×
Ad

ಉತ್ತರಪ್ರದೇಶ: 'ಅಮಿತ್ ಶಾ', 'ನಿತಿನ್ ಗಡ್ಕರಿ' ಹೆಸರಿನಲ್ಲಿ ಕೋವಿಡ್ ಲಸಿಕೆ ಪ್ರಮಾಣಪತ್ರಗಳ ವಿತರಣೆ!

Update: 2021-12-18 12:17 IST

ಇಟಾವ, ಡಿ. 18: ಉತ್ತರಪ್ರದೇಶದ ಇಟಾವ ಜಿಲ್ಲೆಯ ಟಾಖಾ ತಾಲೂಕಿನ ಆರೋಗ್ಯ ಕೇಂದ್ರ ಸಚಿವರಾದ ಅಮಿತ್ ಶಾ, ಓಂ ಬಿರ್ಲಾ, ನಿತಿನ್ ಗಡ್ಕರಿ ಹಾಗೂ ಪಿಯೂಷ್ ಗೋಯಲ್ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆಯ ಪ್ರಮಾಣ ಪತ್ರ ನೀಡಿದೆ. ‌

ಇದು ಪಿತೂರಿ ಎಂದು ಶಂಕಿಸಿರುವ ಅಧಿಕಾರಿಯೊಬ್ಬರು ಪ್ರಮಾಣ ಪತ್ರವನ್ನು ನಕಲಿ ಎಂದು ಕರೆದಿದ್ದಾರೆ. ಅಲ್ಲದೆ, ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಈ ಕೋವಿಡ್ ಲಸಿಕೆಯ ಪ್ರಮಾಣ ಪತ್ರದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ, ನಿತಿನ್ ಗಡ್ಕರಿ ಹಾಗೂ ಪಿಯೂಷ್ ಗೋಯಲ್ ಅವರ ಹೆಸರನ್ನು ಮುದ್ರಿಸಲಾಗಿದೆ. ಪ್ರಾಯ ಅಮಿತ್ ಶಾ ಅವರದ್ದು 33, ನಿತಿನ್ ಗಡ್ಕರಿ 30, ಪಿಯೂಷ್ ಗೋಯಲ್ 37, ಓಂ ಬಿರ್ಲಾ 26 ವರ್ಷ ಎಂದು ಉಲ್ಲೇಖಿಸಲಾಗಿದೆ. 

ಇಟಾವದ ಸರ್ಸೈನಾರ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಿಸೆಂಬರ್ 12ರಂದು ಇವರು ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದಾರೆ ಹಾಗೂ ಎರಡನೇ ಡೋಸ್ನ ದಿನಾಂಕವನ್ನು 2022 ಮಾರ್ಚ್ 5 ಹಾಗೂ 2022 ಎಪ್ರಿಲ್ 3ರ ನಡುವೆ ನಿಗದಿಪಡಿಸಲಾಗಿದೆ ಎಂದು ಪ್ರಮಾಣ ಪತ್ರದಲ್ಲಿ ಹೇಳಲಾಗಿದೆ. ಈ ಪ್ರಮಾಣ ಪತ್ರದ ಪ್ರತಿ ಕಂಡು ಬಂದ ಬಳಿಕ, ಉಲ್ಲೇಖಿಸಿದ ಆರೋಗ್ಯ ಕೇಂದ್ರದಲ್ಲಿ ಕೊರೋನ ಲಸಿಕೆ ನೀಡಿಲ್ಲ ಎಂಬುದು ಪತ್ತೆಯಾಗಿದೆ. ಈ ಬಗ್ಗೆ ಪ್ರಶ್ನಿಸಿದಾಗ ‘‘ನಮ್ಮ ಐಡಿಯನ್ನು ಡಿಸೆಂಬರ್ 12ರಂದು ಹ್ಯಾಕ್ ಮಾಡಲಾಗಿದೆ. ಈ ಐಡಿಯನ್ನು ಅಂತ್ಯಗೊಳಿಸುವಂತೆ ಆಗ್ರಹಿಸಿ ನಾವು ಪತ್ರ ಬರೆದಿದ್ದೇವೆ’’ ಸಮುದಾಯ ಆರೋಗ್ಯ ಕೇಂದ್ರದ ಉಸ್ತುವಾರಿ ಹೇಳಿದ್ದಾರೆ. 

ಈ ಪ್ರಮಾಣ ಪತ್ರದ ಹಿಂದೆ ಕೆಲವರ ಪಿತೂರಿ ಇದೆ. ಕೇಂದ್ರ ಸಚಿವರ ಹೆಸರನ್ನು ಉದ್ದೇಶಪೂರ್ವಕವಾಗಿ ಬಳಕೆ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಉನ್ನತ ಮಟ್ಟದ ತನಿಖಾ ಸಮಿತಿ ರೂಪಿಸಲಾಗಿದೆ. ಈ ವಂಚನೆಯನ್ನು ಶೀಘ್ರ ಬಹಿರಂಗಪಡಿಸಲಾಗುವುದು ಎಂದು ಮುಖ್ಯ ವೈದ್ಯಾಧಿಕಾರಿ ಡಾ. ಭಗವಾನ್ ದಾಸ್ ಬಿರೋರಿಯಾ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News