ಪ್ರಧಾನಿ ಮೋದಿಯ ಕಾಶಿ ಕಾರ್ಯಕ್ರಮದ ಕಿರುಪುಸ್ತಕದಲ್ಲಿ ಇತಿಹಾಸದ 'ತಿರುಚುವಿಕೆ': ಸಿಖ್ ವಿದ್ವಾಂಸರ ಖಂಡನೆ

Update: 2021-12-21 14:13 GMT
ಪ್ರಧಾನಿ ನರೇಂದ್ರ ಮೋದಿ (PTI)

ಚಂಡಿಗಡ: ಪ್ರಧಾನಿ ನರೇಂದ್ರ ಮೋದಿಯವರು ಡಿ.14ರಂದು ವಿಶ್ವನಾಥ ದೇವಸ್ಥಾನದ ನೂತನ ಕಾರಿಡಾರ್ ಅನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಬಿಡುಗಡೆಗೊಂಡಿದ್ದ ‘ಶ್ರೀ ಕಾಶಿ ವಿಶ್ವನಾಥ ಧಾಮದ ಗೌರವಶಾಲಿ ಇತಿಹಾಸ’ ಎಂಬ ಕಿರುಪುಸ್ತಕದಲ್ಲಿಯ ‘ಕಾಶಿ ಮತ್ತು ಸಿಖ್ ಧರ್ಮ’ ಎಂಬ ಅಧ್ಯಾಯವು ಅಸಂಬದ್ಧ, ಆಕ್ಷೇಪಾರ್ಹವಾಗಿದೆ ಮತ್ತು ಇತಿಹಾಸವನ್ನು ಸಂಪೂರ್ಣವಾಗಿ ತಿರುಚಿದೆ ಎಂದು ಪಂಜಾಬಿನಲ್ಲಿಯ ಸಿಖ್ ವಿದ್ವಾಂಸರು ಖಂಡಿಸಿದ್ದಾರೆ ಎಂದು thewire.in ವರದಿ ಮಾಡಿದೆ.

ಉತ್ತರ ಪ್ರದೇಶ ಸರಕಾರವು ಮುದ್ರಿಸಿರುವ ಈ ಪುಸ್ತಕವು ಸಿಖ್ ಧರ್ಮದೊಂದಿಗೆ ಕಾಶಿಯ ಸಂಬಂಧದ ಕುರಿತು ಹಲವಾರು ಹೇಳಿಕೆಗಳನ್ನು ಒಳಗೊಂಡಿದೆ. ಈ ಹೇಳಿಕೆಗಳು ಸಿಖ್ ಇತಿಹಾಸವನ್ನು ಕೆಟ್ಟದಾಗಿ ಬಿಂಬಿಸಿವೆ, ಸುಳ್ಳುಗಳಿಂದ ತುಂಬಿವೆ ಮತ್ತು ಐತಿಹಾಸಿಕ ಸತ್ಯಗಳನ್ನು ಒಳಗೊಂಡಿಲ್ಲ ಎಂದು ವಿದ್ವಾಂಸರು ಹೇಳಿದ್ದಾರೆ.

ಗುರುದ್ವಾರಾಗಳನ್ನು ನಿರ್ವಹಿಸುವ ಶಿರೋಮಣಿ ಗುರುದ್ವಾರಾ ಪ್ರಬಂಧಕ ಸಮಿತಿ (ಎಸ್ಜಿಪಿಸಿ)ಯು ಈ ಪುಸ್ತಕವನ್ನು ಖಂಡಿಸಿದೆ.

ಪುಸ್ತಕದಲ್ಲಿ ಸಿಖ್ ಧರ್ಮದ ಇತಿಹಾಸವನ್ನು ತಿರುಚಲಾಗಿದೆ ಮತ್ತು ತಪ್ಪು ಮಾಹಿತಿಗಳನ್ನು ನೀಡಲಾಗಿದೆ ಎಂದು ಟ್ವೀಟಿಸಿರುವ ಎಸ್ಜಿಪಿಸಿ ಮಾಧ್ಯಮ ಕಾರ್ಯದರ್ಶಿ ಕುಲ್ವಿಂದರ್ ಸಿಂಗ್ ರಾಮದಾಸ ಅವರು, ಪುಸ್ತಕವನ್ನು ನಿಷೇಧಿಸುವಂತೆ ಆಗ್ರಹಿಸಿದ್ದಾರೆ.

ಆಕ್ಷೇಪಕ್ಕೆ ಗುರಿಯಾಗಿರುವ ಅಧ್ಯಾಯದಲ್ಲಿ ‘‘ಬೌದ್ಧ ಮತ್ತು ಜೈನ್ ವಿದ್ವಾಂಸರನ್ನು ಆಕರ್ಷಿಸುತ್ತಿದ್ದ ಕಾಶಿ ನಗರವು ಸಿಖ್ ಧರ್ಮದ ಧ್ವಜಧಾರಿಯೂ ಆಗಿತ್ತು. ವಾಸ್ತವದಲ್ಲಿ ‘ಸನಾತನ ಧರ್ಮ(ಹಿಂದು ಸಿದ್ಧಾಂತ)’ವನ್ನು ಮುಘಲರಿಂದ ರಕ್ಷಿಸಲೆಂದೇ ಪಂಜಾಬಿನಲ್ಲಿ ಸಿಖ್ ಪಂಥವನ್ನು ಸ್ಥಾಪಿಸಲಾಗಿತ್ತು. ಕಾಶಿಯು ಸನಾತನ ಧರ್ಮದ ಆಧ್ಯಾತ್ಮಿಕ ರಾಜಧಾನಿಯಾಗಿದ್ದರಿಂದ ಅದರೊಂದಿಗೆ ಸಿಖ್ ಧರ್ಮವು ಆಳವಾದ ಸಂಬಂಧವನ್ನು ಹೊಂದಿತ್ತು’’ ಎಂದು ಹೇಳಲಾಗಿದೆ.

ಇಡೀ ಪಠ್ಯವು ಸಂಪೂರ್ಣವಾಗಿ ತಪ್ಪಾಗಿದೆ, ಇದು ಕೆಟ್ಟ ಅಭಿರುಚಿಯ ಇತಿಹಾಸವಾಗಿದೆ ಎಂದು ಹೇಳಿದ ಸಿಖ್ ಬುದ್ಧಿಜೀವಿ ಹಾಗೂ ಮಾಜಿ ಐಎಎಸ್ ಅಧಿಕಾರಿ ಗುರುತೇಜ ಸಿಂಗ್ ಅವರು, ಮುಘಲರಿಂದ ಹಿಂದುಗಳ ರಕ್ಷಣೆಗಾಗಿ ಸಿಖ್ ಧರ್ಮವನ್ನು ಸ್ಥಾಪಿಸುವ ಪ್ರಶ್ನೆಯೇ ಇಲ್ಲ. ಸಿಖ್ ಧರ್ಮವು ಸಾರ್ವತ್ರಿಕ ನಂಬಿಕೆಯಾಗಿದ್ದು, ಅದು ಮುಘಲರಿಂದ ಅಥವಾ ಹಿಂದುಗಳಿಂದಾಗಲಿ, ಯಾವುದೇ ರೀತಿಯ ದಬ್ಬಾಳಿಕೆಗೆ ವಿರುದ್ಧವಾಗಿದೆ ಎಂದರು.

ಶೋಷಿತ ಮತ್ತು ದಮನಿತ ವರ್ಗಗಳ ರಕ್ಷಣೆಗಾಗಿ ಸಿಖ್ ಧರ್ಮವು ಅಸಿತ್ವಕ್ಕೆ ಬಂದಿತ್ತೇ ಹೊರತು ಪುಸ್ತಕದಲ್ಲಿ ಹೇಳಿರುವಂತೆ ಹಿಂದು ಧರ್ಮದ ರಕ್ಷಣೆಗಾಗಿ ಅಲ್ಲ ಎಂದು ಸಿಖ್ ವಿದ್ವಾಂಸ ಡಾ.ಸರಬ್ಜಿಂದರ್ ಸಿಂಗ್ ಹೇಳಿದರು.

ಇದು ಸಿಖ್ ಇತಿಹಾಸವನ್ನು ತಿರುಚುವ ಮೊದಲ ಪ್ರಯತ್ನವೇನಲ್ಲ. ಹಿಂದೆಯೂ ಸಂಘ ಪರಿವಾರವು ಸಿಖ್ ಧರ್ಮವು ಹಿಂದು ಧರ್ಮದ ವಿಸ್ತರಣೆಯಾಗಿದೆ ಎಂದು ಬಿಂಬಿಸಿತ್ತು, ಈ ಸಲ ವಾಸ್ತವಾಂಶಗಳನ್ನು ಇನ್ನಷ್ಟು ಭಯಂಕರವಾಗಿ ತಿರುಚಲಾಗಿದೆ ಎಂದು ಇನ್ನೋರ್ವ ಸಿಖ್ ವಿದ್ವಾಂಸ ಡಾ.ಧರಮ್ ಸಿಂಗ್ ಹೇಳಿದರು ಎಂದು thewire.in ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News