"ಕೋವಿಡ್‌ ನಿಂದ 2021ರಲ್ಲಿ 3.3 ಮಿಲಿಯನ್ ಗೂ ಹೆಚ್ಚು ಜೀವಹಾನಿ, 2022ರಲ್ಲಿ ಸಾಂಕ್ರಾಮಿಕಕ್ಕೆ ಅಂತ್ಯ ಹಾಡಲೇಬೇಕಿದೆ"

Update: 2021-12-22 15:37 GMT
ಸಾಂದರ್ಭಿಕ ಚಿತ್ರ

ಜಿನೆವಾ, ಡಿ.22: ಕೊರೋನ ಸೋಂಕಿನಿಂದಾಗಿ ಈ ವರ್ಷ 3.3 ಮಿಲಿಯನ್‌ಗೂ ಅಧಿಕ ಮಂದಿ ಜೀವಕಳೆದುಕೊಂಡಿದ್ದು ಇದು 2020ರಲ್ಲಿ, ಏಡ್ಸ್, ಮಲೇರಿಯಾ ಮತ್ತು ಟಿಬಿ ರೋಗದಿಂದ ಆದ ಒಟ್ಟು ಪ್ರಾಣ ಹಾನಿಗಿಂತಲೂ ಅಧಿಕವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, 2022 ಸಾಂಕ್ರಾಮಿಕವನ್ನು ಕೊನೆಗೊಳಿಸುವ ವರ್ಷವಾಗಬೇಕು ಎಂದಿದೆ.

ಭವಿಷ್ಯದಲ್ಲಿ ಈ ರೀತಿಯ ವಿಪತ್ತು ಸಂಭವಿಸದಂತೆ ತಡೆಯುವ ಮತ್ತು ಸುಸ್ಥಿರ ಅಭಿವೃದ್ಧಿ ಗುರಿಯನ್ನು ಸಾಧಿಸುವ ಪ್ರಯತ್ನಗಳಿಗೆ ವೇಗ ನೀಡುವ ಯೋಜನೆಯಲ್ಲಿ ಎಲ್ಲಾ ದೇಶಗಳೂ ಹೂಡಿಕೆ ಮಾಡುವ ವರ್ಷವಾಗಿ 2022 ಗುರುತಿಸಿಕೊಳ್ಳಬೇಕು. ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಉದ್ದೇಶದ ಪ್ರಾಥಮಿಕ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚಿನ ಹೂಡಿಕೆ ಮಾಡಬೇಕಿದೆ ಎಂದು ವಿಶ್ವಸಂಸ್ಥೆಯ ಮುಖ್ಯಸ್ಥ ಟೆಡ್ರೋಸ್ ಅಧನಾಮ್ ಗೆಬ್ರೆಯೇಸಸ್ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.

ಕೊರೋನ ಸೋಂಕಿನಿಂದ 2021ರಲ್ಲಿ 3.3 ಮಿಲಿಯನ್‌ಗೂ ಅಧಿಕ ಸಾವು ಸಂಭವಿಸಿದ್ದು ಇದರಲ್ಲಿ ವರದಿಯಾಗದ ಸಾವಿನ ಪ್ರಕರಣ, ಅಗತ್ಯದ ಆರೋಗ್ಯ ಸೇವೆಗೆ ಆದ ಅಡಚಣೆಗಳಿಂದಾಗಿ ಸಂಭವಿಸಿದ ಲಕ್ಷಾಂತರ ಸಾವಿನ ಪ್ರಕರಣ ಸೇರಿಲ್ಲ. ಈಗಲೂ ಕೊರೋನ ಸೋಂಕಿನಿಂದ ವಿಶ್ವದಾದ್ಯಂತ ಪ್ರತೀ ವಾರ ಸುಮಾರು 50,000 ಜೀವಹಾನಿ ಸಂಭವಿಸುತ್ತಿದೆ ಎಂದವರು ಹೇಳಿದ್ದಾರೆ.

ಕೇವಲ 1 ತಿಂಗಳ ಹಿಂದೆ ದಕ್ಷಿಣ ಆಫ್ರಿಕಾದಲ್ಲಿ ಅತ್ಯಂತ ಕಡಿಮೆ ಸೋಂಕು ಪ್ರಕರಣ ವರದಿಯಾಗಿತ್ತು. ಆದರೆ ಇತ್ತೀಚಿನ ದಿನದಲ್ಲಿ ಪ್ರಮುಖವಾಗಿ ಒಮೈಕ್ರಾನ್ ಸೇರಿದಂತೆ ಸೋಂಕಿನ ತೀವ್ರ ಅಲೆಯ ಸಮಸ್ಯೆ ಆ ದೇಶಕ್ಕೆ ಎದುರಾಗಿದೆ. ಕಳೆದ ವಾರ ಅತ್ಯಧಿಕ ಸೋಂಕು ಪ್ರಕರಣ ದಾಖಲಾಗಿದ್ದು ಒಮೈಕ್ರಾನ್ ರೂಪಾಂತರಿ ಡೆಲ್ಟಾಗಿಂತ ಅತ್ಯಧಿಕ ವೇಗವಾಗಿ ಹರಡುತ್ತಿದೆ ಎಂಬುದಕ್ಕೆ ವಿಶ್ವಾಸಾರ್ಹ ಪುರಾವೆಗಳಿವೆ .ಅಲ್ಲದೆ ಲಸಿಕೆ ಪಡೆಯದವರು ಅಥವಾ ಕೊರೋನ ಸೋಂಕಿನಿಂದ ಚೇತರಿಸಿಕೊಂಡವರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಿದೆ. ಮುಂಬರುವ ರಜಾ ದಿನಗಳಲ್ಲಿ ಹಲವು ದೇಶಗಳಲ್ಲಿ ಜನಸಂದಣಿ ಒಂದೆಡೆ ಸೇರುವುದರಿಂದ ಸೋಂಕು ಪ್ರಕರಣ ಹೆಚ್ಚುವುದರಲ್ಲಿ ಸಂದೇಹವಿಲ್ಲ. ಎಲ್ಲರೂ ಈ ಸಾಂಕ್ರಾಮಿಕದಿಂದ ರೋಸಿ ಹೋಗಿದ್ದಾರೆ. ಎಲ್ಲರೂ ಸ್ನೇಹಿತರೊಂದಿಗೆ, ಕುಟುಂಬದೊಂದಿಗೆ ಸಮಯ ಕಳೆಯಲು ಬಯಸುತ್ತಾರೆ. ಸಹಜ ಸ್ಥಿತಿಗೆ ಮರಳುವುದನ್ನು ನಾವೆಲ್ಲಾ ಬಯಸುತ್ತಿದ್ದೇವೆ. ಈ ಸ್ಥಿತಿಗೆ ಕ್ಷಿಪ್ರವಾಗಿ ಮರಳಬೇಕಿದ್ದರೆ, ಮುಖಂಡರು ಹಾಗೂ ನಾಗರಿಕರು ತಮ್ಮನ್ನು ಹಾಗೂ ಇತರರನ್ನು ರಕ್ಷಿಸುವ ಕಠಿಣ ನಿರ್ಧಾರ ಕೈಗೊಳ್ಳಬೇಕಿದೆ. ಕೆಲವೊಮ್ಮೆ ಕಾರ್ಯಕ್ರಮಗಳನ್ನು ರದ್ದುಗೊಳಿಸುವ ಪರಿಸ್ಥಿತಿ ಬರಬಹುದು. ಆದರೆ ಪ್ರಾಣ ಕಳೆದುಕೊಳ್ಳುವುದಕ್ಕಿಂತ ಕಾರ್ಯಕ್ರಮ ರದ್ದುಗೊಳಿಸುವುದು ಉತ್ತಮ ಆಯ್ಕೆಯಾಗಿದೆ ಎಂದವರು ಹೇಳಿದ್ದಾರೆ.

ಮುಂದಿನ ವರ್ಷ ಸಾಂಕ್ರಾಮಿಕಕ್ಕೆ ಅಂತ್ಯ ಹೇಳಬೇಕಿದ್ದರೆ ಲಸಿಕೆ ವಿತರಣೆಯ ಅಸಮಾನತೆ ತೊಲಗಿಸಿ ಮುಂದಿನ ವರ್ಷದ ಮಧ್ಯಾವಧಿಯ ಒಳಗೆ ಎಲ್ಲಾ ದೇಶಗಳ 70% ಜನತೆ ಲಸಿಕೆ ಪಡೆಯುವುದನ್ನು ಖಾತರಿಪಡಿಸಬೇಕಿದೆ. ಮುಂದಿನ ವರ್ಷದಲ್ಲಿ ಸಾಂಕ್ರಾಮಿಕವನ್ನು ಅಂತ್ಯಗೊಳಿಸಲು ಮತ್ತು ಜಾಗತಿಕ ಆರೋಗ್ಯದಲ್ಲಿ ಹೊಸ ಯುಗವನ್ನು ಆರಂಭಿಸಲು ವಿಶ್ವ ಆರೋಗ್ಯ ಸಂಸ್ಥೆ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನೂ ಮಾಡಲು ಬದ್ಧವಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News