×
Ad

ತಾಯಿ ಜೊತೆಗಿನ ಲಲಿತ್‌ ಮೋದಿ ಆಸ್ತಿ ವಿವಾದ ಇತ್ಯರ್ಥಕ್ಕೆ ಸುಪ್ರೀಂನಿಂದ ಸಂಧಾನಕಾರರ ನೇಮಕ

Update: 2021-12-17 00:05 IST

ಹೊಸದಿಲ್ಲಿ,ಡಿ.16: ಮಾಜಿ ಐಪಿಎಲ್ ವರಿಷ್ಠ ಲಲಿತ್ ಮೋದಿ ಹಾಗೂ ಅವರ ತಾಯಿ ಬೀನಾ ಮೋದಿ ನಡುವೆ ದೀರ್ಘಕಾಲದಿಂದ ನೆನೆಗುದಿಯಲ್ಲಿರುವ ಆಸ್ತಿ ವಿವಾದವನ್ನು ಬಗೆಹರಿಸಲು ಸುಪ್ರೀಂಕೋರ್ಟ್ ಗುರುವಾರ ಇಬ್ಬರು ನಿವೃತ್ತ ಹೈಕೋರ್ಟ್ ನ್ಯಾಯಾಧೀಶರನ್ನು ಸಂಧಾನಕಾರರನ್ನಾಗಿ ನೇಮಿಸಿದೆ.

ಬೀನಾ ಮೋದಿ ಅವರು ತನ್ನ ಪುತ್ರನ ವಿರುದ್ಧ ದಾಖಲಿಸಿರುವ ಮಧ್ಯಸ್ಥಿಕೆ ವಿರೋಧಿ ತಡೆಯಾಜ್ಞೆಯು ಸಮರ್ಥನೀಯವೆಂಬ ದಿಲ್ಲಿ ಹೈಕೋರ್ಟ್ ನ ವಿಭಾಗೀಯ ಪೀಠದ ತೀರ್ಪಿನ ವಿರುದ್ಧ ಲಲಿತ್ ಮೋದಿ ಸಲ್ಲಿಸಿದ್ದ ಅರ್ಜಿಯ ಆಲಿಕೆಯನ್ನು ನಡೆಸಿದ ದಿಲ್ಲಿ ಹೈಕೋರ್ಟ್ ಈ ಇಬ್ಬರು ಹೆಚ್ಚುವರಿ ನ್ಯಾಯಾಧೀಶರನ್ನು ನೇಮಿಸಿದೆ.
  
ಸುಪ್ರೀಂಕೋರ್ಟ್ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಹಾಗೂ ಕುರಿಯನ್ ಜೋಸೆಫ್ ಅವರನ್ನು ಸಂಧಾನಕಾರರನ್ನಾಗಿ ನೇಮಕಗೊಳಿಸಿರುವುದಕ್ಕೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ ನೇತೃತ್ವದ ನ್ಯಾಯಪೀಠವು ಒಪ್ಪಿಗೆ ಸೂಚಿಸಿದೆ.
ಉಭಯ ಕಕ್ಷಿದಾರರು ಹೈದರಾಬಾದ್‌ನಲ್ಲಿರುವ ಸಂಧಾನಕೇಂದ್ರವನ್ನು ಬಳಸಿಕೊಳ್ಳಬಹುದಾಗಿದೆ. ಆನ್‌ಲೈನ್ ಮಧ್ಯಸ್ಥಿಕೆಗಾಗಿಯೂ ಅವರು ಮನವಿ ಸಲ್ಲಿಸಬಹುದಾಗಿದೆ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
 
ಆಸ್ತಿವಿವಾದಕ್ಕೆ ಸಂಬಂಧಿಸಿ ಲಲಿತ್ ಮೋದಿ ಅವರು ಉಪಕ್ರಮಿಸಿರುವ ಸಂಧಾನ ಕಲಾಪಗಳನ್ನು ತಡೆಹಿಡಿಯಬೇಕೆಂದು ಕೋರಿ ಬೀನಾ ಮೋದಿ ಅರ್ಜಿ ಸಲ್ಲಿಸಿದ್ದರು.
ತನ್ನ ತಂದೆ, ಕೈಗಾರಿಕೋದ್ಯಮಿ ಕೆ.ಕೆ. ಮೋದಿ ಅವರ ನಿಧನದ ಬಳಿಕ ಅವರು ಸ್ಥಾಪಿಸಿದ್ದ ಟ್ರಸ್ಟ್‌ನ ಆಸ್ತಿಗಳ ಕುರಿತು ಸಹಮತದ ಕೊರತೆಯಿಂದಾಗಿ ಟ್ರಸ್ಟ್ ನ ಎಲ್ಲಾ ಆಸ್ತಿಗಳನ್ನು ಮಾರಾಟ ಮಾಡಬೇಕಾಯಿತು ಹಾಗೂ ಒಂದು ವರ್ಷದೊಳಗೆ ಅವುಗಳನ್ನು ವಾರಸುದಾರರಿಗೆ ವಿತರಿಸಬೇಕಾಗಿದೆ ಎಂದು ವಾದಿಸಿದ್ದರು.
  
ಆದರೆ ಲಲಿತ್ ಮೋದಿ ಅವರ ತಾಯಿ ಬೀನಾ ಮೋದಿ ಹಾಗೂ ಅವರ ಇನ್ನಿಬ್ಬರು ಮಕ್ಕಳಾದ ಚಾರು ಹಾಗೂ ಸಮೀರ್ ಪ್ರತ್ಯೇಕವಾಗಿ ಸಲ್ಲಿಸಿದ ದಾವೆಗಳಲ್ಲಿ ಕುಟುಂಬ ಸದಸ್ಯರ ನಡುವೆ ಟ್ರಸ್ಟ್ ಕುರಿಂತೆ ಒಪ್ಪಂದವಾಗಿದೆ. ಹೀಗಾಗಿ ಭಾರತೀಯ ಕಾನೂನಿನ ಪ್ರಕಾರ ವಿದೇಶದಲ್ಲಿ ಕೆ.ಕೆ. ಫ್ಯಾಮಿಲಿ ಟ್ರಸ್ಟ್‌ನ ವಿಷಯಗಳನ್ನು ಇತ್ಯರ್ಥಗೊಳಿಸಲು ಸಾಧ್ಯವಿಲ್ಲವೆಂದು ಪ್ರತಿಪಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News