ಮಲ್ಯ, ಚೋಕ್ಸಿ, ನೀರವ್ ಮೋದಿ ಆಸ್ತಿಗಳ ಮಾರಾಟದಿಂದ 13,109.17 ಕೋ.ರೂ.ಸಾಲ ವಸೂಲಿ: ವಿತ್ತಸಚಿವೆ
ಹೊಸದಿಲ್ಲಿ,ಡಿ.20: ಜಾರಿ ನಿರ್ದೇಶನಾಲಯವು ಒದಗಿಸಿರುವ ಮಾಹಿತಿಯಂತೆ ವಿಜಯ ಮಲ್ಯ,ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿಯಂತಹ ದೇಶಭ್ರಷ್ಟರ ಆಸ್ತಿಗಳ ಮಾರಾಟದಿಂದ 2021,ಜುಲೈಗೆ ಇದ್ದಂತೆ ಬ್ಯಾಂಕುಗಳು 13,109.17 ಕೋ.ರೂ.ಗಳ ಸಾಲವನ್ನು ಮರುಪಾವತಿಸಿಕೊಂಡಿವೆ ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ಲೋಕಸಭೆಯಲ್ಲಿ ಹೇಳಿದರು.
ವಿವಿಧ ವಿಷಯಗಳ ಕುರಿತು ಪ್ರತಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯು ಅಂಗೀಕರಿಸಿದ 3.73 ಲ.ಕೋ.ರೂ.ಗಳ ಹೆಚ್ಚುವರಿ ವೆಚ್ಚಕ್ಕಾಗಿ ಎರಡನೇ ಕಂತಿನ ಪೂರಕ ಅನುದಾನಗಳ ಬೇಡಿಕೆಗಳ ಮೇಲಿನ ಚರ್ಚೆಗಳಿಗೆ ಉತ್ತರಿಸುವಾಗ ಸೀತಾರಾಮನ್ ಈ ವಿಷಯವನ್ನು ತಿಳಿಸಿದರು.
ಮಲ್ಯ ಮತ್ತು ಇತರರಿಗೆ ಸೇರಿದ ಆಸ್ತಿಗಳ ಮಾರಾಟದಿಂದ 2021 ಜು.16ರಂದು 792 ಕೋ.ರೂ.ಗಳನ್ನು ಮರುಪಾವತಿಸಿಕೊಳ್ಳಲಾಗಿದ್ದು,ಇದು ಇತ್ತೀಚಿನ ಇಂತಹ ಪ್ರಕ್ರಿಯೆಯಾಗಿದೆ ಎಂದರು.
ಹೆಚ್ಚುವರಿ ವೆಚ್ಚವು ಏರ್ ಇಂಡಿಯಾದ ಅಳಿದುಳಿದ ಆಸ್ತಿಗಳು ಮತ್ತು ಬಾಧ್ಯತೆಗಳನ್ನು ವಹಿಸಿಕೊಂಡಿರುವ ಹೋಲ್ಡಿಂಗ್ ಕಂಪನಿಯಲ್ಲಿ 62,000 ಕೋ.ರೂ.ಗಳ ಹೂಡಿಕೆ,ಹೆಚ್ಚುವರಿ ರಸಗೊಬ್ಬರ ಸಹಾಯಧನಕ್ಕಾಗಿ 58,430 ಕೋ.ರೂ.,ಬಾಕಿಯುಳಿದಿರುವ ರಫ್ತು ಪ್ರೋತ್ಸಾಹಧನಗಳ ಪಾವತಿಗಾಗಿ 53,123 ಕೋ.ರೂ. ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ನಿಧಿಗೆ ವರ್ಗಾವಣೆಗಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯಕ್ಕೆ 22,039 ಕೋ.ರೂ.ಗಳನ್ನು ಒಳಗೊಂಡಿದೆ.
ಬೆಲೆ ಏರಿಕೆ ಸೇರಿದಂತೆ ಚರ್ಚೆಯ ಸಂದರ್ಭದಲ್ಲಿ ಪ್ರತಿಪಕ್ಷಗಳು ಎತ್ತಿದ್ದ ವಿವಿಧ ವಿಷಯಗಳಿಗೆ ಉತ್ತರಿಸಿದ ಸೀತಾರಾಮನ್,ಖಾದ್ಯತೈಲ ಮತ್ತು ಇತರ ಅಗತ್ಯ ಸರಕುಗಳ ಬೆಲೆಗಳನ್ನು ತಗ್ಗಿಸಲು ಸರಕಾರವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.
ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು ಕಳೆದ ಏಳು ಹಣಕಾಸು ವರ್ಷಗಳಲ್ಲಿ ಒಟ್ಟೂ 5.49 ಲ.ಕೋ.ರೂ.ಗಳ ಸಾಲವನ್ನು ಮರುವಸೂಲಿ ಮಾಡಿವೆ. ಹೀಗಾಗಿ ಸುಸ್ತಿದಾರರಾಗಿರುವ, ದೇಶದಿಂದ ಪರಾರಿಯಾಗಿರುವ ಈ ಜನರಿಂದ ನಾವು ಹಣವನ್ನು ಮರಳಿ ಪಡೆದಿದ್ದೇವೆ ಮತ್ತು ಅವುಗಳನ್ನು ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳಲ್ಲಿ ತೊಡಗಿಸಿದ್ದೇವೆ, ಆದ್ದರಿಂದ ಬ್ಯಾಂಕುಗಳು ಇಂದು ಸುರಕ್ಷಿತವಾಗಿವೆ ಎಂದು ಅವರು,ಸಾರ್ವಜನಿಕರ ಹಣ ಸರಕಾರಿ ಸ್ವಾಮ್ಯದ ಬ್ಯಾಂಕುಗಳಲ್ಲಿ ಸುಭದ್ರವಾಗಿದೆ ಎಂದರು.
ರಾಜ್ಯಗಳ ಹಣಕಾಸು ಸ್ಥಿತಿ ಕುರಿತಂತೆ ಅವರು,2019-20ನೇ ಪೂರ್ಣ ಹಣಕಾಸು ವರ್ಷದಲ್ಲಿ ಒದಗಿಸಲಾಗಿದ್ದ ಮೊತ್ತದ ಶೇ.86.4ರಷ್ಟನ್ನು ಈಗಾಗಲೇ ಹಾಲಿ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ರಾಜ್ಯಗಳಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದರು.
ಕೋವಿಡ್ ತುರ್ತು ಸ್ಪಂದನಕ್ಕಾಗಿ ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯಾ ನಿಧಿಯಿಂದ ರಾಜ್ಯಗಳಿಗೆ ಹಣವನ್ನು ಒದಗಿಸಲಾಗಿದೆ ಮತ್ತು ಹೆಚ್ಚುವರಿಯಾಗಿ 15,000 ಕೋ.ರೂ.ಗಳನ್ನು ಒದಗಿಸಲಾಗುತ್ತಿದೆ. ಕೆಲವೇ ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳು ಸಾಕಷ್ಟು ನಗದು ಶಿಲ್ಕನ್ನು ಹೊಂದಿವೆ ಎಂದರು.
ಸರಕಾರವು 2014ರಿಂದ ಈವರೆಗೆ ತೈಲಬಾಂಡ್‌ಗಳಿಗಾಗಿ ಸುಮಾರು 93,685 ಕೋ.ರೂ.ಗಳನ್ನು ಪಾವತಿಸಿದೆ ಮತ್ತು ತೈಲಬಾಂಡ್‌ಗಳು ಪಕ್ವಗೊಳ್ಳುವ 2026ರವರೆಗೆ ಸರಕಾರವು ಪಾವತಿಯನ್ನು ಮಾಡಬೇಕಿದೆ ಎಂದು ಸೀತಾರಾಮನ್ ತಿಳಿಸಿದರು.
ಪೂರಕ ಬೇಡಿಕೆಗಳಲ್ಲಿ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಗೆ 49,805 ಕೋ,ರೂ.,ವಾಣಿಜ್ಯ ಇಲಾಖೆಗೆ ಸುಮಾರು 2,400 ಕೋ.ರೂ.,ರಕ್ಷಣಾ ಸಚಿವಾಲಯಕ್ಕೆ 5,000 ಕೋ.ರೂ. ಮತ್ತು ಗೃಹ ಸಚಿವಾಲಯಗಳಿಗೆ 4,000 ಕೋ.ರೂ.ಗಳೂ ಸೇರಿವೆ ಎಂದರು.
2021-22ನೇ ಸಾಲಿನ ಮುಂಗಡಪತ್ರದಲ್ಲಿ ಸರಕಾರದ ಒಟ್ಟು ವೆಚ್ಚ 34.83 ಲ.ಕೋ.ರೂ.ಗಳೆಂದು ಬಿಂಬಿಸಲಾಗಿತ್ತು. ಸರಕಾರವು ಈವರೆಗೆ ಮಂಡಿಸಿರುವ ಎರಡು ಕಂತುಗಳ ಪೂರಕ ಅನುದಾನಗಳ ಬೇಡಿಕೆಗಳಿಂದಾಗಿ ಈ ಮೊತ್ತವು ಇನ್ನಷ್ಟು ಹೆಚ್ಚುವ ನಿರೀಕ್ಷೆಯಿದೆ.
ಸರಕಾರವು ಕಳೆದ ಆಗಸ್ಟ್‌ನಲ್ಲಿ 23,675 ಕೋ.ರೂ.ಗಳ ಮೊದಲ ಕಂತಿನ ಪೂರಕ ಅನುದಾನಗಳ ಬೇಡಿಕೆಗೆ ಸಂಸತ್ತಿನ ಒಪ್ಪಿಗೆಯನ್ನು ಪಡೆದುಕೊಂಡಿತ್ತು.