ಪ್ರತಿಪಕ್ಷ ಸಭಾತ್ಯಾಗದ ನಡುವೆಯೇ ರಾಜ್ಯಸಭೆಯಲ್ಲಿ ಆಧಾರ್-ವೋಟರ್ ಐಡಿ ಜೋಡಣೆ ಮಸೂದೆಗೆ ಅಸ್ತು

Update: 2021-12-21 17:37 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ,ಡಿ.21: ಆಧಾರ್‌ನೊಂದಿಗೆ ವೋಟರ್ ಐಡಿ ಜೋಡಣೆ ಸೇರಿದಂತೆ ದೀರ್ಘಕಾಲದಿಂದ ಬಾಕಿಯಿರುವ ಚುನಾವಣಾ ಸುಧಾರಣೆಗಳನ್ನು ಅನುಷ್ಠಾನಿಸಲು ಉದ್ದೇಶಿಸಿರುವ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯನ್ನು ರಾಜ್ಯಸಭೆಯು ಮಂಗಳವಾರ ಪ್ರತಿಪಕ್ಷ ಸದಸ್ಯರ ಸಭಾತ್ಯಾಗದ ನಡುವೆಯೇ ಅಂಗೀಕರಿಸಿತು. ಮಸೂದೆಯು ಸೋಮವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.

ಕಲಾಪ ಸಲಹಾ ಸಮಿತಿ (ಬಿಎಸಿ)ಯ ಸಭೆಗೆ ತಮ್ಮನ್ನು ಆಹ್ವಾನಿಸದೆ ಚುನಾವಣಾ ಕಾನೂನುಗಳ (ತಿದ್ದುಪಡಿ) ಮಸೂದೆಯ ಅಂಗೀಕಾರಕ್ಕೆ ಮೂರು ಗಂಟೆಗಳ ಸಮಯ ನಿಗದಿಗೊಳಿಸಿರುವುದನ್ನು ಬೆಳಿಗ್ಗೆ ಪ್ರತಿಪಕ್ಷಗಳು ಆಕ್ಷೇಪಿಸಿದ ಬಳಿಕ ಯಾವುದೇ ಕಲಾಪಗಳನ್ನು ನಡೆಸದೆ ಸದನವನ್ನು ಭೊಜನ ವಿರಾಮದವರೆಗೆ ಮುಂದೂಡಲಾಗಿತ್ತು.

ತಾವು ಬಿಎಸಿ ಸಭೆಯಲ್ಲಿ ಭಾಗವಹಿಸದಿದ್ದಾಗ ಸಮಿತಿಯು ಸಮಯವನ್ನು ನಿಗದಿಗೊಳಿಸಲು ಹೇಗೆ ಸಾದ್ಯ ಎಂದು ಕಾಂಗ್ರೆಸ್,ಟಿಎಂಸಿ ಮತ್ತು ಇತರ ಪ್ರತಿಪಕ್ಷಗಳ ಸದಸ್ಯರು ಪ್ರಶ್ನಿಸಿದರು. ಸರಕಾರದ ಜೊತೆಗೆ ಪ್ರಮುಖ ಪ್ರತಿಪಕ್ಷಗಳೂ ಬಿಎಸಿಯ ಭಾಗವಾಗಿವೆ. ಬಿಎಸಿ ಸದನದಲ್ಲಿ ಚರ್ಚೆಗಳಿಗೆ ಸಮಯವನ್ನು ನಿಗದಿಗೊಳಿಸುತ್ತದೆ.

ಬಿಎಸಿ ಸಭೆಯಲ್ಲಿ ಪಾಲ್ಗೊಳ್ಳುವವರು ಪಾಲ್ಗೊಳ್ಳುತ್ತಾರೆ.ನೀವು ಅದನ್ನು ಬಹಿಷ್ಕರಿಸಿದ್ದೀರಿ,ನಿಮಗೆ ಬಹಿಷ್ಕರಿಸುವ ಹಕ್ಕು ಇದೆ ಎಂದು ಹೇಳಿದ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು,‘ನಿಯಮ 267ರ ಅಡಿ ನೋಟಿಸ್‌ಗಳನ್ನು ನಾನು ಅಂಗೀಕರಿಸಿಲ್ಲ,ನಾವು ಈ ಎಲ್ಲ ವಿಷಯಗಳನ್ನು ಕೈಗೆತ್ತಿಕೊಳ್ಳುವಂತಾಗಲು ಸದನವು ಕಲಾಪಗಳನ್ನು ನಡೆಸಲಿ’ ಎಂದು ತಿಳಿಸಿದರು.

ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಲಖಿಂಪುರ ಹತ್ಯೆಗಳ ಕುರಿತು ನಿಯಮ 267ರಡಿ ನೋಟಿಸುಗಳನ್ನು ನೀಡಿದ್ದವು. ಪ್ರಸ್ತಾಪಿಸಿರುವ ವಿಷಯದ ಮೇಲೆ ಚರ್ಚೆಗಾಗಿ ಕಲಾಪವನ್ನು ಬದಿಗಿರಿಸಲು ಈ ನಿಯಮವು ಸೂಚಿಸುತ್ತದೆ.

ಪ್ರತಿಪಕ್ಷಗಳು ನಿರ್ಣಯದೊಂದಿಗೆ ಮಸೂದೆಯನ್ನು ಆಯ್ಕೆ ಸಮಿತಿಗೆ ಕಳುಹಿಸಬೇಕೆಂದು ಒತ್ತಾಯಿಸಿದ್ದು, ಧ್ವನಿಮತದಲ್ಲಿ ಅದಕ್ಕೆ ಸೋಲಾಯಿತು. ಬಳಿಕ ಪ್ರತಿಪಕ್ಷಗಳು ಸಭಾತ್ಯಾಗ ನಡೆಸಿದ್ದು,ಸರಕಾರವು ಕೆಲವು ಮಿತ್ರಪಕ್ಷಗಳ ಬೆಂಬಲದೊಂದಿಗೆ ರಾಜ್ಯಸಭೆಯು ಮಸೂದೆಯನ್ನು ಅಂಗೀಕರಿಸುವಂತೆ ಮಾಡುವಲ್ಲಿ ಯಶಸ್ವಿಯಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News