ಸೌಹಾರ್ದಕ್ಕೆ ಹುಳಿ ಹಿಂಡಲು ಲಿಂಬೆಹಣ್ಣು ಕೃಷಿಗೆ ಆದ್ಯತೆ...!

Update: 2021-12-25 19:30 GMT

 ‘ಉದ್ಯೋಗ ನೀತಿ...ಉದ್ಯೋಗ ನೀತಿ’ ಎಂದು ಮುಖ್ಯಮಂತ್ರಿಯವರು ಕೂಗುತ್ತಿದ್ದರೆ, ಪತ್ರಕರ್ತ ಎಂಜಲು ಕಾಸಿಗೆ ಅದು ‘ಕಳ್ಳೆಪುರಿ ಕಳ್ಳೆಪುರಿ’ ಎಂದು ಕೂಗಿದಂತೆ ಕೇಳಿತು. ಪತ್ರಕರ್ತ ಎಂಜಲು ಕಾಸಿ ಅತ್ತ ಧಾವಿಸಿ, ‘ಎಷ್ಟು ಸಾರ್ ಕಳ್ಳೆಪುರಿಗೆ?’ ಎಂದು ಕೇಳಿಯೇ ಬಿಟ್ಟ.
ಮುಖ್ಯಮಂತ್ರಿಯವರು ಒಮ್ಮೆಲೆ ಸಿಟ್ಟಾದರು ‘‘ನನ್ನನ್ನು ನೋಡಿ ಕಳ್ಳೆಪುರಿ ಮಾರುವವನಂತೆ ಕಾಣುತ್ತಿದೆಯೆ? ನಿರುದ್ಯೋಗಿಗಳಿಗಾಗಿ ಉದ್ಯೋಗ ನೀತಿಯನ್ನು ಜಾರಿಗೊಳಿಸಲು ಮುಂದಾಗುತ್ತಿದ್ದೇನೆ...’’
ಕಾಸಿ ಒಮ್ಮೆಲೆ ಬೆದರಿ ‘‘ಈ ನೀತಿಯಿಂದ ಇನ್ನಷ್ಟು ಜನರು ಉದ್ಯೋಗ ಕಳೆದುಕೊಳ್ಳಲಿದ್ದಾರೆಯೇ? ’’ ಕೇಳಿದ.
‘‘ಇದು ಜನರಿಗೆ ಇನ್ನಷ್ಟು ಉದ್ಯೋಗಗಳನ್ನು ಕೊಡುವುದಕ್ಕಾಗಿ ಜಾರಿಗೊಳಿಸುವ ನೀತಿ ಕಣ್ರೀ’ ಮುಖ್ಯಮಂತ್ರಿ ಹೇಳಿದರು.

‘‘ಜನರಿಗೆ ಬೇಕಾಗಿರುವುದು ಉದ್ಯೋಗ ನೀತಿಯಲ್ಲ, ಉದ್ಯೋಗ ಸಾರ್...’’ ಎಂದು ಕಾಸಿ ಸ್ಪಷ್ಟ ಪಡಿಸಿದ. ‘‘ಜನರಿಗೆ ಬೇಕಾದದ್ದು ಏನು ಎನ್ನುವುದು ನಮಗೆ ಚೆನ್ನಾಗಿ ಗೊತ್ತಿದೆ. ಆದುದರಿಂದಲೇ ಮುಂದಿನ ದಿನಗಳಲ್ಲಿ ಆಹಾರ ನೀತಿ, ಶಿಕ್ಷಣ ನೀತಿ, ಆರೋಗ್ಯ ನೀತಿ, ಸಾರಿಗೆ ನೀತಿ...ಹೀಗೆ ಹತ್ತು ಹಲವು ನೀತಿಗಳನ್ನು ತಂದು ಜನರನ್ನು ಉದ್ದರಿಸಲಿದ್ದೇವೆ...ಹಾಗೆಯೇ ಬೇರೆ ಬೇರೆ ಕಾಯ್ದೆಗಳನ್ನೂ ಜಾರಿಗೊಳಿಸಲಿದ್ದೇವೆ. ಮತಾಂತರ ನಿಷೇಧ ಕಾಯ್ದೆ, ಪ್ರೇಮ ನಿಷೇಧ ಕಾಯ್ದೆ, ಹಾಸ್ಯ ನಿಷೇಧ ಕಾಯ್ದೆ, ಸೌಹಾರ್ದ ನಿಷೇಧ ಕಾಯ್ದೆ, ಸಿಡಿ ನಿಷೇಧ ಕಾಯ್ದೆ... ಹೀಗೆ ಹಿಂದೆಂದೂ ಯಾವ ಸರಕಾರಗಳೂ ಜಾರಿಗೆ ತರದ ಬಗೆ ಬಗೆಯ ಕಾಯ್ದೆಗಳನ್ನು ಜಾರಿಗೆ ತಂದು ವಿಶ್ವದಲ್ಲೇ ಕರ್ನಾಟಕವನ್ನು ನಂ. 1 ಮಾಡಲಿದ್ದೇವೆ’’ ಮುಖ್ಯಮಂತ್ರಿಯವರು ತಮ್ಮ ಮುಂದಿನ ಯೋಜನೆಗಳನ್ನು ವಿವರಿಸಿದರು.
‘‘ಉದ್ಯೋಗ ನೀತಿಯಿಂದ ಜನರಿಗೆ ಏನೇನು ಉದ್ಯೋಗಗಳು ಸಿಗಲಿವೆ? ಎಲ್ಲ ಉದ್ಯಮಗಳೂ ಒಂದೊಂದಾಗಿ ಮುಚ್ಚುತ್ತಿವೆಯಲ್ಲ? ’’ ಕಾಸಿ ಕುತೂಹಲದಿಂದ ಕೇಳಿದ.

‘‘ಉದ್ಯಮಗಳು ಮುಚ್ಚುತ್ತಿರುವ ಕಾರಣದಿಂದ ನಾವು ಯುವಕರಿಗೆ ಕೆಲಸ ಕೊಡುವುದಕ್ಕಾಗಿಯೇ ಗೋಹತ್ಯಾ ನಿಷೇಧ ಕಾಯ್ದೆ, ಮತಾಂತರ ಕಾಯ್ದೆ ಜಾರಿಗೆ ತಂದಿರುವುದು. ಇದರಿಂದ ಹಲವು ನಿರುದ್ಯೋಗಿ ಹುಡುಗರಿಗೆ ಆತ್ಮನಿರ್ಭರ ಅಡಿಯಲ್ಲಿ ಕೆಲಸ ಸಿಗುತ್ತದೆ. ಅಂದರೆ, ದನ ಸಾಗಾಟಗಾರರನ್ನು ತಡೆದು ಅವರನ್ನು ದರೋಡೆ ಮಾಡಿ ಹಣ ಸಂಪಾದಿಸುವುದು, ಮತಾಂತರದ ಹೆಸರಲ್ಲಿ ಲೂಟಿ ಮಾಡುವುದು, ಬೆದರಿಸಿ ಹಣ ಕೀಳುವುದು...ಹೀಗೆ ಯುವಕರನ್ನು ಸ್ವಯಂಉದ್ಯೋಗಿಗಳಾಗಿಸಿದ್ದೇವೆ. ಇಂದು ಇವರೆಲ್ಲ ಸರಕಾರಿ ಕೆಲಸವನ್ನು ಅವಲಂಬಿಸುತ್ತಿಲ್ಲ. ಬೀದಿಯಲ್ಲಿ ಬೆವರು ಸುರಿಸಿ, ರಕ್ತ ಹರಿಸಿ ದುಡಿದು ತಮ್ಮ ಅನ್ನವನ್ನು ತಾವೇ ಉಣ್ಣುತ್ತಿದ್ದಾರೆ...ಮುಂದೆ ಪ್ರೇಮ ನಿಷೇಧ ಕಾಯ್ದೆಗಳನ್ನು ಜಾರಿಗೊಳಿಸಲಿದ್ದೇವೆ. ಯಾವುದೇ ಜೋಡಿಗಳು ಮದುವೆಯಾಗದೇ ಓಡಾಡುತ್ತಿದ್ದರೆ ಅವರನ್ನು ತಡೆಯುವ, ಪ್ರಶ್ನಿಸುವ, ಅವರ ಮೊಬೈಲ್‌ಗಳನ್ನು ಕಿತ್ತುಕೊಳ್ಳುವ ಅಧಿಕಾರವನ್ನು ನಾವು ಯುವಕರಿಗೆ ನೀಡಲಿದ್ದೇವೆ. ಹಾಗೆಯೇ ‘ಕಿತ್ತುಕೊಂಡವರೇ ಮೊಬೈಲ್‌ನ ಒಡೆಯರು’ ಎನ್ನುವ ‘ಉಳುವವನೇ ಭೂಮಿಯ ಒಡೆಯ’ ರೀತಿಯಲ್ಲಿ ಕಾನೂನು ಜಾರಿಗೆ ತರಲಿದ್ದೇವೆ. ಈ ಮೂಲಕ ಯುವಕರಿಗೆ ತಾವು ಕಷ್ಟಪಟ್ಟು ಬೆವರು ಸುರಿಸಿ, ರಕ್ತ ಹರಿಸಿ ಕಿತ್ತುಕೊಂಡ ಮೊಬೈಲ್‌ಗಳನ್ನು ತಮ್ಮದಾಗಿಸಿಕೊಳ್ಳಲು ಸಾಧ್ಯವಾಗುತ್ತದೆ. ‘ಸೌಹಾರ್ದ ನಿಷೇಧ ಕಾಯ್ದೆ’ಯ ಮೂಲಕ ಎಲ್ಲಾದರೂ ಸೌಹಾರ್ದಗಳು ಕಂಡು ಬಂದರೆ ಅದನ್ನು ಕೆಡಿಸುವುದಕ್ಕಾಗಿಯೇ ಯುವಕರನ್ನು ನೇಮಿಸಲಿದ್ದೇವೆ. ಇದರಿಂದಲೂ ವ್ಯಾಪಕ ನಿರುದ್ಯೋಗ ಸಮಸ್ಯೆ ನಿವಾರಣೆಯಾಗುತ್ತದೆ. ಒಂದು ಕಾಲೇಜಿನಲ್ಲಿ ಬೇರೆ ಬೇರೆ ಧರ್ಮದ ಸ್ನೇಹಿತರು ಒಟ್ಟಾಗಿ ಆಟವಾಡುತ್ತಿದ್ದಾರೆ ಎಂದಾದರೆ ತಕ್ಷಣ ಅಲ್ಲಿಗೆ ನುಗ್ಗಿ ಅವರ ಹಾಲಿನಂತಹ ಸಂಬಂಧಕ್ಕೆ ಹುಳಿ ಹಿಂಡುವ ಕೆಲಸವನ್ನು ಬೇರೆ ಬೇರೆ ರೀತಿಯಲ್ಲಿ ಮಾಡಲು ಬೇರೆ ಬೇರೆ ವಿಭಾಗಗಳನ್ನು ತೆರೆಯಲಿದ್ದೇವೆ. ಇದರಿಂದ ಲಿಂಬೆ ಹುಳಿ ಬೆಳೆಸುವ ರೈತರಿಗೆ ಭಾರೀ ಬೇಡಿಕೆ ಸಿಗುತ್ತದೆ. ಲಿಂಬೆ ಹುಳಿಗಳನ್ನು ರೈತರು ನೇರವಾಗಿ ಈ ಹುಳಿ ಹಿಂಡುವ ಯುವಕರಿಗೇ ವಿತರಿಸುವ ವ್ಯವಸ್ಥೆಯನ್ನೂ ಮಾಡಲಿದ್ದೇವೆ. ಹಾಸ್ಯ ನಿಷೇಧ ಕಾಯ್ದೆಯೂ ಅಭಿವೃದ್ಧಿಯಲ್ಲಿ ಮತ್ತು ಯುವಕರಿಗೆ ಉದ್ಯೋಗ ನೀಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇಂದು ಸರಕಾರ ನೋಟು ನಿಷೇಧ, ಲಾಕ್‌ಡೌನ್, ಬೆಲೆಯೇರಿಕೆ, ಪೆಟ್ರೋಲ್ ಬೆಲೆಯೇರಿಕೆ, ಸಿಲಿಂಡರ್ ಬೆಲೆಯೇರಿಕೆ ಇತ್ಯಾದಿಗಳು ಮಾಡಿದ ಬಳಿಕವೂ ಜನರು ನಗುತ್ತಿದ್ದಾರೆ. ಯಾಕೆಂದರೆ ಇವರನ್ನು ಕೆಲವು ದೇಶದ್ರೋಹಿ ಹಾಸ್ಯಗಾರರು ನಗಿಸುತ್ತಿದ್ದಾರೆ. ಆದುದರಿಂದ ಇವರ ಮೇಲೆ ಕ್ರಮ ತೆಗೆದುಕೊಳ್ಳಲು ಕಾನೂನಿಗೆ ತಿದ್ದುಪಡಿ ತರಲಿದ್ದೇವೆ. ವ್ಯಂಗ್ಯವನ್ನು ಯುಎಪಿಎ ಕಾಯ್ದೆಯಡಿ ಸೇರಿಸಲಿದ್ದೇವೆ. ಯಾರಾದರೂ ಸಾರ್ವಜನಿಕವಾಗಿ ನಕ್ಕರೆ, ‘ತಾನು ನಕ್ಕಿದ್ದು ಸರಕಾರವನ್ನು, ಮೋದಿಯನ್ನು ನೆನೆದು ಅಲ್ಲ’ ಎನ್ನುವುದನ್ನು ಸಾಬೀತು ಮಾಡಬೇಕಾಗುತ್ತದೆ. ಸಾರ್ವಜನಿಕವಾಗಿ ಅಥವಾ ಯಾವುದೇ ಕೊಠಡಿಯೊಳಗೆ ನಾಲ್ಕು ಜನರಿಗಿಂತ ಹೆಚ್ಚು ಜನ ಸೇರಿ ನಕ್ಕರೆ ಅವರ ಮೇಲೆ ಕೇಸು ಜಡಿಯಲಾಗುತ್ತದೆ. ಹಾಗೆಯೇ ಅಮಾಯಕ ಶಾಸಕರು, ಸಂಸದರ ಖಾಸಗಿ ಉದ್ರೇಕಗಳನ್ನು ಸೆರೆ ಹಿಡಿಯುವ ದೇಶದ್ರೋಹಿಗಳಿಗೆ ಕಡಿವಾಣ ಹಾಕಲು ಸಿಡಿ ನಿಷೇಧ ಕಾನೂನು ಜಾರಿಗೆ ತರಲಿದ್ದೇವೆ. ಇದರಿಂದಲೂ ಯುವತಿಯರಿಗೆ ಹಲವು ಲಾಭಗಳಿವೆ. ಮುಖ್ಯವಾಗಿ, ಈ ಕಾನೂನು ಜಾರಿಗೆ ಬಂದರೆ ಯುವತಿಯರು ಸಚಿವರ ಬಳಿ ಧೈರ್ಯದಿಂದ ಉದ್ಯೋಗ ಕೇಳಲು ಹೋಗಬಹುದು. ಅವರಿಗೆ ಈ ಕಾನೂನು ಎಲ್ಲ ರೀತಿಯ ರಕ್ಷಣೆಯನ್ನು ನೀಡುತ್ತದೆ...ಇದು ಮಹಿಳಾ ಸಬಲೀಕರಣದ ಭಾಗವೂ ಆಗಿದೆ...’’ ಒಂದೇ ಉಸಿರಲ್ಲಿ ತನ್ನ ಯೋಜನೆಗಳನ್ನು ಬಿಡಿಸಿಟ್ಟು ಉಶ್ಶಪ್ಪ ಎಂದು ಮುಖ್ಯಮಂತ್ರಿಗಳು ಕುರ್ಚಿಯಲ್ಲಿ ಕುಕ್ಕರಿಸಿ ಬಿಟ್ಟರು. ‘‘ಸಾರ್...ಈ ಕಾಯ್ದೆಗಳನ್ನು ಜಾರಿಗೊಳಿಸುವುದಲ್ಲದೆ ಬೇರೆ ಯಾವುದಾದರೂ ಯೋಜನೆ ನಿಮ್ಮಲ್ಲಿದೆಯೆ?’’ ಕಾಸಿ ಕೇಳಿದ.
‘‘ಇದೆ ಇದೆ’’ ಮುಖ್ಯಮಂತ್ರಿ ಹೇಳಿದರು.
‘‘ಅದೇನು ಸಾರ್...’’
‘‘ವಿಶ್ವವಿದ್ಯಾಲಯಗಳಲ್ಲಿ ಇನ್ನಷ್ಟು ಹೊಸ ಬಗೆಯ ಕಾಯ್ದೆಗಳನ್ನು ಹೇಗೆ ಜಾರಿಗೊಳಿಸಬಹುದು ಎನ್ನುವುದನ್ನು ಸಂಶೋಧನೆ ಮಾಡಲು ಹೊಸ ಸಂಶೋಧನಾ ವಿಭಾಗವನ್ನು ತೆರೆಯಲಿದ್ದೇವೆ. ಅಲ್ಲಿ ಬಗೆ ಬಗೆಯ ಕಾಯ್ದೆಗಳನ್ನು ಸಂಶೋಧಿಸಿ ಅವುಗಳನ್ನು ವಿಧಾನಸಭೆಯಲ್ಲಿ ಜಾರಿಗೊಳಿಸಲಾಗುವುದು...’’
‘‘ಸಾರ್...ಈ ಕಾಯ್ದೆ ಜಾರಿ ನಿಷೇಧ ಕಾಯ್ದೆಯೊಂದನ್ನು ಜಾರಿಗೊಳಿಸಿದರೆ ಹೇಗೆ ಸಾರ್..’’ ಕಾಸಿ ಸಲಹೆ ನೀಡಿದ.
‘‘ಒಳ್ಳೆಯ ಯೋಜನೆ. ಶೀಘ್ರದಲ್ಲೇ ಕಾಯ್ದೆ ಜಾರಿ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲಿದ್ದೇವೆ...’’ ಎಂದವರೇ ಅದೇನೋ ಅನುಮಾನ ಬಂದು ಕಾಸಿಯ ಕಡೆಗೆ ನೋಡಿದರು. ಅವನು ಅದಾಗಲೇ ಕಾಲಿಗೆ ಬುದ್ಧಿ ಹೇಳಿದ್ದ.

Writer - ಚೇಳಯ್ಯ

contributor

Editor - ಚೇಳಯ್ಯ

contributor

Similar News