ಮಹಾರಾಷ್ಟ್ರ: ಒಳಚರಂಡಿಗೆ ಇಳಿದ ನಾಲ್ವರು ಪೌರ ಕಾರ್ಮಿಕರು ಸಾವು

Update: 2021-12-24 17:57 GMT

ಸಾಂದರ್ಭಿಕ ಚಿತ್ರ

ಸೋಲಾಪುರ (ಮಹಾರಾಷ್ಟ್ರ), ಡಿ. 24: ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಅಕ್ಕಲ್ಕೋಟ್‌ನಲ್ಲಿ ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಇಳಿದ ಮಹಾನಗರ ಪಾಲಿಕೆಯ ನಾಲ್ವರು ಕಾರ್ಮಿಕರು ಸಾವನ್ನಪ್ಪಿದ್ದಾರೆ. 

ಒಳಚರಂಡಿ ವ್ಯವಸ್ಥೆ ಸರಿಪಡಿಸಲು ಗುರುವಾರ ನಾಲ್ವರು ಪೌರ ಕಾರ್ಮಿಕರು ಇಳಿದಿದ್ದರು. ಅವರಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಇನ್ನಿಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಶುಕ್ರವಾರ ಬೆಳಗ್ಗೆ ಮೃತಪಟ್ಟರು. ಈ ಘಟನೆ ಕುರಿತಂತೆ ಸ್ಥಳೀಯರು ಸೋಲಾಪುರ ಮಹಾನಗರ ಪಾಲಿಕೆಯ ನಿರ್ಲಕ್ಷವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

ಒಳಚರಂಡಿ ಕೆಲಸ ನಿರ್ವಹಿಸುವ ಪೌರ ಕಾರ್ಮಿಕರಿಗೆ ಮಹಾನಗರ ಪಾಲಿಕೆ ಅಗತ್ಯ ಇರುವ ಸುರಕ್ಷಾ ಸಾಧನಗಳನ್ನು ಒದಗಿಸಿಲ್ಲ ಎಂದು ಅವರು ಆರೋಪಿಸಿದ್ದಾರೆ. ಈ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿಯ ನಿರ್ಮಾಣ ಕಾಮಗಾರಿ ಹಲವು ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಕಾರ್ಮಿಕರನ್ನು ರಕ್ಷಿಸಲು ನಾವು ಪ್ರಯತ್ನಿಸಿದೆವು. ಆದರೆ, ಸುರಕ್ಷಾ ಸಾಧನಗಳ ಕೊರತೆಯಿಂದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರು ಎಂದು ಸ್ಥಳೀಯರು ಹೇಳಿದ್ದಾರೆ. ಈ ಘಟನೆಯನ್ನು ಸಾಮಾಜಿಕ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಅಲ್ಲದೆ, ಕಾಮಗಾರಿಯಲ್ಲಿ ಭಾಗಿಯಾಗಿರುವ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಡಳಿತವನ್ನು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News