45,000 ಕೋ.ರೂ.ಗಳ ಹಗರಣ ಪ್ರಕರಣದಲ್ಲಿ ಕ್ಯಾಮೆರಾ ಕಣ್ಗಾವಲಿನಲ್ಲಿ ಆರೋಪಿಯ ವಿಚಾರಣೆ

Update: 2021-12-25 18:32 GMT
ಸಾಂದರ್ಭಿಕ ಚಿತ್ರ:PTI

ಹೊಸದಿಲ್ಲಿ,ಡಿ.25: ಪರ್ಲ್ಸ್ ಗ್ರೂಪ್ ನ ಸಿಎಂಡಿ ಎನ್.ಎಸ್.ಭಂಗೂ ವಿವಿಧ ರಾಜ್ಯಗಳಲ್ಲಿಯ ಐದು ಕೋಟಿಗೂ ಅಧಿಕ ಹೂಡಿಕೆದಾರರಿಗೆ 45,000 ಕೋ.ರೂ.ಗಳನ್ನು ವಂಚಿಸಿರುವ ಹಗರಣಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಿಬಿಐನಿಂದ ಆಡಿಯೋವಿಶುವಲ್ ಅಥವಾ ಶ್ರವಣದೃಶ್ಯ ಸಿಸಿಟಿವಿ ಕ್ಯಾಮೆರಾದ ಕಣ್ಗಾವಲಿನಲ್ಲಿ ವಿಚಾರಣೆಯನ್ನು ನಡೆಸುವಂತೆ ಮತ್ತು ವಿಚಾರಣೆಯುದ್ದಕ್ಕೂ ಅರ್ಜಿದಾರ/ಆರೋಪಿಯ ವಕೀಲರ ಉಪಸ್ಥಿತಿಗೆ ಅನುಮತಿ ನೀಡುವಂತೆ ದಿಲ್ಲಿಯ ವಿಶೇಷ ನ್ಯಾಯಾಲಯವು ನಿರ್ದೇಶನ ನೀಡಿದೆ.

ಪ್ರಸಕ್ತ ಪ್ರಕರಣದಲ್ಲಿ ಮಹತ್ವದ ಸುಳಿವುಗಳನ್ನು ಪಡೆಯಲು ಮತ್ತು ಆರೋಪಿಗಳು ಬಳಸಿದ್ದ ಕಾರ್ಯತಂತ್ರವನ್ನು ಅರಿತುಕೊಳ್ಳಲು ಹಾಗೂ ಈ ಆರೋಪಿಗಳು ಮತ್ತು ಇತರ ಆರೋಪಿಗಳ ನಡುವಿನ ಬೃಹತ್ ಒಳಸಂಚಿನ ಸಮಗ್ರ ಪರಿಣಾಮಗಳನ್ನು ಲೆಕ್ಕಹಾಕಲು ಈ ಆರೋಪಿಗಳ ಕಸ್ಟಡಿ ವಿಚಾರಣೆಯು ಅಗತ್ಯವಾಗಿರುವಂತೆ ಕಂಡು ಬರುತ್ತಿದೆ ಎಂದು ವಿಶೇಷ ನ್ಯಾಯಾಧೀಶ ಸಂಜೀವ ಅಗರವಾಲ್ ಹೇಳಿದರು.

45,000 ಕೋ.ರೂ.ಗಳ ಪೊಂಝಿ ಸ್ಕೀಮ್‌ಗೆ  ಸಂಬಂಧಿಸಿದಂತೆ ಸಿಬಿಐ ಡಿ.23ರಂದು ಎಂ.ಕೆ.ಮಹಾಜನ ಮತ್ತು ಇತರ 10 ಜನರನ್ನು ಬಂಧಿಸಿದ್ದು,ನ್ಯಾಯಾಲಯವು ಅವರಿಗೆ ಎರಡು ದಿನಗಳ ಸಿಬಿಐ ಕಸ್ಟಡಿಯನ್ನು ವಿಧಿಸಿತ್ತು. ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಸಿಬಿಐ ಇಂದು ಆರೋಪಿಗಳನ್ನು ಮತ್ತೆ ನ್ಯಾಯಾಲಯದಲ್ಲಿ ಹಾಜರುಪಡಿಸಿತ್ತು.

ಆರೋಪಿಗಳ ಪೈಕಿ ಓರ್ವನ ಪರ ವಕೀಲರಾದ ವಿಜಯ ಅಗರವಾಲ್,ರಿಧಂ ಅಗರವಾಲ್ ಮತ್ತು ಸೌರವ ಚೌಧರಿ ಅವರು ನ್ಯಾಯಯುತ ತನಿಖೆಯನ್ನು ಖಚಿತಪಡಿಸಲು ಪರಮವೀರ್ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ನೀಡಿದ್ದ ನಿರ್ದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಮುಖ್ಯವಾಗಿದೆ ಎಂದು ವಾದಿಸಿದ್ದರು. ವಿಚಾರಣೆ ಅವಧಿಯಲ್ಲಿ ವಕೀಲರ ಉಪಸ್ಥಿತಿಗೂ ಅವಕಾಶ ನೀಡುವಂತೆ ಅವರು ಕೋರಿದ್ದರು.

ಸರ್ವೋಚ್ಚ ನ್ಯಾಯಾಲಯದ ನಿರ್ದೇಶದಂತೆ ಸಿಬಿಐ ಸಿಸಿಟಿವಿ ಕಣ್ಗಾವಲಿನಲ್ಲಿ ತನ್ನ ತನಿಖೆಯನ್ನು ನಡೆಸಬೇಕಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News