ನಾಲ್ಕು ವರ್ಷಗಳಲ್ಲಿ ಅಪಘಾತಕ್ಕೀಡಾದ ಸೇನಾ ಹೆಲಿಕಾಪ್ಟರ್‌ಗಳೆಷ್ಟು ಗೊತ್ತೇ ?
ಹೊಸದಿಲ್ಲಿ : ಇತ್ತೀಚೆಗೆ ಕೂನೂರಿನಲ್ಲಿ ಭಾರತೀಯ ವಾಯುಪಡೆಯ ಎಂಐ-17ವಿಎಸ್ ಹೆಲಿಕಾಪ್ಟರ್ ಅಪಘಾತಕ್ಕೀಡಾಗುವವರೆಗೆ ಕಳೆದ ನಾಲ್ಕು ವರ್ಷಗಳಲ್ಲಿ 15 ಮಿಲಿಟರಿ ಹೆಲಿಕಾಪ್ಟರ್‌ಗಳು ಅಪಘಾತಕ್ಕೀಡಾಗಿ 31 ಮಂದಿ ಯೋಧರು ಮೃತಪಟ್ಟಿದ್ದಾರೆ ಎಂದು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಶುಕ್ರವಾರ ಪ್ರಕಟಿಸಿದೆ.
ಅಪಘಾತಕ್ಕೀಡಾದ 15 ಹೆಲಿಕಾಪ್ಟರ್‌ಗಳಲ್ಲಿ ನಾಲ್ಕು ಅತ್ಯಾಧುನಿಕ ಲಘು ಹೆಲಿಕಾಪ್ಟರ್‌ಗಳು (ಎಎಲ್‌ಎಚ್), ನಾಲ್ಕು ಚೀತಾ, ಎರಡು ಎಎಲ್‌ಎಚ್ (ಶಸ್ತ್ರ ವ್ಯವಸ್ಥೆ ಅಳವಡಿಸಲಾದ) ಅವತರಣಿಕೆಗಳು, ಮೂರು ಎಂಐ-17ವಿ5 ಮತ್ತು ಒಂದು ಎಂಐ-17 ಹಾಗೂ ಒಂದು ಚೇತಕ್ ಸೇರಿವೆ.
ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ಎಲ್ಲ ಮೂರೂ ಸೇನೆಗಳಿಗೆ ಸಂಬಂಧಿಸಿದ ಈ ವಿವರಗಳನ್ನು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರವಾಗಿ ನೀಡಿದರು.
ಭಾರತೀಯ ವಾಯುಪಡೆಯ ಚೀತಾ ಹೆಲಿಕಾಪ್ಟರ್ 2017ರ ಮಾರ್ಚ್ 15ರಂದು ಅಪಘಾತಕ್ಕೀಡಾದ ಬಳಿಕ ನಡೆದ ಘಟನೆಗಳ ವಿವರಗಳನ್ನು ಸಚಿವರು ನೀಡಿದರು. ಇದುವರೆಗೆ ಇಂಥ ಅಪಘಾತಗಳಲ್ಲಿ 31 ಯೋಧರು ಮೃತಪಟ್ಟು, 20 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ಕೂನೂರು ದುರಂತದಲ್ಲಿ ಹುತಾತ್ಮರಾದ ಸಿಡಿಎಸ್ ಜನರಲ್ ಬಿಪಿನ್ ರಾವತ್, ಅವರ ಪತ್ನಿ ಮಧುಲಿಕಾ ಹಾಗೂ ಸಶಸ್ತ್ರ ಪಡೆಗಳ 12 ಮಂದಿ ಸಿಬ್ಬಂದಿ ಕೂಡಾ ಸೇರಿದ್ದಾರೆ.
ಪಠಾಣ್ ಕೋಟ್ ಬಳಿಯ ರಂಜೀತ್ ಸಾಗರ್ ಅಣೆಕಟ್ಟಿನಲ್ಲಿ ಕಳೆದ ಆಗಸ್ಟ್ 3ರಂದು ಎಎಲ್‌ಎಚ್ ರುದ್ರ ಅಪಘಾತಕ್ಕೀಡಾದ ಬಗ್ಗೆ ಕೇಳಿದ ಪ್ರಶ್ನೆಗೆ, ಹೆಲಿಕಾಪ್ಟರ್ ಅಣೆಕಟ್ಟಿನ ಮೇಲೆ ಹಾರಾಡಬಾರದು ಎಂಬ ಯಾವ ನಿರ್ಬಂಧವೂ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದರು. ಈ ದುರಂತದಲ್ಲಿ ಲೆಫ್ಟಿನೆಂಟ್ ಕರ್ನಲ್ ಎ.ಎಸ್.ಭತ್ ಮತ್ತು ಕ್ಯಾಪ್ಟನ್ ಜಯಂತ್ ಜೋಶಿ ಹುತಾತ್ಮರಾಗಿದ್ದರು.