ಉತ್ತರಪ್ರದೇಶದ ವಿಧಾನ ಸಭೆ ಚುನಾವಣೆ ಮುಂದೂಡುವ ಬಗ್ಗೆ ಪರಿಶೀಲಿಸಿ ನಿರ್ಧಾರ: ಸಿಇಸಿ
ಡೆಹ್ರಾಡೂನ್, ಡಿ. 24: ಉತ್ತರಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆ ಮುಂದೂಡುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಭಾರತದ ಚುನಾವಣಾ ಆಯೋಗಕ್ಕೆ ನಿರ್ದೇಶಿಸಿದ ಒಂದು ದಿನದ ಬಳಿಕ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಸುಶೀಲ್ ಚಂದ್ರ, ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಉತ್ತರಪ್ರದೇಶಕ್ಕೆ ಮುಂದಿನ ವಾರ ಭೇಟಿ ನೀಡಿದ ಸಂದರ್ಭ ಪರಿಸ್ಥಿತಿ ಅವಲೋಕಿಸಲಾಗುವುದು ಎಂದು ಶುಕ್ರವಾರ ಹೇಳಿದ್ದಾರೆ.
ಡೆಹ್ರಾಡೂನ್ ನಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಸುಶೀಲ್ ಚಂದ್ರ, ‘‘ಮುಂದಿನ ವಾರ ನಾವು ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದೇವೆ. ಆಗ ಅಲ್ಲಿನ ಪರಿಸ್ಥಿತಿ ಪರಿಶೀಲಿಸಲಿದ್ದೇವೆ. ಅನಂತರ ವಿಧಾನ ಸಭೆ ಚುನಾವಣೆಗೆ ಸಂಬಂಧಿಸ ಸೂಕ್ತ ನಿರ್ಧಾರಕ್ಕೆ ಬರಲಿದ್ದೇವೆ’’ ಎಂದರು. ಉತ್ತರಪ್ರದೇಶದಲ್ಲಿ ವಿಧಾನ ಸಭೆ ಚುನಾವಣೆಯನ್ನು ತಕ್ಷಣ ಕನಿಷ್ಠ 1ರಿಂದ 2 ತಿಂಗಳ ಮುಂದೂಡುವಂತೆ ಅಲಹಾಬಾದ್ ಉಚ್ಚ ನ್ಯಾಯಾಲಯ ಭಾರತದ ಚುನಾವಣಾ ಆಯೋಗಕ್ಕೆ ಸೂಚಿಸಿದ ಒಂದು ದಿನದ ಬಳಿಕ ಮುಖ್ಯ ಚುನಾವಣಾ ಆಯುಕ್ತರು ಈ ನಿರ್ಧಾರಕ್ಕೆ ಬಂದಿದ್ದಾರೆ.
ರ‍್ಯಾಲಿಗಳನ್ನು ನಿಲ್ಲಿಸದೇ ಇದ್ದರೆ, ಪರಿಣಾಮ ಕೋವಿಡ್ ಎರಡನೇ ಅಲೆಗಿಂತ ಕೆಟ್ಟದಾಗಿರಲಿದೆ. ಜೀವನವಿದ್ದರೆ ನಮಗೆ ಜಗತ್ತು ಇದೆ ಎಂದು ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಶೇಖರ್ ಯಾದವ್ ಹೇಳಿದ್ದರು.