-16 18:46 GMT

ಹೊಸದಿಲ್ಲಿ,ಡಿ.16: ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ತನ್ನ ಚಿಕ್ಕಪ್ಪ ಶಿವಪಾಲ್ ಯಾದವ್ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷ (ಲೋಹಿಯಾ)ದ ಮೈತ್ರಿ ಮಾಡಿಕೊಳ್ಳುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಗುರುವಾರ ಪ್ರಕಟಿಸಿದ್ದಾರೆ.

ಅಖಿಲೇಶ್ ಯಾದವ್ ಗುರುವಾರ ಶಿವಪಾಲ್ ಯಾದವ್ರನ್ನು ಲಕ್ನೋದಲ್ಲಿರುವ ಅವರ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು.
‘ಪಿಎಸ್‌ಪಿಯ ರಾಷ್ಟ್ರಾಧ್ಯಕ್ಷರನ್ನು ನಾನು ಭೇಟಿಯಾಗಿದ್ದು, ಚುನಾವಣಾ ಮೈತ್ರಿಮಾಡಿಕೊಳ್ಳುವ ಬಗ್ಗೆ ನಿರ್ಧರಿಸಲಾಯಿತು ’ ಎಂದು ಅಖಿಲೇಶ್ ಯಾದವ್ ಅವರು ಶಿವಪಾಲ್ ಜೊತೆಗಿನ ತನ್ನ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದಾರೆ. ‘ಪ್ರಾದೇಶಿಕ ಪಕ್ಷಗಳನ್ನು ಜೊತೆಯಾಗಿ ಕೊಂಡೊಯ್ಯುವ ನೀತಿಯು ಎಸ್‌ಪಿಯನ್ನು ಬಲಪಡಿಸುತ್ತದೆ ಮತ್ತು ಎಸ್‌ಪಿ ಹಾಗೂ ಇತರ ಪಕ್ಷಗಳನ್ನು ಐತಿಹಾಸಿಕ ವಿಜಯದೆಡೆಗೆ ಕೊಂಡೊಯ್ಯಲಿದೆ ಎಂದರು.
        2017ರ ವಿಧಾನಸಭಾ ಚುನಾವಣೆಯಲ್ಲಿ ಅಖಿಲೇಶ್ ಜೊತೆಗಿನ ಭಿನ್ನಾಭಿಪ್ರಾಯಗಳಿಂದಾಗಿ ಶಿವಪಾಲ್ ಯಾದವ್ ಸಮಾಜವಾದಿ ಪಕ್ಷವನ್ನು ತೊರೆದುಬಂದಿದ್ದರು. ಸಮಾಜವಾದಿ ಪಕ್ಷದಲ್ಲಿ ತಗಾಗಲಿ ಅಥವಾ ಪಕ್ಷದ ಅಧ್ಯಕ್ಷ, ಅಖಿಲೇಶ್ ತಂದೆ ಮುಲಾಯಂ ಸಿಂಗ್ ಯಾದವ್ ಅವರನ್ನಾಗಲಿ ಗೌರವದಿಂದ ನಡೆಸಿಕೊಳ್ಳಲಾಗುತ್ತಿಲ್ಲವೆಂದು ಶಿವಪಾಲ್ ಆಪಾದಿಸಿದ್ದರು. ಆನಂತರ 2018ರಲ್ಲಿ ಅವರು ಪ್ರಗತಿಶೀಲ ಸಮಾಜವಾದಿ ಪಕ್ಷವನ್ನು ಸ್ಥಾಪಿಸಿದ್ದರು.
ಕಳೆದ ತಿಂಗಳು ಶಿವಪಾಲ್ ಯಾದವ್ ಅವರು ಹೇಳಿಕೆಯೊಂದನ್ನು ನೀಡಿ, ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯಲು ತನ್ನ ಪಕ್ಷವು ಯಾವುದೇ ರೀತಿಯ ತ್ಯಾಗಕ್ಕೂ ಸಿದ್ಧವಿದೆಯೆಂದು ಹೇಳುವ ಮೂಲಕ ಎಸ್‌ಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಒಲವು ವ್ಯಕ್ತಪಡಿಸಿದ್ದರು‌

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News