ಕುಕ್ಕುಟ ಹತ್ಯಾ ಕಾಯ್ದೆ ಜಾರಿಗೆ ಬರಲಿ!

Update: 2021-12-18 19:30 GMT

 ‘ಮೊಟ್ಟೆ ...ಮೊಟ್ಟೆ...ಮೊಟ್ಟೆ...ಕೆಟ್ಟೆ ಕೆಟ್ಟೆ ಕೆಟ್ಟೆ’ ಎಂದು ಶ್ರೀ ಶ್ರೀ ಕುಕ್ಕುಟಾನಂದ ಸ್ವಾಮೀಜಿಗಳು ವಿಧಾನಸೌಧದ ಮುಂದೆ ಧರಣಿ ಕೂತಿರುವುದು ನೋಡಿ, ಪತ್ರಕರ್ತ ಎಂಜಲು ಕಾಸಿ ರೋಮಾಂಚನಗೊಂಡು ಅತ್ತ ಧಾವಿಸಿ, ಅವರ ಪಾದರವಿಂದಕ್ಕೆ ಬಿದ್ದ. ಅವರು ಕಾಸಿಯ ತಲೆಗೆ ಮೊಟಕಿದರು. ಕೃತಾರ್ಥನಾದ ಪತ್ರಕರ್ತ ಕಾಸಿ ಅವರ ಪಾದದ ಬುಡದಲ್ಲಿ ಕುಕ್ಕುಟ ಭಂಗಿಯಲ್ಲಿ ಕೂತು ಪ್ರಶ್ನೆಗೆ ಶುರು ಹಚ್ಚಿದ.

‘‘ಸ್ವಾಮೀಜಿಗಳೇ, ಮಕ್ಕಳಿಗೆ ಮೊಟ್ಟೆ ಕೊಟ್ಟರೆ ನಿಮಗೇನು ತೊಂದರೆ?’’ ‘‘ನಮ್ಮ ಮಕ್ಕಳ ಜಾತಿ ಕೆಡುತ್ತದೆ’’ ಸ್ವಾಮೀಜಿಗಳು ಒಂದೇ ವಾಕ್ಯದಲ್ಲಿ ಮುಗಿಸಿದರು.
‘‘ಸ್ವಾಮೀಜಿಗಳೇ ನಿಮಗೆ ಮದುವೆಯೇ ಆಗಿಲ್ಲ...ಮಕ್ಕಳೆಲ್ಲಿಂದ ಬಂತು? ’’ ಕಾಸಿ ಅರ್ಥವಾಗದೆ ಕೇಳಿದ.
‘‘ನಮ್ಮ ಮಕ್ಕಳು ಎಂದರೆ ನಮ್ಮ ಜಾತಿಯ ಮಕ್ಕಳ ಜಾತಿ ಕೆಡುತ್ತದೆ...’’
‘‘ಆದರೆ ನಿಮ್ಮ ಜಾತಿ ಮಕ್ಕಳು ಸರಕಾರಿ ಶಾಲೆಗಳಿಗೆ ಹೋಗುತ್ತಾರೆಯೇ, ಅವರೆಲ್ಲ ಇಂಗ್ಲಿಷ್ ಮೀಡಿಯಂ ಶಾಲೆಗೆ ತಾನೇ ಹೋಗುವುದು...’’ ಕಾಸಿ ಮತ್ತೊಂದು ಪ್ರಶ್ನೆ ಒಗೆದ.
‘‘ನೋಡಿ...ನಮ್ಮ ಕುಕ್ಕುಟೇಶ್ವರ ಮಠಕ್ಕೆ ಕುಕ್ಕುಟ ಅತ್ಯಂತ ಪವಿತ್ರವಾದುದು...’’ ಸ್ವಾಮೀಜಿ ವಿಷಯಾಂತರ ಮಾಡಿದರು.
‘‘ಪವಿತ್ರವಾದದ್ದನ್ನು ತಿನ್ನದೇ ಅಪವಿತ್ರವಾದುದನ್ನು ಯಾರಾದರೂ ತಿನ್ನುತ್ತಾರಾ ಸ್ವಾಮೀಜಿ’’ ಕಾಸಿ ಸ್ವಾಮೀಜಿಗಳ ಹಿಂದೆ ಬಿದ್ದ.

‘‘ನೋಡಿ...ಎಲ್ಲರೂ ಮೊಟ್ಟೆ ತಿಂದರೆ ಮುಂದೆ ಕೋಳಿಯ ಸಂಖ್ಯೆಯೇ ಇರುವುದಿಲ್ಲ. ದೇಶದಲ್ಲಿ ವ್ಯಾಪಕ ಕೋಳಿ ಕಳ್ಳತನ, ಮೊಟ್ಟೆ ಕಳ್ಳತನವಾಗುತ್ತಿದೆ. ಆದುದರಿಂದ, ಕೋಳಿಗಳನ್ನು ಉಳಿಸುವುದಕ್ಕಾಗಿ ಮೊಟ್ಟೆಗಳನ್ನು ಉಳಿಸಬೇಕಾಗಿದೆ. ಇಲ್ಲದೇ ಇದ್ದರೆ ಮುಂದಿನ ದಿನಗಳಲ್ಲಿ ಕೋಳಿಗಳನ್ನು ನಾವು ಚಿತ್ರದಲ್ಲಿ ನೋಡಬೇಕಷ್ಟೇ...’’ ಸ್ವಾಮೀಜಿಗಳು ತಮ್ಮ ಹೇಳಿಕೆಗೆ ಇನ್ನಷ್ಟು ಬದ್ಧರಾದರು. ‘‘ಹಾಗಾದರೆ ಕೋಳಿಗಳು ಇಟ್ಟ ಮೊಟ್ಟೆಯನ್ನೆಲ್ಲ ಏನು ಮಾಡುವುದು... ? ’’ ಕಾಸಿ ಅರ್ಥವಾಗದೆ ಕೇಳಿದ.
 ‘‘ಗೋಶಾಲೆಗಳನ್ನು ತೆರೆದ ಹಾಗೆಯೇ ಮೊಟ್ಟೆಗಳಿಗೆ ಕಾವು ಕೊಟ್ಟು ಮರಿ ಮಾಡುವ ಹೊಣೆಗಾರಿಕೆಗಳನ್ನು ಸರಕಾರವೇ ವಹಿಸಬೇಕು. ಪ್ರತಿ ಜಿಲ್ಲೆಗಳಲ್ಲಿ ಎರಡು ಕಾವು ಶಾಲೆಗಳಿರಬೇಕು. ಮೊಟ್ಟೆಗಳನ್ನು ಆಮ್ಲೆಟ್ ಮಾಡುವವರಿಂದ ರಕ್ಷಿಸಿ ಈ ಕಾವು ಶಾಲೆಗಳಿಗೆ ಒಪ್ಪಿಸಬೇಕು. ಮೊಟ್ಟೆ ಇಡುವ ಹೆಂಟೆಗಳನ್ನು ಸಾಕುವ ಹೊಣೆಗಾರಿಕೆಯನ್ನು ಸರಕಾರವೇ ವಹಿಸಬೇಕು. ಕುಕ್ಕುಟ ಮಾತೆಯ ರಕ್ಷಣೆಗಾಗಿ ಕುಕ್ಕುಟ ಶಾಲೆಗಳನ್ನು ನಿರ್ಮಿಸಬೇಕು. ಹಾಗೆಯೇ ನಮ್ಮ ಮಠದ ನೇತೃತ್ವದಲ್ಲಿ ಕುಕ್ಕುಟ ರಕ್ಷಣಾ ವೇದಿಕೆಯನ್ನು ಮಾಡಲಿದ್ದೇವೆ. ವಾಹನಗಳಲ್ಲಿ ಕುಕ್ಕುಟಗಳನ್ನು ಸಾಗಿಸುವವರನ್ನು ತಡೆಯಲಿದ್ದೇವೆ. ಮೊಟ್ಟೆಗಳೆಂದರೆ, ಕುಕ್ಕುಟ ಮಾತೆಯ ಭ್ರೂಣ. ಇದು ಅಮಾನವೀಯ. ಮೊಟ್ಟೆ ಕುಕ್ಕುಟ ಸಮೂಹದ ಹಕ್ಕು. ಅದರ ಮರಿಗಳನ್ನು ಕುಕ್ಕುಟ ಮಾತೆಯಿಂದ ಬೇರ್ಪಡಿಸಿ ತಿನ್ನುವುದು ಅಮಾನವೀಯವಾಗಿದೆ. ಆದುದರಿಂದ ತಕ್ಷಣ ಕುಕ್ಕುಟ ಹತ್ಯಾ ಕಾಯ್ದೆಯನ್ನು ಜಾರಿಗೊಳಿಸಬೇಕು ಎಂದು ಸರಕಾರವನ್ನು ಒತ್ತಾಯಿಸುತ್ತಿದ್ದೇವೆ’’ ಸ್ವಾಮೀಜಿ ಒಂದೇ ಸಮನೆ ಭಾಷಣಗೈದರು.
ಕಾಸಿಗೆ ಹೌದೆನಿಸಿತು. ಪವಿತ್ರವಾದ ಕುಕ್ಕುಟವನ್ನು ಈ ರೀತಿಯಾಗಿ ನಡೆಸಿಕೊಳ್ಳುವುದು ಎಷ್ಟು ಸರಿ? ‘‘ಸ್ವಾಮೀಜಿ ಚಿಕನ್ ಅಂಗಡಿಗಳಲ್ಲಿ ಹಿಂದುತ್ವದ ಪ್ರಕಾರ, ಝಟ್ಕಾ ಕಟ್ಟು ಮಾಡಿದರೆ ಕುಕ್ಕುಟ ಸೇವಿಸಬಹುದೆ? ’’
‘‘ಕುಕ್ಕುಟವನ್ನು ಕಟ್ ಮಾಡಿದವರನ್ನು ನಾವು ಕಟ್ ಮಾಡಲಿದ್ದೇವೆ. ಕೋಳಿ ಸಾಕುವವರು ಯಾವ ಕಾರಣಕ್ಕೂ ಎಳೆಕೋಳಿಗಳನ್ನು ಮಾರಬಾರದು. ಹಾಗೆಯೇ ವಯಸ್ಸಾದ ಕುಕ್ಕುಟಗಳ ಹೊಣೆಗಾರಿಕೆಗಳನ್ನು ಸರಕಾರವೇ ತೆಗೆದುಕೊಳ್ಳಬೇಕು. ಕೋಳಿಗೊಂದು ನ್ಯಾಯ, ಗೋವಿಗೊಂದು ನ್ಯಾಯ ಸಲ್ಲ...’’
‘‘ಸಾರ್, ನಿಮ್ಮದು ಇನ್ನೇನೇನು ಬೇಡಿಕೆಗಳಿವೆ? ’’ ಕಾಸಿ ಇನ್ನಷ್ಟು ಕುತೂಹಲದಿಂದ ಕೇಳಿದ.
‘‘ಮುಖ್ಯವಾಗಿ ಸೊನ್ನೆಯನ್ನು ಮೊಟ್ಟೆ ಎಂದು ಕರೆಯಬಾರದು. ಹಾಗೆಯೇ ಶಾಲೆಗಳಲ್ಲಿ ಪರೀಕ್ಷೆಯಲ್ಲಿ ಮಕ್ಕಳಿಗೆ ಮೊಟ್ಟೆ ಅಂಕ ನೀಡಿದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಬೋಳು ತಲೆಯವರನ್ನು ಮೊಟ್ಟೆ ಎಂದು ಕರೆದು ಕುಕ್ಕುಟ ಸಮುದಾಯಕ್ಕೆ ಅವಮಾನಿಸುವವರನ್ನೂ ಕುಕ್ಕುಟ ರಕ್ಷಣಾ ಕಾಯ್ದೆಯಡಿಯಲ್ಲಿ ಬಂಧಿಸಬೇಕು...ರಾಜ್ಯದ ಎಲ್ಲ ಮೊಟ್ಟೆ ಇಡುವ ಕುಕ್ಕುಟಗಳಿಗೆ ಮೊಟ್ಟೆ ಭತ್ತೆಯನ್ನು ನೀಡಬೇಕು. ಹಾಗೆಯೇ ರಾಜ್ಯದಲ್ಲಿ ಕುಕ್ಕುಟ ದಿನವನ್ನು ಆಚರಿಸಿ , ಅಂದು ಸಾಮೂಹಿಕವಾಗಿ ಕುಕ್ಕುಟ ಪೂಜೆ ಮಾಡಬೇಕು. ಹಾಗೆಯೇ ಕೋಳಿಕಟ್ಟವನ್ನು ಸಂಪೂರ್ಣ ನಿಷೇಧಿಸಬೇಕು. ಹಾಗೆಯೇ ಸಣ್ಣ ಪುಟ್ಟ ಜಗಳಗಳನ್ನು ಕೋಳಿ ಜಗಳ ಎಂದು ಕರೆದು ಅವಮಾನಿಸುವುದು ನಿಲ್ಲಬೇಕು...’’ ಕುಕ್ಕುಟಾನಂದ ಸ್ವಾಮೀಜಿಯವರು ತಮ್ಮ ಬೇಡಿಕೆಯ ಪಟ್ಟಿಯನ್ನು ಮುಂದಿಟ್ಟರು.
‘‘ಇನ್ನೂ ಏನಾದರೂ ಬೇಡಿಕೆ ಇದೆಯೆ ಸ್ವಾಮೀಜಿಗಳೇ?’’ ಕಾಸಿ ಕೇಳಿದ.
‘‘ಕುಕ್ಕುಟವನ್ನು ವಿದೇಶಗಳಿಗೆ ರಫ್ತು ಮಾಡುವ ಮೂಲಕ ಗೋವುಗಳಿಗೆ ನೀಡಿದ ವಿದೇಶಿ ಗೌರವವನ್ನು ಕುಕ್ಕುಟಕ್ಕೂ ನೀಡುವಂತಾಗಬೇಕು...ವಿದೇಶಿ ರಫ್ತಿನ ಹೊಣೆಯನ್ನು ನಮ್ಮದೇ ಕುಕ್ಕುಟ ಮಠ ವಹಿಸಿಕೊಳ್ಳಲು ಸಿದ್ಧವಿದೆ...’’
ಕಾಸಿಗೆ ಎಲ್ಲವೂ ಅರ್ಥವಾಯಿತು. ಜೈ ಕುಕ್ಕುಟೇಶ್ವರ ಎಂದವನೇ ಅಲ್ಲಿಂದ ಪತ್ರಿಕಾ ಕಚೇರಿಯತ್ತ ಧಾವಿಸಿದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News