8ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಹಲವು ಬಾರಿ ಚೂರಿ ಇರಿತ, ದುಷ್ಕರ್ಮಿ ಬಂಧನ
ಪಾಟ್ನಾ: ಬಿಹಾರದ ಗೋಪಾಲ್‌ಗಂಜ್ ಜಿಲ್ಲೆಯಲ್ಲಿ 8 ನೇ ತರಗತಿಯ ವಿದ್ಯಾರ್ಥಿನಿಯನ್ನು ದುಷ್ಕರ್ಮಿಯೊಬ್ಬ ಚೂರಿಯಿಂದ ಹಲವು ಬಾರಿ ಇರಿದಿರುವ ಭೀಕರ ಘಟನೆ ನಡೆದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು India Today ವರದಿ ಮಾಡಿದೆ.
‘ದೈನಿಕ್ ಭಾಸ್ಕರ್’ ವರದಿಯ ಪ್ರಕಾರ, ಡಿಸೆಂಬರ್ 19 ರಂದು ಬಾಲಕಿ ತನ್ನ ಇಬ್ಬರು ಸ್ನೇಹಿತೆಯರೊಂದಿಗೆ ಶಾಲೆಯಿಂದ ಮನೆಗೆ ಮರಳುತ್ತಿದ್ದಾಗ ಬಿಹಾರದ ಗೋಪಾಲ್ ಗಂಜ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.
ಬಾಲಕಿ ಬರುತ್ತಿದ್ದ ದಾರಿಯಲ್ಲಿಅಡಗಿ ಕುಳಿತ್ತಿದ್ದ ಆರೋಪಿ ಏಕಾಏಕಿ ಬಾಲಕಿಯ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ. ಆರೋಪಿ 13 ಸೆಕೆಂಡುಗಳಲ್ಲಿ ಸಂತ್ರಸ್ತೆಗೆ ಎಂಟು ಬಾರಿ ಇರಿದಿದ್ದಾನೆ ಎಂದು ವರದಿಯಾಗಿದೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ವ್ಯಕ್ತಿಯೊಬ್ಬ ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸುತ್ತಿರುವಾಗಲೂ ಆರೋಪಿಯು ಹುಡುಗಿಯ ಮೇಲೆ ಪದೇ ಪದೇ ಚಾಕುವಿನಿಂದ ಇರಿದಿರುವುದು ಕಂಡುಬಂದಿದೆ.
ಬಾಲಕಿಯನ್ನು ಮೊದಲಿಗೆ ಗೋಪಾಲ್ ಗಂಜ್ ನ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆ ನಂತರ ಉತ್ತಮ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ವರದಿ ತಿಳಿಸಿದೆ.
ಸಂತ್ರಸ್ತೆಯ ಕುಟುಂಬಸ್ಥರ ಪ್ರಕಾರ, ಆರೋಪಿಯು ಈ ಹಿಂದೆ ಬಾಲಕಿ ಓದಲು ಹೋಗುತ್ತಿದ್ದಾಗ ಹಲವು ಬಾರಿ ಕಿರುಕುಳ ನೀಡಲು ಯತ್ನಿಸಿದ್ದ.