ಕಾರ್ಯಕ್ರಮಗಳ ಸರಣಿ ರದ್ದತಿ ಬಳಿಕ ಮುಂಬೈನಲ್ಲಿ ಕಾರ್ಯಕ್ರಮ ನಡೆಸಿದ ಮುನವ್ವರ್‌ ಫಾರೂಕಿ

Update: 2021-12-20 10:25 GMT

ಮುಂಬೈ, ಡಿ.20: ದೇಶಾದ್ಯಂತ ಹತ್ತಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ರದ್ದುಪಡಿಸಿದ ನಂತರ, ಕಾಂಗ್ರೆಸ್‌ನ ಅಖಿಲ ಭಾರತ ವೃತ್ತಿಪರ ಕಾಂಗ್ರೆಸ್ (ಎಐಪಿಸಿ) ವಿಭಾಗದ ಸಹಯೋಗದೊಂದಿಗೆ ರವಿವಾರದಂದು ಮುಂಬೈನ ವೈ ಬಿ ಚವಾನ್ ಸಭಾಂಗಣದಲ್ಲಿ ಸ್ಟ್ಯಾಂಡ್-ಅಪ್ ಕಾಮಿಡಿಯನ್ ಮುನವ್ವರ್ ಫಾರೂಕಿ ಅವರು ಕಾರ್ಯಕ್ರಮವನ್ನು ನಡೆಸಿದ್ದಾರೆ ಎಂದು indianexpress.com ವರದಿ ಮಾಡಿದೆ.

"ಕಾರ್ಯಕ್ರಮದಲ್ಲಿ ಯಾವುದೇ ಗೊಂದಲ ಉಂಟಾಗಿಲ್ಲ" ಎಂದು ಎಐಪಿಸಿ ಅಧ್ಯಕ್ಷ ಮ್ಯಾಥ್ಯೂ ಆಂಟನಿ ಹೇಳಿದ್ದಾರೆ. "ಸಂವಿಧಾನದ ಮೌಲ್ಯಗಳು, ವ್ಯಕ್ತಿಯ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅವರು ಅನುಭವಿಸಲು ಬಯಸುವ ಮನರಂಜನೆಯನ್ನು ನಿರ್ಧರಿಸುವ ಆಯ್ಕೆಯ ಸ್ವಾತಂತ್ರ್ಯದ ಮೌಲ್ಯಗಳನ್ನು ನಂಬುವ ಎಲ್ಲರಿಗೂ ಪ್ರಾಮಾಣಿಕ ಧನ್ಯವಾದಗಳು" ಎಂದು ಆಂಟನಿ ಹೇಳಿದ್ದಾರೆ. ಕಾರ್ಯಕ್ರಮಕ್ಕೆ ಪೊಲೀಸ್‌ ಭದ್ರತೆಯನ್ನು ಒದಗಿಸಲಾಗಿತ್ತು.

ಅಕ್ಟೋಬರ್‌ನಲ್ಲಿ, ಮುಂಬೈನಲ್ಲಿ ಫಾರೂಕಿ ನಡೆಸಬೇಕಿದ್ದ ಮೂರು ಪ್ರದರ್ಶನಗಳನ್ನು ಭಜರಂಗದಳ ಸದಸ್ಯರು ಸ್ಥಳದ ಮಾಲೀಕರಿಗೆ ಬೆದರಿಕೆ ಹಾಕಿದ ನಂತರ ರದ್ದುಗೊಳಿಸಲಾಗಿತ್ತು. ಈ ಸಂದರ್ಭಗಳಲ್ಲಿ ಪೊಲೀಸರು ಸೂಕ್ತ ಭದ್ರತೆಯ ಭರವಸೆ ನೀಡಿರಲಿಲ್ಲ ಎನ್ನಲಾಗಿತ್ತು.

ರವಿವಾರ ವೈಬಿ ಆಡಿಟೋರಿಯಂ ಹೊರಗೆ ಸಂಪೂರ್ಣ ಪೊಲೀಸ್ ಭದ್ರತೆ ಒದಗಿಸಲಾಗಿತ್ತು ಎಂದ ಡಿಸಿಪಿ (ವಲಯ 1) ಹರಿ ಬಾಲಾಜಿ ಎನ್, "ಯಾವುದೇ ಸಮಸ್ಯೆಗಳು ಉಂಟಾಗಿಲ್ಲ" ಎಂದು ಹೇಳಿದ್ದಾರೆ.

“ನಾವು ಮುನವ್ವರ್ ಅವರನ್ನು ರಾಜಕೀಯ ನಿಲುವಾಗಿ ಬೆಂಬಲಿಸಲು ಬಯಸಿದ್ದೇವೆಯೇ ಹೊರತು ವೈಯಕ್ತಿಕವಾಗಿ ಅಲ್ಲ. ಯಾವುದೇ ಕಲಾವಿದ ಅಥವಾ ವ್ಯಕ್ತಿ ಭಯವಿಲ್ಲದೆ ಸೃಜನಶೀಲ ಸ್ವಾತಂತ್ರ್ಯವನ್ನು ಹೊಂದಿರಬೇಕು" ಎಂದು ಎಐಪಿಸಿ ನಾಯಕ ಹೇಳಿದರು. "ವ್ಯವಸ್ಥೆಯ ನಿರ್ದಯ ಟೀಕೆ" ಅಗತ್ಯವಿದೆ ಏಕೆಂದರೆ ಇದು ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. "ಆದ್ದರಿಂದ ನಾವು  ಈ ಸಂದರ್ಭದಲ್ಲಿ ಮುನವ್ವರ್ ಅವರನ್ನು ಬೆಂಬಲಿಸುವುದು ಮುಖ್ಯವಾಗಿತ್ತು" ಎಂದು ಆಂಟನಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News