ಗಂಗಾ ಎಕ್ಸ್ ಪ್ರೆಸ್‍ವೇ ಯೋಜನೆ ಜಾರಿ ಹೊಣೆ ಅದಾನಿ ಎಂಟರ್‍ಪ್ರೈಸಸ್ ಸಂಸ್ಥೆಗೆ

Update: 2021-12-21 17:38 GMT

ಹೊಸದಿಲ್ಲಿ: ಅದಾನಿ ಸಮೂಹದ ಪ್ರಮುಖ ಸಂಸ್ಥೆಯಾಗಿರುವ ಅದಾನಿ ಎಂಟರ್‍ಪ್ರೈಸಸ್ ಲಿಮಿಟೆಡ್ ದೇಶದ ಅತ್ಯಂತ ದೊಡ್ಡ ಎಕ್ಸ್ ಪ್ರೆಸ್‍ವೇ ಯೋಜನೆಯಾದ ಗ್ರೀನ್‍ಫೀಲ್ಡ್ ಗಂಗಾ ಎಕ್ಸ್ ಪ್ರೆಸ್‍ವೇ ಯೋಜನೆ ಜಾರಿಗೊಳಿಸುವ ಹೊಣೆ ಪಡೆದುಕೊಂಡಿದೆ. ಈ ಸಂಬಂಧ ಉತ್ತರ ಪ್ರದೇಶ ಎಕ್ಸ್ ಪ್ರೆಸ್‍ವೇಸ್ ಇಂಡಸ್ಟ್ರಿಯಲ್ ಡೆವಲೆಪ್ಮೆಂಟ್ ಅಥಾರಿಟಿಯು ಸಂಸ್ಥೆಗೆ 'ಲೆಟರ್ ಆಫ್ ಅವಾರ್ಡ್' ಹಸ್ತಾಂತರಿಸಿದೆ. ಡಿಬಿಎಪ್‍ಒಟಿ ಆಧಾರದಲ್ಲಿ ಈ ಯೋಜನೆಯ ಮೂರು ಪ್ರಮುಖ ಭಾಗಗಳನ್ನು ಅದಾನಿ ಎಂಟರ್‍ಪ್ರೈಸಸ್ ಕಾರ್ಯಗತಗೊಳಿಸಲಿದೆ ಎಂದು ವರದಿಯಾಗಿದೆ.

ಈ ಗಂಗಾ ಎಕ್ಸ್‍ಪ್ರೆಸ್‍ವೇ ಯೋಜನೆಯು ಮೀರತ್ ಹಾಗೂ ಪ್ರಯಾಗರಾಜ್ ನಡುವೆ ಸಂಪರ್ಕ ಕಲ್ಪಿಸಲಿದ್ದು ಇದು ಭಾರತದ ಅತ್ಯಂತ ದೊಡ್ಡ ಇಂತಹ ಯೋಜನೆಯಾಗಿದೆ. ಈ ಒಟ್ಟು 594 ಕಿಮೀ ಉದ್ದದ ಯೋಜನೆಯ ಪೈಕಿ ಬುಡೌನ್‍ನಿಂದ ಪ್ರಯಾಗರಾಜ್ ತನಕದ 484 ಕಿಮೀ ಉದ್ದದ, ಅಂದರೆ ಶೇ. 80ರಷ್ಟು ಕಾಮಗಾರಿಯನ್ನು ಅದಾನಿ ಎಂಟರ್‍ಪ್ರೈಸಸ್ ನಿರ್ವಹಿಸಲಿದೆ.

ಈ ಯೋಜನೆಯೊಂದಿಗೆ ಅದಾನಿ ಎಂಟರ್‍ಪ್ರೈಸಸ್ ನಿರ್ವಹಿಸಲಿರುವ ರಸ್ತೆ ಯೋಜನೆಗಳ ಸಂಖ್ಯೆ 13ಕ್ಕೆ ಏರಿದ್ದು ಒಟ್ಟು 5,000 ಕಿಮೀ ಉದ್ದದ ರಸ್ತೆ ನಿರ್ವಹಣೆಯ ಹೊಣೆಯನ್ನು ಹೊಂದಿದೆ. ಈ ಯೋಜನೆಗಳ ಅಂದಾಜು ಮೊತ್ತ ರೂ. 35,000 ಕೋಟಿ ಆಗಿದೆ. ಈ ಯೋಜನೆಗಳು ಆಂಧ್ರಪ್ರದೇಶ, ಕೇರಳ, ಗುಜರಾತ್, ಪಶ್ಚಿಮ ಬಂಗಾಳ, ಒಡಿಶಾ, ಉತ್ತರ ಪ್ರದೇಶ, ಛತ್ತೀಸಗಢ, ತೆಲಂಗಾಣ ಮತ್ತು ಮಧ್ಯಪ್ರದೇಶದಲ್ಲಿ ಜಾರಿಯಾಗುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News