×
Ad

​ಭಾರತಕ್ಕಿಂತ ಮೊದಲೇ ಈ ದೇಶಗಳಲ್ಲಿ ಮಕ್ಕಳಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಿಕೆ ಆರಂಭ

Update: 2021-12-26 07:51 IST

ಹೊಸದಿಲ್ಲಿ: ದೇಶದಲ್ಲಿ 2022ರ ಜನವರಿ 3ರಿಂದ 15-18 ವಯಸ್ಸಿನವರಿಗೆ ಕೋವಿಡ್-19 ವಿರುದ್ಧದ ಲಸಿಕೆ ನೀಡಲು ಆರಂಭಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಘೋಷಿಸಿದ್ದಾರೆ. ಆದರೆ ವಿಶ್ವಾದ್ಯಂತ ಹಲವು ದೇಶಗಳು ಭಾರತಕ್ಕಿಂತ ಮುನ್ನವೇ ಈ ಕ್ರಮ ಕೈಗೊಂಡಿವೆ.

ಪುಟ್ಟ ಮಕ್ಕಳೂ ಸೇರಿದಂತೆ 18 ವರ್ಷಕ್ಕಿಂತ ಕೆಳ ವಯಸ್ಸಿನವರಿಗೆ ಹಲವು ದೇಶಗಳು ಲಸಿಕೆ ನೀಡಲು ಆರಂಭಿಸಿವೆ. ಒಮೈಕ್ರಾನ್ ಭೀತಿಯ ಹಿನ್ನೆಲೆಯಲ್ಲಿ ಈಕ್ವೆಡಾರ್ ಗುರುವಾರ ಐದು ವರ್ಷ ಮೇಲ್ಪಟ್ಟ ಎಲ್ಲ ಮಕ್ಕಳಿಗೆ ಲಸಿಕೆ ನೀಡಿಕೆಯನ್ನು ಕಡ್ಡಾಯಪಡಿಸಿದ ಮೊದಲ ದೇಶ ಎನಿಸಿಕೊಂಡಿದೆ.

ಇಟಲಿ 5-11 ವರ್ಷದ ಮಕ್ಕಳಿಗೆ ಲಸಿಕೆ ನೀಡಲು ಡಿಸೆಂಬರ್ 1ರಂದು ಒಪ್ಪಿಗೆ ನೀಡಿದೆ. ಫ್ರಾನ್ಸ್ ಅಧಿಕಾರಿಗಳು ಕೂಡಾ 5 ರಿಂದ 11 ವರ್ಷದ ಮಕ್ಕಳು ಲಸಿಕೆ ಪಡೆಯಲು ಅರ್ಹರು ಎಂದು ಬುಧವಾರ ಘೋಷಿಸಿದೆ. ಅಮೆರಿಕದಲ್ಲಿ ಈ ವಯೋಮಿತಿಯ ಮಕ್ಕಳಿಗೆ ಲಸಿಕೆ ನೀಡುವಂತೆ ನವೆಂಬರ್ 2ರಂದು ಶಿಫಾರಸ್ಸು ಮಾಡಲಾಗಿದೆ.

ಅಂತೆಯೇ ಕೆನಡಾದಲ್ಲಿ ನವೆಂಬರ್ 19ರಂದು 5-11 ವಯೋವರ್ಗದ ಮಕ್ಕಳಿಗೆ ಲಸಿಕೆ ನೀಡಲು ಅನುಮೋದನೆ ನೀಡಲಾಗಿತ್ತು. ಹಂಗೇರಿ ಕಳೆದ ಮೇ ತಿಂಗಳಲ್ಲೇ 16-18 ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡಿಕೆ ಅರಂಭಿಸಿತ್ತು. ಬ್ರಿಟನ್‌ನ ಲಸಿಕೆ ಸಮಿತಿ ಕೂಡಾ 12-15ರ ವಯೋಮಾನದ ಯುವಕರಿಗೆ ಎರಡನೇ ಡೋಸ್ ಲಸಿಕೆ ನೀಡಲೂ ಶಿಫಾರಸ್ಸು ಮಾಡಿದೆ.

ಹನ್ನೆರಡು ವರ್ಷಕ್ಕಿಂತ ಕೆಳಗಿನವರಿಗೂ 2022ರ ಆರಂಭದಿಂದ ಲಸಿಕೆ ನೀಡಲು ಜರ್ಮನಿ ಮುಂದಾಗಿದೆ. ಹದಿಹರೆಯದವರಿಗೆ ಕಳೆದ ಆಗಸ್ಟ್‌ನಿಂದಲೇ ಇಲ್ಲಿ ಲಸಿಕೆ ನೀಡಿಕೆ ಆರಂಭವಾಗಿದೆ. ಎಸ್ಟೋನಿಯಾ, ಡೆನ್ಮಾರ್ಕ್, ಗ್ರೀಸ್, ಐರ್ಲೆಂಡ್, ಇಟಲಿ, ಲಿಥೂನಿಯಾ, ಸ್ಪೇನ್, ಸ್ವೀಡನ್, ಫಿನ್ಲೆಂಡ್ ಕೂಡಾ 12 ವರ್ಷ ಮೇಲ್ಪಟ್ಟವರಗೆ ಲಸಿಕೆ ನೀಡಿಕೆ ಆರಂಭಿಸಿವೆ. ಹಾಲೆಂಡ್‌ನ ಅಂಕಿ ಅಂಶಗಳ ಪ್ರಕಾರ 12-17 ವಯೋವರ್ಗದ ಶೇಕಡ 63ರಷ್ಟು ಮಂದಿಗೆ ನವೆಂಬರ್ 28ರ ವೇಳೆಗೆ ಎರಡೂ ಡೋಸ್ ಲಸಿಕೆ ನೀಡಲಾಗಿದೆ.

ಸ್ವಿಡ್ಝರ್‌ಲೆಂಡ್, ನಾರ್ವೆ, ಬಹರೈನ್, ಇಸ್ರೇಲ್, ಒಮನ್, ಸೌದಿ ಅರೇಬಿಯಾ ಯುಎಇ ಕೂಡಾ ಐದು ವರ್ಷದ ಮಕ್ಕಳಿಗೇ ಲಸಿಕೆ ನೀಡಲು ಅನುಮೋದನೆ ನೀಡಿವೆ. ಜೋರ್ಡಾನ್, ಮೊರಾಕ್ಕೊ, ಗುನಿಯಾ, ನಮೀಬಿಯಾ, ದಕ್ಷಿಣ ಆಫ್ರಿಕಾ ಕೂಡಾ 12 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತಿವೆ. ಜಿಂಬಾಬ್ವೆ 14 ವರ್ಷ ಮೇಲ್ಪಟ್ಟವರನ್ನು ಲಸಿಕೆ ಪಡೆಯಲು ಅರ್ಹರನ್ನಾಗಿಸಿದೆ. ಈಜಿಪ್ಟ್, ಚೀನಾ, ಹಾಂಕಾಂಗ್, ದಕ್ಷಿಣ ಕೊರಿಯಾ, ಆಸ್ಟ್ರೇಲಿಯಾ, ಫಿಲಿಫೀನ್ಸ್, ವಿಯೇಟ್ನಾಂ, ಕ್ಯೂಬಾ, ವೆನೆಜುವೆಲಾ, ಅರ್ಜೆಂಟೀನಾ, ಚಿಲಿ, ಎಲ್ ಸಾಲ್ವಡೋರ್‌ನಂಥ ದೇಶಗಳು ಕೂಡಾ ಈ ವಿಚಾರದಲ್ಲಿ ಭಾರತಕ್ಕಿಂತ ಮೊದಲೇ ನಿರ್ಧಾರ ಕೈಗೊಂಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News