ಸಂಸತ್,ವಿಧಾನಸಭಾ ಅಧಿವೇಶನಗಳಿಗೆ ವ್ಯತ್ಯಯಗಳ ಕುರಿತು ಕಳವಳ ವ್ಯಕ್ತಪಡಿಸಿದ ಲೋಕಸಭಾ ಸ್ಪೀಕರ್

Update: 2021-12-24 18:06 GMT
ಲೋಕಸಭಾ ಸ್ಪೀಕರ್ ಓಂ ಬಿರ್ಲಾ(photo:PTI) 

ಗುವಾಹಟಿ,ಡಿ.24: ಸಂಸತ್ ಮತ್ತು ರಾಜ್ಯ ವಿಧಾನಸಭಾ ಅಧಿವೇಶನಗಳ ಸಂದರ್ಭದಲ್ಲಿ ವ್ಯತ್ಯಯಗಳ ಕುರಿತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಶುಕ್ರವಾರ ಇಲ್ಲಿ ಕಳವಳಗಳನ್ನು ವ್ಯಕ್ತಪಡಿಸಿದರು.

ಅಸ್ಸಾಂ ವಿಧಾನಸಭೆಯನ್ನುದ್ದೇಶಿಸಿ ಮಾತನಾಡಿದ ಅವರು,ಸದನ ಕಲಾಪಗಳಿಗೆ ಅಡ್ಡಿಯನ್ನುಂಟು ಮಾಡುವುದು ನೈತಿಕವಾಗಿ ಅಥವಾ ಸಂವಿಧಾನಾತ್ಮಕವಾಗಿ ಸರಿಯಲ್ಲ. ವ್ಯತ್ಯಯಗಳು ಪೂರ್ವಯೋಜಿತವಾಗಿದ್ದಾಗ ಹೆಚ್ಚು ಆತಂಕಕಾರಿಯಾಗಿವೆ ಎಂದು ಹೇಳಿದರು.

ಪ್ರಜಾಪ್ರಭುತ್ವವು ಚರ್ಚೆಗಳು ಮತ್ತು ಮಾತುಕತೆಗಳನ್ನು ಆಧರಿಸಿದೆ. ಆದರೆ ಸದನದ ಚರ್ಚೆಗಳಿಗೆ ನಿರಂತರ ಅಡ್ಡಿ ಮತ್ತು ಶಿಷ್ಟಾಚಾರ ಪಾಲನೆಯ ಕೊರತೆ ಕಳವಳದ ವಿಷಯವಾಗಿದೆ ಎಂದ ಅವರು,ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಸಹಜ,ಆದರೆ ಅದು ಬಿಕ್ಕಟ್ಟಿಗೆ ಕಾರಣವಾಗಬಾರದು ಎಂದರು.

ಸಂವಾದಿಸಬಹುದಾದ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸುವಂತೆ ಮತ್ತು ಸದನವು ಜನರ ಆಶಯಗಳು ಹಾಗೂ ಆಕಾಂಕ್ಷೆಗಳನ್ನು ಈಡೇರಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸುವುದನ್ನು ಖಚಿತ ಪಡಿಸುವಂತೆ ಅವರು ರಾಜಕೀಯ ಪಕ್ಷಗಳಿಗೆ ಕಿವಿಮಾತು ಹೇಳಿದರು.

ವ್ಯತ್ಯಯ ಮತ್ತು ಕಲಾಪ ಮುಂದೂಡಿಕೆ ಭಾರತದ ಪ್ರಜಾಸತ್ತಾತ್ಮಕ ಸಂಪ್ರದಾಯಗಳ ಭಾಗಗಳಲ್ಲ ಎಂದು ಹೇಳಿದ ಬಿರ್ಲಾ,ಜನರ ಆಶಯಗಳಿಗೆ ತಕ್ಕಂತೆ ನಡೆದುಕೊಳ್ಳುವಂತೆ ಶಾಸಕರಿಗೆ ಸೂಚಿಸಿದರು.

ಭಾರತದಂತಹ ವೈವಿಧ್ಯಮಯ ದೇಶವು ಸಂಸದೀಯ ಪ್ರಜಾಪ್ರಭುತ್ವದಿಂದ ಒಗ್ಗಟ್ಟಾಗಿದೆ ಮತ್ತು ದೇಶವು ಸ್ವಾತಂತ್ರದ 75 ವರ್ಷಗಳ ಸಂಭ್ರಮದಲ್ಲಿರುವಾಗ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿರುವ ಸದನವು ಹೇಗೆ ಕಾರ್ಯ ನಿರ್ವಹಿಸುತ್ತಿದೆ ಎನ್ನುವುದನ್ನು ಪುನರ್ಪರಿಶೀಲಿಸುವ ಅಗತ್ಯವಿದೆ ಎಂದರು.

ಅಸ್ಸಾಂ ರಾಜ್ಯವು ವೈವಿಧ್ಯತೆಯಲ್ಲಿ ಏಕತೆಯ ಜ್ವಲಂತ ಉದಾಹರಣೆಯಾಗಿದೆ ಎಂದು ಅವರು,ಅದು ಸಮೃದ್ಧ ವೈವಿಧ್ಯಪೂರ್ಣ ಈಶಾನ್ಯ ಭಾರತವನ್ನು ಭಾರತದ ಇತರ ಭಾಗದೊಂದಿಗೆ ಸಂಪರ್ಕಿಸುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News