×
Ad

ಐಟಿ ಇಲಾಖೆ ದಾಳಿ ಬಿಜೆಪಿಯ ಬೆದರಿಕೆ ತಂತ್ರ: ಅಖಿಲೇಶ್ ಯಾದವ್ ಟೀಕೆ

Update: 2021-12-18 11:44 IST

ಲಕ್ನೊ: ಸಮಾಜವಾದಿ ಪಕ್ಷದ (ಎಸ್‌ಪಿ) ನಾಯಕರು ಹಾಗೂ  ಬೆಂಬಲಿಗರ ಮನೆಗಳ ಮೇಲೆ ಶನಿವಾರ ನಡೆದ ಆದಾಯ ತೆರಿಗೆ ದಾಳಿಯ ವರದಿಗಳ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಆಡಳಿತಾರೂಢ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಪ್ರತಿಪಕ್ಷಗಳನ್ನು ಬೆದರಿಸಲು ಕೇಂದ್ರೀಯ ಸಂಸ್ಥೆಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದರು.

"ಬಿಜೆಪಿಯು ಕಾಂಗ್ರೆಸ್ ಹಾದಿಯಲ್ಲೇ ಸಾಗುತ್ತಿದೆ. ಕಾಂಗ್ರೆಸ್‌ನ ಹಳೆಯ ಇತಿಹಾಸವನ್ನು ಒಮ್ಮೆ ನೋಡಿ, ಯಾರನ್ನಾದರೂ ಬೆದರಿಸಬೇಕು ಎಂದಾದಲ್ಲಿ ಅದು ಈ ಕೇಂದ್ರೀಯ ಸಂಸ್ಥೆಗಳನ್ನು ಬಳಸುತ್ತದೆ. ಇಂದು ಬಿಜೆಪಿಯೂ ಅದನ್ನೇ ಮಾಡುತ್ತಿದೆ" ಎಂದು ಅಖಿಲೇಶ್ ಯಾದವ್  ಹೇಳಿದ್ದಾರೆ. .

ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿರುವಾಗ ಆಡಳಿತ ಪಕ್ಷದ ಮೇಲೆ ತಮ್ಮ ದಾಳಿಯನ್ನು ಮುಂದುವರೆಸಿದ ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ, ಬಿಜೆಪಿಯು ತಮ್ಮ ಚುನಾವಣಾ ಭರವಸೆಯನ್ನು ಈಡೇರಿಸಲು ಹಾಗೂ  ರಾಜ್ಯದಲ್ಲಿ 'ರಾಮ ರಾಜ್ಯ'ವನ್ನು ತರಲು ವಿಫಲವಾಗಿದೆ ಎಂದು ಹೇಳಿದರು.

ಬಿಜೆಪಿ 'ರಾಮರಾಜ್ಯ' ತರುವುದಾಗಿ ಹೇಳುತ್ತಿತ್ತು. ಆದರೆ ಸಮಾಜವಾದದ ಮಾರ್ಗ ರಾಮರಾಜ್ಯ ತರುತ್ತದೆ. ಸಮಾಜವಾದ ಬಂದರೆ 'ರಾಮರಾಜ್ಯ' ಸಿಗುತ್ತದೆ ಎಂದು ಪ್ರತಿಪಾದಿಸಿದರು.

ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿರುವ ಎಸ್‌ಪಿ ರಾಷ್ಟ್ರೀಯ ಕಾರ್ಯದರ್ಶಿ ಹಾಗೂ ವಕ್ತಾರ ರಾಜೀವ್ ರಾಯ್ ಅವರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆ ಶನಿವಾರ ದಾಳಿ ನಡೆಸಿದೆ.

ವಾರಣಾಸಿಯಿಂದ ಐಟಿ ಅಧಿಕಾರಿಗಳ ತಂಡ ಶನಿವಾರ ಮುಂಜಾನೆ ಮೌಗೆ ಆಗಮಿಸಿ ಸಹದತ್‌ಪುರ ಪ್ರದೇಶದಲ್ಲಿ ರಾಯ್ ಅವರ ಮನೆಯಲ್ಲಿ ಬೆಳಿಗ್ಗೆ 7 ಗಂಟೆ ಸುಮಾರಿಗೆ ಶೋಧ ಆರಂಭಿಸಿತು. ಎಸ್ಪಿ ನಾಯಕ ಮತ್ತು ಅವರ ಕುಟುಂಬ ಕಳೆದ ಎರಡು ಗಂಟೆಗಳಿಂದ ಮನೆಯೊಳಗೆ ಬಂಧಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News