ಗೌರಿ ಲಂಕೇಶ್‌ ಕೊಲೆಗಾರರ ಹಿಟ್‌ ಲಿಸ್ಟ್‌ ನಲ್ಲಿತ್ತು ಜ್ಞಾನಪೀಠ ಪ್ರಶಸ್ತಿ ವಿಜೇತ ದಾಮೋದರ ಮೌಜೊ ಹೆಸರು !

Update: 2021-12-18 14:15 GMT
Photo: Facebook

ಅತ್ಯುತ್ತಮ ಸಾಹಿತ್ಯಕ್ಕಾಗಿ ಈ ವರ್ಷದ ಜ್ಞಾನಪೀಠ ಪ್ರಶಸ್ತಿಯು ಖ್ಯಾತ ಕೊಂಕಣಿ ಕಾದಂಬರಿಕಾರ ಮತ್ತು ಸಣ್ಣಕಥೆಗಳ ಲೇಖಕ ದಾಮೋದರ ಮೌಜೊ ಅವರಿಗೆ ಸಂದಿದೆ. ಪ್ರಸಿದ್ಧ ಅಸ್ಸಾಮಿ ಕವಿ ನೀಲಮಣಿ ಫೂಕನ್ ಜ್ಯೂನಿಯರ್ ಅವರೂ 2020ರ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಸಾಹಿತ್ಯ ಕ್ಷೇತ್ರಕ್ಕೆ ಅವರ ಅಸಾಧಾರಣ ಕೊಡುಗೆಯನ್ನು ಸಂಭ್ರಮಿಸುವಾಗ ನಮ್ಮ ಚರ್ಚೆಗಳು ಕೇವಲ ಸಾಹಿತ್ಯ ಕ್ಷೇತ್ರಕ್ಕೆ ಸೀಮಿತವಾಗಿರುವುದಿಲ್ಲ ಎಂದು newsclick.in ನಲ್ಲಿ ಸುಭಾಷ್‌ ಗಟಾಡೆ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿದ್ದಾರೆ ಜೊತೆಗೆ ಗೌರಿ ಲಂಕೇಶ್‌ ರವರನ್ನು ಕೊಲೆಗೈದ ದುಷ್ಕರ್ಮಿಗಳ ಪಟ್ಟಿಯಲ್ಲಿ ಮೌಜೊ ಹೆಸರು ಕೂಡಾ ಇತ್ತು ಎಂದೂ ಅವರು ಬರೆದಿದ್ದಾರೆ.

ಮೆಚ್ಚುಗೆಗೆ ಪಾತ್ರವಾಗಿರುವ ತನ್ನ ‘ಕಾರ್ಮೆಲಿನ್’ ಕಾದಂಬರಿ (1980)ಯಲ್ಲಿ ಮೌಜೊ ಮಧ್ಯಪ್ರಾಚ್ಯಕ್ಕೆ ಮನೆಗೆಲಸಗಳನ್ನು ಮಾಡಲು ತೆರಳುವ ಮಹಿಳೆಯರ ಶೋಷಣೆಯ ಕುರಿತು ಬರೆದಿದ್ದಾರೆ. ಪ್ರತಿಯೊಬ್ಬರೂ ಈ ಸಮಸ್ಯೆಯ ಬಗ್ಗೆ ಮಾತನಾಡಲು ಆರಂಭಿಸುವ ಬಹುಮೊದಲೇ ಈ ಕಾದಂಬರಿ ಪ್ರಕಟಗೊಂಡಿತ್ತು. ಅವರ ‘ದಿ ಬರ್ಗರ್’ಕಥೆ ಐರೀನ್ ಮತ್ತು ಶರ್ಮಿಳಾ ಎಂಬ ಇಬ್ಬರು ಶಾಲಾ ಗೆಳತಿಯರು ಮತ್ತು ಶರ್ಮಿಳಾಗೆ ಬೀಫ್ ಬರ್ಗರ್ ತಿನ್ನಿಸಿ ಆಕೆಯನ್ನು ‘ಮಲಿನ ’ಗೊಳಿಸಿದ ಬಗ್ಗೆ ಪುಟ್ಟ ಐರೀನ್ ಅನುಭವಿಸುವ ಪಾಪಪ್ರಜ್ಞೆಯ ಕುರಿತಾಗಿದೆ. ಅವರ ಇನ್ನೊಂದು ಕಥೆಯು ಇತರರು ಆ ಬಗ್ಗೆ ಮಾತನಾಡುವ ಬಹುಮೊದಲೇ ತಥಾಕಥಿತ ಗೋರಕ್ಷಕರು ದಲಿತ ಯುವಕನೋರ್ವನನ್ನು ಹೇಗೆ ಬೆದರಿಸಿದ್ದರು ಎನ್ನುವುದನ್ನು ವಿವರಿಸಿತ್ತು.

ಬಹುಶಃ ಮೌಜೊ ಭವಿಷ್ಯವನ್ನು ಸ್ಪಷ್ಟವಾಗಿ ಕಾಣುವ ಸಾಮರ್ಥ್ಯವನ್ನು ಹೊಂದಿದ್ದಾರೆ ಮತ್ತು ಇದು ಸಮಾಜದಲ್ಲಿಯ ಕಳವಳದ ವಿಷಯಗಳ ಕುರಿತು ಅವರ ಸಾಮಾಜಿಕ ಮತ್ತು ರಾಜಕೀಯ ಕ್ರಮಗಳಿಗೆ ಪ್ರೇರಣೆಯಾಗಿತ್ತು. ಸಮಾಜದೊಂದಿಗೆ ಅವರ ತೊಡಗುವಿಕೆಯು ಬಲಪಂಥೀಯರ ರೂಪದಲ್ಲಿ ನಮ್ಮ ಸಮಾಜದಲ್ಲಿ ಅಡಗಿರುವ ಅಪಾಯಗಳನ್ನು ಗಮನಿಸಲು ಅವರಿಗೆ ಅವಕಾಶ ಕಲ್ಪಿಸಿತ್ತು ಮತ್ತು ಈ ಶಕ್ತಿಗಳ ವಿರುದ್ಧ ಮಾತನಾಡಲು ಎಂದೂ ಹಿಂಜರಿಯುವುದಿಲ್ಲ ಎಂಬ ಧೈರ್ಯವನ್ನು ಅವರಿಗೆ ನೀಡಿತ್ತು ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ.

2015ರಲ್ಲಿ ವಿಚಾರವಾದಿ ಎಂ.ಎಂ.ಕಲಬುರ್ಗಿಯವರ ಹತ್ಯೆಯ ಬಳಿಕ ಅಭಿವ್ಯಕ್ತಿ ಸ್ವಾತಂತ್ರಕ್ಕಾಗಿ ಮೌಜೊ ತಳೆದಿದ್ದ ನಿಲುವನ್ನು ನೆನಪಿಸಿಕೊಳ್ಳಿ. ಸಾಹಿತಿಗಳು ದಮನದ ವಿರುದ್ಧ ಎದ್ದು ನಿಲ್ಲಬೇಕು ಎಂದು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಿಗೆ ಬರೆದಿದ್ದ ಪತ್ರದಲ್ಲಿ ಹೇಳಿದ್ದ ಮೌಜೊ, ಏಕಸಂಸ್ಕೃತಿಯ ಪ್ರತಿಪಾದಕರ ಅನೈತಿಕ ಪೊಲೀಸ್ಗಿರಿಯನ್ನು ಖಂಡಿಸಿದ್ದರು. 2016,ಜನವರಿಯಲ್ಲಿ ಗುಜರಾತಿನಲ್ಲಿ ಆಯೋಜಿಸಲಾಗಿದ್ದ ವಿಚಾರ ಸಂಕಿರಣವೊಂದರಲ್ಲಿ ಮಾಡಿದ ಭಾಷಣದಲ್ಲಿ ಮೌಜೊ ಬೆದರಿಕೆಗಳಿದ್ದರೂ ಸನಾತನ ಸಂಸ್ಥಾವನ್ನು ಸ್ಪಷ್ಟವಾದ ಶಬ್ದಗಳಲ್ಲಿ ಟೀಕಿಸಿದ್ದರು. 

2019ರ ಲೋಕಸಭಾ ಚುನಾವಣೆಯ ಮುನ್ನಾದಿನ ಅವರು ಫ್ಯಾಸಿಸ್ಟ್ ಆಡಳಿತವನ್ನು ಸೋಲಿಸುವಂತೆ ಜನತೆಗೆ ಕರೆ ನೀಡಿದ್ದರು. ಗೋವಾದಲ್ಲಿ ಸನಾತನ ಸಂಸ್ಥಾ ಮತ್ತು ಹಿಂದು ಜನಜಾಗ್ರತಿ ಸಮಿತಿಯ ಬಗ್ಗೆ ಎಲ್ಲರಿಗೂ ಗೊತ್ತು. ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಬಲಪಂಥೀಯ ಉಗ್ರವಾದವನ್ನು ಬೆಂಬಲಿಸುತ್ತಿರುವುದಕ್ಕಾಗಿ ಮತ್ತು ಅದರಲ್ಲಿ ಭಾಗಿಯಾಗಿರುತ್ತಿರುವುದಕ್ಕಾಗಿ ಅವುಗಳ ಚಟುವಟಿಕೆಗಳು ನಿಗಾದಲ್ಲಿವೆ. ಅವುಗಳಿಗೆ ಮುಂದುವರಿದಿರುವ ರಾಜಕೀಯ ಕೃಪಾಶ್ರಯವೂ ಎಲ್ಲರಿಗೂ ತಿಳಿದಿರುವ ವಿಷಯವೇ ಆಗಿದೆ.
 
ಬಲಪಂಥೀಯ ಉಗ್ರವಾದಕ್ಕೆ ತನ್ನ ತತ್ತ್ವಬದ್ಧ ವಿರೋಧಕ್ಕಾಗಿ ಮೌಜೊ ಅವರನ್ನು ಇಂತಹ ಸಂಘಟನೆಗಳು ತಮ್ಮ ಹಿಟ್ ಲಿಸ್ಟ್ನಲ್ಲಿ ಇರಿಸಿದ್ದವು ಎನ್ನುವುದು ನಂತರ ಬೆಳಕಿಗೆ ಬಂದಿತ್ತು‌ ಎಂದು ಲೇಖನದಲ್ಲಿ ಉಲ್ಲೇಖಿಸಲಾಗಿದೆ. ಕೋಮುವಾದದ ವಿರುದ್ಧ ಪ್ರಬಲ ಧ್ವನಿಯಾಗಿದ್ದ ಪತ್ರಕರ್ತೆ-ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆಯನ್ನು ನಡೆಸಿದ್ದ ಕರ್ನಾಟಕ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್)ವು ಈ ಸಂಘಟನೆಗಳೊಂದಿಗೆ ಗುರುತಿಸಿಕೊಂಡಿದ್ದ ಸುಮಾರು ಒಂದು ಡಝನ್ ಜನರನ್ನು ಬಂಧಿಸಿತ್ತು. 

ಲಂಕೇಶ್,ದಿ.ಗಿರೀಶ್ ಕಾರ್ನಾಡ್,ವಿಚಾರವಾದಿ ಕನ್ನಡ ಲೇಖಕ-ಅನುವಾದಕ ಕೆ.ಎಸ್.ಭಗವಾನ್,ಪತ್ರಕರ್ತ ನಿಖಿಲ್ ವಾಗ್ಳೆ,‌ ಮೌಜೊ ಮತ್ತು ಇತರರು ಸೇರಿದಂತೆ ವಿದ್ವಾಂಸರು, ಹೋರಾಟಗಾರರು ಮತ್ತು ಸಾಮಾಜಿಕ ಕಾರ್ಯಕರ್ತರ ಹಿಟ್ ಲಿಸ್ಟ್ ಅನ್ನು ಉಗ್ರವಾದಿಗಳು ಹೊಂದಿದ್ದರು ಎನ್ನುವುದನ್ನು ಕರ್ನಾಟಕ ಎಟಿಎಸ್ ಪತ್ತೆ ಹಚ್ಚಿತ್ತು.

ಆದರೆ ಇದು ಮೌಜೊ ಬಲಪಂಥೀಯ ಉಗ್ರವಾದದ ವಿರುದ್ಧ ಮಾತನಾಡುವುದನ್ನು ತಡೆದಿರಲಿಲ್ಲ,ಇತರರನ್ನೂ ತಡೆದಿರಲಿಲ್ಲ. ಉದಾಹರಣೆಗೆ ಈ ಹಿಟ್ ಲಿಸ್ಟ್ ಬಹಿರಂಗಗೊಂಡ ನಂತರ ವಾಗ್ಳೆಯವರು, ಭಾರತ ಸರಕಾರವು ಸಿಮಿ ಅಥವಾ ಝಾಕಿರ್ ನಾಯ್ಕರ ಸಂಸ್ಥೆಗಳನ್ನು ನಿಷೇಧಿಸಬಹುದಾದರೆ ಹಿಂದುತ್ವ ಉಗ್ರವಾದಿ ಗುಂಪುಗಳನ್ನು ನಿಷೇಧಿಸಲು ಅದಕ್ಕೇಕೆ ಸಾಧ್ಯವಿಲ್ಲ? ಹಿಂದು ಗುಂಪು ಎಂಬ ಕಾರಣಕ್ಕೆ ಸಂಘಟನೆಯು ವಿನಾಯಿತಿಯನ್ನು ಅನುಭವಿಸುತ್ತಿದೆಯೇ ಎಂದು ಪ್ರಶ್ನಿಸಿದ್ದರು.

ಈ ಹಿಟ್ ಲಿಸ್ಟ್ನಲ್ಲಿದ್ದ ಇತರರಂತೆ ಮೌಜೊ ತಾನು ಬಯಸದಿದ್ದರೂ ದಿನದ 24 ಗಂಟೆಯೂ ಪೊಲೀಸ್ ರಕ್ಷಣೆಯನ್ನು ಹೊಂದಿದ್ದರು. ಭಾರತದಲ್ಲಿಯ ‘ಡೆತ್ ಸ್ಕ್ವಾಡ್’ಗಳು ಹಿಟ್ ಲಿಸ್ಟ್ ಗಳನ್ನು ಹೊಂದಿವೆ ಎಂಬ ಆಘಾತವು ಕ್ರಮೇಣ ಕರಗಿರಬಹುದು. ಆದಾಗ್ಯೂ ಹಿಂಸಾತ್ಮಕ ಅಥವಾ ಉಗ್ರವಾದಿ ಗುಂಪುಗಳು ಉತ್ತಮ ಜಗತ್ತಿನ ನಿರ್ಮಾಣಕ್ಕಾಗಿ ಶ್ರಮಿಸುತ್ತಿರುವ ಲೇಖಕರು,ಬುದ್ಧಿಜೀವಿಗಳು ಮತ್ತು ಹೋರಾಟಗಾರರನ್ನು ಗುರಿಯಾಗಿಸಿಕೊಳ್ಳಬಲ್ಲವು ಎಂಬ ಪರಿಕಲ್ಪನೆಯು ಈಗಲೂ ಸಮಾಜಕ್ಕೆ ಬೆದರಿಕೆಯಾಗಿದೆ.
                           
ನಮ್ಮ ದೇಶದಲ್ಲಿ ಬಹುಸಂಖ್ಯಾತವಾದವು ಸಾಮಾನ್ಯವಾಗುತ್ತಿರಬಹುದು, ಆದ್ದರಿಂದ ನಾವು ಪರಿಸ್ಥಿತಿಯ ಗಂಭೀರತೆಯನ್ನು ಕಡೆಗಣಿಸಬಾರದು. ಹಾಗೆ ಮಾಡುವುದು ನಮ್ಮನ್ನೇ ಗಂಡಾಂತರಕ್ಕೆ ಸಿಲುಕಿಸುತ್ತದೆ. ಆಕ್ರಮಣಕಾರಿ ಬಹುಸಂಖ್ಯಾತವಾದವು ಬಲಗೊಳ್ಳುತ್ತಿರುವುದರೊಂದಿಗೆ ನಮ್ಮ ಸಾಮಾಜಿಕ ಸ್ವರೂಪವು ಹದಗೆಡುತ್ತಿರುವುದು ಹರ್ಯಾಣದ ಗುರ್ಗಾಂವ್ ನಲ್ಲಿ ಮುಸ್ಲಿಮರ ನಮಾಝ್ ಅನ್ನು ತಡೆಯುವ ಇತ್ತೀಚಿನ ಪ್ರಯತ್ನಗಳಿಂದ ಸ್ಪಷ್ಟವಾಗಿದೆ. ಪೊಲೀಸರು ಮತ್ತು ಚುನಾಯಿತ ಜನಪ್ರತಿನಿಧಿಗಳಿಗೆ ಬಲಪಂಥೀಯರ ಗೂಂಡಾಗಿರಿಯನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ ಅಥವಾ ಅದನ್ನು ಬಹಿರಂಗವಾಗಿ ಬೆಂಬಲಿಸಲೂ ಆಗುತ್ತಿಲ್ಲ ಎನ್ನುವುದನ್ನು ನಾವು ನೋಡುತ್ತಿದ್ದೇವೆ.

ಸನಾತನ ಸಂಸ್ಥಾದಂತಹ ಸಂಘಟನೆಗಳ ಕಾರ್ಯಕರ್ತರು ಮತ್ತು ಬೆಂಬಲಿಗರು ಮಹಾರಾಷ್ಟ್ರದ ಮುಂಬೈ,ಪುಣೆ,ಸತಾರಾ ಮತ್ತು ನಾಲಾಸೋಪರಾ(ಮುಂಬೈ)ಗಳಲ್ಲಿ ಸ್ಫೋಟಗಳನ್ನು ನಡೆಸುವ ಸಂಚಿನಲ್ಲಿ ಭಾಗಿಯಾಗಿದ್ದರೆಂಬ ಆರೋಪಗಳಿಂದಾಗಿ ಚಿತ್ರಣವು ಅಸ್ಪಷ್ಟವಾಗಿದೆ. ಮಹಾರಾಷ್ಟ್ರ ಭಯೋತ್ಪಾದನೆ ನಿಗ್ರಹ ಘಟಕವು ನಾಲಾಸೋಪರಾದಲ್ಲಿಯ ವೈಭವ ರಾವುತ್ ನಿವಾಸದಿಂದ ಮತ್ತು ಆತನ ಸಹವರ್ತಿಗಳಿಂದ ಬಾಂಬ್ಗಳು,ಜಿಲೇಟಿನ್ ಕಡ್ಡಿಗಳು, ಡಿಟೋನೇಟರ್ಗಳು, ವೃತ್ತಪತ್ರಿಕೆಯಲ್ಲಿ ಸುತ್ತಿಡಲಾಗಿದ್ದ ನಿಗೂಢ ಬಿಳಿಯ ಹುಡಿ ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದು ವರದಿಯಾಗಿತ್ತು.
  
ಸ್ವಾತಂತ್ರ ದಿನ,ಈದ್ ಮತ್ತು ಮರಾಠಾ ಆಂದೋಲನಗಳನ್ನು ಗುರಿಯಾಗಿಸಿಕೊಂಡು ಇಂತಹ ಚಟುವಟಿಕೆಗಳನ್ನು ನಡೆಸಲು ಅವರು ಯೋಜಿಸಿದ್ದರು ಎನ್ನುವುದು ಆತಂಕಕಾರಿಯಾಗಿದೆ. ಆದರೆ ಇದು ಮೊದಲ ಸಲವೇನಲ್ಲ. 2006ರಲ್ಲಿ ಮಹಾರಾಷ್ಟ್ರದ ಪನವೇಲ್ ಮತ್ತು ಥಾಣೆಗಳಲ್ಲಿ ಬಾಂಬ್ ಸ್ಫೋಟಗಳು ಸಂಭವಿಸುವುದರೊಂದಿಗೆ ಈ ಸಂಘಟನೆಗಳು ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದವು. ಈ ಸ್ಫೋಟಗಳಿಗೆ ಇಸ್ಲಾಮಿಕ್ ಉಗ್ರರನ್ನು ಹೊಣೆಯಾಗಿಸಲಾಗಿತ್ತು. ಈ ಸಮಯದಲ್ಲಿ ಹೇಮಂತ ಕರ್ಕರೆ ಅವರು ಮಹಾರಾಷ್ಟ್ರ ಎಟಿಎಸ್ನ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡಿದ್ದರು. ವಿವರವಾದ ತನಿಖೆಯ ಬಳಿಕ ಅವರು ಈ ಬಲಪಂಥೀಯ ಸಂಘಟನೆಗಳನ್ನು ನಿಷೇಧಿಸುವಂತೆ ಶಿಫಾರಸು ಮಾಡಿದ್ದರು ಎಂದು ಲೇಖನದಲ್ಲಿ ಬರೆಯಲಾಗಿದೆ.
 
ಮಂಗೇಶ ನಿಕಂ, ಹರಿಭಾವು ದಿವೇಕರ್ ಮತ್ತಿತರರು ಈ ಹಿಂಸಾತ್ಮಕ ಕೃತ್ಯಗಳಲ್ಲಿ ಭಾಗಿಯಾಗಿದ್ದರು ಎನ್ನುವುದನ್ನು ಎಟಿಎಸ್ ತನಿಖೆಯಲ್ಲಿ ಕಂಡುಕೊಂಡಿತ್ತು. 2009ರಲ್ಲಿ ಈ ಸಂಘಟನೆಗಳ ಇಬ್ಬರು ಕಾರ್ಯಕರ್ತರಾದ ಮಲ್ಗೊಂಡ ಪಾಟೀಲ ಮತ್ತು ಯೋಗೇಶ ನಾಯ್ಕೊ ಅವರು ಗೋವಾದ ಮಡಗಾಂವ್ನಲ್ಲಿ ಸ್ಕೂಟರ್ನಲ್ಲಿ ಬಾಂಬ್ ಸಾಗಿಸುತ್ತಿದ್ದಾಗ ಅದು ಸ್ಫೋಟಗೊಂಡು ಮೃತಪಟ್ಟಿದ್ದರು. ಅವರು ಸ್ಥಳೀಯವಾಗಿ ಜನಪ್ರಿಯವಾಗಿರುವ ನರಕಾಸುರ ಕಾರ್ಯಕ್ರಮವು ನಡೆಯಲಿದ್ದ ಸ್ಥಳಕ್ಕೆ ಬಾಂಬ್ ಸಾಗಿಸುತ್ತಿದ್ದರು ಎನ್ನಲಾಗಿತ್ತು. ಪಾಟೀಲ ಮತ್ತು ನಾಯ್ಕಿ ತಮ್ಮ ಯೋಜನೆಯಲ್ಲಿ ಯಶಸ್ಸು ಸಾಧಿಸಿದ್ದರೆ ಹಲವಾರು ಅಮಾಯಕರು ಬಲಿಯಾಗುತ್ತಿದ್ದರು. ನರಕಾಸುರ ಉತ್ಸವವು ಕೆಟ್ಟದ್ದನ್ನು ವೈಭವೀಕರಿಸುತ್ತಿದೆ ಎಂದು ಸನಾತನ ಸಂಸ್ಥಾ ಅದರ ವಿರುದ್ಧ ಅಭಿಯಾನವನ್ನು ನಡೆಸುತ್ತಿತ್ತು.

ಸನಾತನ ಸಂಸ್ಥಾ ಮೃತ ಕಾರ್ಯಕರ್ತರೊಂದಿಗೆ ತನ್ನ ಸಂಬಂಧವನ್ನು ನಿರಾಕರಿಸಿತ್ತು. ‘ಸನಾತನ ಸಂಸ್ಥಾದ ಕಾರ್ಯಕರ್ತರು ಅದು ಹೇಗೆ ಆಗಾಗ್ಗೆ ಒಂದೇ ರೀತಿಯ ತಪ್ಪುದಾರಿಯಲ್ಲಿ ಸಾಗುತ್ತಾರೆ? ಈ ಮನವರಿಕೆಯಾಗದ ವಾದವನ್ನು ಅದು ಹೇಗೆ ಇದ್ದಕ್ಕಿದ್ದಂತೆ ಒಪ್ಪಿಕೊಳ್ಳಲಾಗುತ್ತದೆ ಮತ್ತು ಸಂಸ್ಥಾ ಪಾರಾಗುತ್ತದೆ? ಕಟ್ಟುನಿಟ್ಟಿನ ರಹಸ್ಯ ಸಂಘಟನೆಯಾಗಿರುವ ಸನಾತನದ ಕೆಲವು ರಾಕ್ಷಸ ಕಾರ್ಯಕರ್ತರು ಸಂಸ್ಥಾದಲ್ಲಿನ ಹಿರಿಯ ವ್ಯಕ್ತಿಗಳ ಅರಿವಿಗೆ ಬಾರದಂತೆ ಅಥವಾ ಅವರ ಪಾಲ್ಗೊಳ್ಳುವಿಕೆ ಇಲ್ಲದೆ ಸ್ವತಂತ್ರವಾಗಿ ಇಂತಹ ಸ್ಫೋಟಗಳನ್ನು ನಡೆಸುತ್ತಾರೆ ಎನ್ನುವುದನ್ನು ನಂಬುವುದಾದರೂ ಹೇಗೆ ’ಎಂದು ಆಗ ವಿಚಾರವಾದಿ ಡಾ.ನರೇಂದ್ರ ದಾಭೋಲ್ಕರ್ ಅವರು ಪ್ರಶ್ನಿಸಿದ್ದರು.

ವರದಿಯಂತೆ 2012ರಲ್ಲಿ ಹಿಂದು ರಾಷ್ಟ್ರ ನಿರ್ಮಾಣಕ್ಕಾಗಿ ಸನಾತನ ಸಂಸ್ಥಾ ಅಖಿಲ ಭಾರತ ಹಿಂದು ಸಮಾವೇಶವನ್ನು ನಡೆಸಿದ್ದು, ಬಳಿಕ ಇದು ವಾರ್ಷಿಕ ಕಾರ್ಯಕ್ರಮವಾಗಿದೆ. ಕೇವಲ ಆರು ತಿಂಗಳ ಹಿಂದೆ ವಿಷಯ ನೀತಿಗಳನ್ನು ಉಲ್ಲಂಘಿಸಿದ್ದಕ್ಕಾಗಿ ಫೇಸ್ಬುಕ್ ಅದನ್ನು ನಿಷೇಧಿಸಿದಾಗಲೂ ಸನಾತನ ಸಂಸ್ಥಾ ಸುದ್ದಿಯಲ್ಲಿತ್ತು.(ಆದಾಗ್ಯೂ ಅದು ತನ್ನ ಹೆಚ್ಚಿನ ಪೇಜ್ಗಳನ್ನು ಆನ್ಲೈನ್ನಲ್ಲಿ ತಿಂಗಳುಗಟ್ಟಲೆ ಕಾಲ ಉಳಿಸಿಕೊಂಡಿತ್ತು). ಸನಾತನ ಸಂಸ್ಥಾವನ್ನು ನಿಷೇಧಿಸುವ ನಿರ್ಧಾರ ಮತ್ತು ನಿಷೇಧವನ್ನು ಜಾರಿಗೊಳಿಸದಿರುವುದರ ನಡುವಿನ ವಿರಾಮಕ್ಕೆ ರಾಜಕೀಯ ಒತ್ತಡ ಕಾರಣವೆನ್ನಲಾಗಿತ್ತು.

ಬಹುಶಃ ಮೌಜೊ ಅವರು ಸಾಹಿತ್ಯ ಅಕಾಡೆಮಿಯ ಅಕ್ಷರೋತ್ಸವದಲ್ಲಿ ಮಾಡಿದ್ದ ಭಾಷಣವು ಮರುನೆನಪಿಸಿಕೊಳ್ಳಲು ಅರ್ಹವಾಗಿದೆ. ನಮ್ಮ ಮೌನವು ಹೇಗೆ ಸಮ್ಮತಿಯನ್ನು ಸೂಚಿಸುತ್ತದೆ ಮತ್ತು ಬಲಪಂಥೀಯ ವಾದವನ್ನು ಉತ್ತೇಜಿಸುತ್ತದೆ ಎನ್ನುವುದನ್ನು ಬೆಟ್ಟು ಮಾಡಿದ್ದ ಅವರು, ಪ್ರತಿಯೊಂದೂ ಧ್ವನಿಯು ಮುಖ್ಯವಾಗಿದೆ ಮತ್ತು ನಾವು ವೌನವನ್ನು ಮುರಿಯುವ ಅಗತ್ಯವಿದೆ ಎಂದು ಹೇಳಿದ್ದರು.

ಕೃಪೆ: Newsclick.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News