'ಅಮೇಠಿ ಇನ್ನೂ ಹಾಗೆಯೇ ಇದೆ, ಜನರ ಕಣ್ಣಲ್ಲಿ ಆಕ್ರೋಶವಿದೆ': ರಾಹುಲ್ ಗಾಂಧಿ

Update: 2021-12-18 10:10 GMT

ಅಮೇಠಿ/ಹೊಸದಿಲ್ಲಿ: ರಾಹುಲ್ ಗಾಂಧಿ ಅವರು ಇಂದು ತಮ್ಮ ಹಿಂದಿನ ಲೋಕಸಭಾ ಕ್ಷೇತ್ರವಾದ ಉತ್ತರ ಪ್ರದೇಶದ ಅಮೇಠಿಯಲ್ಲಿ ಪಾದಯಾತ್ರೆಯ ನೇತೃತ್ವ ವಹಿಸಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಬಿಜೆಪಿಯು ರಾಜ್ಯದಲ್ಲಿ  ಸತತ ಎರಡನೇ ಅವಧಿಗೆ ಅಧಿಕಾರ ಪಡೆಯಲು ಶ್ರಮಿಸುತ್ತಿರುವಾಗ ಕಾಂಗ್ರೆಸ್ ತನ್ನ ನೆಲೆ  ಕಂಡುಕೊಳ್ಳುತ್ತಿರುವಾಗ ಶನಿವಾರ ಆಯೋಜಿಸಿರುವ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಗೆ ಅವರ ಸಹೋದರಿ ಹಾಗೂ  ಪಕ್ಷದ ಯುಪಿ ಉಸ್ತುವಾರಿ ಪ್ರಿಯಾಂಕಾ ಗಾಂಧಿ ವಾಧ್ರಾ ಸಾಥ್ ನೀಡಿದರು.

2019 ರ ಲೋಕಸಭೆಯ ಸೋಲಿನ ನಂತರ ಎರಡನೇ ಬಾರಿಗೆ ಅಮೇಠಿಗೆ ಭೇಟಿ ನೀಡಿದ, 51 ವರ್ಷದ ರಾಹುಲ್  ಗಾಂಧಿ, "ಅಮೇಠಿಯ ಪ್ರತಿ ಗಲ್ಲಿಯೂ ಈಗಲೂ ಮೊದಲಿನಂತೆಯೇ ಇದೆ.  ಸರಕಾರದ ವಿರುದ್ಧ ಕೋಪ ಜನರ ಕಣ್ಣಲ್ಲಿದೆ" ಎಂದು ಹೇಳಿದರು.

"ಹೃದಯಗಳಲ್ಲಿ ಮೊದಲಿನಂತೆಯೇ ಜಾಗವಿದೆ. ಅನ್ಯಾಯದ ವಿರುದ್ಧ ನಾವು ಈಗಲೂ ಒಂದಾಗಿದ್ದೇವೆ" ಎಂದು  ಹಣದುಬ್ಬರ ವಿರೋಧಿ ರ್ಯಾಲಿಯನ್ನು ಮುನ್ನಡೆಸಿದ ರಾಹುಲ್ ಹೇಳಿದರು.

"ನಾನು 2004 ರಲ್ಲಿ ರಾಜಕೀಯಕ್ಕೆ ಬಂದೆ. ನಾನು ನನ್ನ ಮೊದಲ ಚುನಾವಣೆಯಲ್ಲಿ ಸ್ಪರ್ಧಿಸಿದ ನಗರ ಅಮೇಠಿ. ಅಮೇಠಿಯ ಜನರು ನನಗೆ ರಾಜಕೀಯದ ಬಗ್ಗೆ ಸಾಕಷ್ಟು ಕಲಿಸಿದ್ದಾರೆ. ನೀವು ನನಗೆ ರಾಜಕೀಯಕ್ಕೆ ದಾರಿ ತೋರಿಸಿದ್ದೀರಿ ಹಾಗೂ  ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ’’ಎಂದರು.

ಚೀನಾದೊಂದಿಗಿನ ಭಾರತದ ಗಡಿ ವಿವಾದ, ದಿಲ್ಲಿ ಗಡಿಭಾಗದಲ್ಲಿ ಪ್ರತಿಭಟನಾ ಸ್ಥಳಗಳಲ್ಲಿ ರೈತರ ಸಾವುಗಳು ಹಾಗೂ   "ಹಿಂದೂ ವರ್ಸಸ್ ಹಿಂದುತ್ವವಾದಿ" ಯ ಬಗ್ಗೆ ತಮ್ಮ ಭಾಷಣದಲ್ಲಿ ರಾಹುಲ್ ಪ್ರಸ್ತಾವಿಸಿದರು.

ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ಪ್ರಮುಖ ನಾಯಕರು ರಾಜಸ್ಥಾನದಲ್ಲಿ ಬೃಹತ್ ರ್ಯಾಲಿಯನ್ನು ನಡೆಸಿದ ಸರಿಯಾಗಿ ಒಂದು ವಾರದ ನಂತರ ಅಮೇಠಿಯಲ್ಲಿ ಇಂದಿನ ಆರು ಕಿಮೀ ಪಾದಯಾತ್ರೆಯು ಕೇಂದ್ರದ ವೈಫಲ್ಯಗಳನ್ನು ಎತ್ತಿ ತೋರಿಸಿತು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News