×
Ad

ಭಯದಿಂದಾಗಿ ಕಬ್ಬು ಬೆಳೆಗೆ ಎಂಎಸ್‍ಪಿ ಏರಿಕೆ ಬಗ್ಗೆ ಬಿಜೆಪಿ ಜನಪ್ರತಿನಿಧಿಗಳು ಚಕಾರವೆತ್ತುತ್ತಿಲ್ಲ: ವರುಣ್ ಗಾಂಧಿ

Update: 2021-12-22 13:21 IST

ಹೊಸದಿಲ್ಲಿ: ಕಬ್ಬು ಬೆಳೆಗೆ ನೀಡಲಾಗುವ ಕನಿಷ್ಠ ಬೆಂಬಲ ದರ ಅಥವಾ ಎಂಎಸ್‍ಪಿ ಏರಿಕೆ ಮಾಡಬೇಕೆಂಬ ವಿಷಯದ ಕುರಿತು ತಾವು ಮಾತ್ರ ದನಿಯೆತ್ತುತ್ತಿರುವುದಾಗಿ ಹಾಗೂ ಇತರ ಸಂಸದರು ಮತ್ತು ಶಾಸಕರಿಗೆ ಈ ಕುರಿತು ಮಾತನಾಡಲು ಧೈರ್ಯವಿಲ್ಲವೆಂದು  ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ.

ಈ ಕುರಿತು ದನಿ ಎತ್ತಿದರೆ ಚುನಾವಣೆ ವೇಳೆ ತಮಗೆ ಟಿಕೆಟ್ ನೀಡಲಿಕ್ಕಿಲ್ಲ ಎಂಬ ಭಯದಿಂದ ಪಕ್ಷದ ತಮ್ಮ ಸಹೋದ್ಯೋಗಿಗಳು ಕಬ್ಬು ಬೆಳೆ ಎಂಎಸ್‍ಪಿ ಕುರಿತು ಚಕಾರವೆತ್ತುತ್ತಿಲ್ಲ ಎಂದು ವರುಣ್ ಗಾಂಧಿ ತಿಳಿಸಿದ್ದಾರೆ.

ತಮ್ಮ ಪಿಲಿಭಿಟ್ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಬರೇಲಿಯ ಬಹೇರಿ ವಿಧಾನಸಭಾ ಕ್ಷೇತ್ರಕ್ಕೆ ಎರಡು ದಿನದ ಪ್ರವಾಸದಲ್ಲಿರುವ ಸಂದರ್ಭ ಮಂಗಳವಾರ ಗ್ರಾಮಸ್ಥರ ಜತೆ ಸಂವಾದದ ವೇಳೆ ಮೇಲಿನಂತೆ ವರುಣ್ ಗಾಂಧಿ ಹೇಳಿದರು.

"ಈ ಜನರಿಗೆ ಟಿಕೆಟ್ ದೊರೆಯಲಿಕ್ಕಿಲ್ಲ ಎಂಬ ಭಯವಿದೆ.  ಜನರ ಬೇಡಿಕೆಯ ಕುರಿತಂತೆ ಜನಪ್ರತಿನಿಧಿಗಳು ದನಿಯೆತ್ತದೇ ಇದ್ದಲ್ಲಿ ಬೇರೆ ಯಾರು ಎತ್ತುತ್ತಾರೆ? ನನಗೆ ಟಿಕೆಟ್ ದೊರೆಯದೇ ಇದ್ದರೂ ಸಮಸ್ಯೆಯಿಲ್ಲ, ನನ್ನ ತಾಯಿ ಸ್ವತಂತ್ರ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ನಾನು ಸತ್ಯ ಮಾತ್ರ ಹೇಳುತ್ತೇನೆ. ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ" ಎಂದು ಹೇಳಿದರು.

ತಾನೊಬ್ಬ ʼಕ್ರಾಂತಿಕಾರಿ' ನಾಯಕ ಎಂದು ಹೇಳಿಕೊಂಡ ವರುಣ್, ಜನತೆಗಾಗುತ್ತಿರುವ ಅನ್ಯಾಯ ಸಹಿಸಲು ಸಾಧ್ಯವಿಲ್ಲ ಎಂದರು. ಜನರಿಗೆ ಸಹಾಯ ಮಾಡಿದಾಗಲೆಲ್ಲಾ ತಾವು ತಮ್ಮ ಸ್ವಂತ ಹಣ ಖರ್ಚು ಮಾಡುತ್ತಿರುವುದಾಗಿ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News