​ಕೋಮು ದ್ವೇಷ: ಹಿಂದುತ್ವ ಸಂಘಟನೆಗಳಿಂದ ಸಾಂತಾ ಕ್ಲಾಸ್ ಪ್ರತಿಕೃತಿಗೆ ಬೆಂಕಿ

Update: 2021-12-26 03:05 GMT
(Image: Indiatoday.in)

ಆಗ್ರಾ: ಕ್ರೈಸ್ತ ಮಿಷಿನರಿಗಳು ಕ್ರಿಸ್ಮಸ್ ಹಬ್ಬದ ಸಂದರ್ಭದಲ್ಲಿ ಸಾಂತಾ ಕ್ಲಾಸ್ ಮೂಲಕ ಉಡುಗೊರೆಗಳನ್ನು ವಿತರಿಸುವ ಮೂಲಕ ಹಿಂದೂ ಧರ್ಮದ ಬಡವರು ಮತ್ತು ಮಕ್ಕಳನ್ನು ಸೆಳೆಯಲು ಈ ಹಬ್ಬವನ್ನು ಬಳಸಿಕೊಳ್ಳುತ್ತಿವೆ ಎಂದು ಆಪಾದಿಸಿ ಸಾಂತಾ ಕ್ಲಾಸ್ ಪ್ರತಿಕೃತಿಯನ್ನು ಸುಟ್ಟುಹಾಕಿರುವ ಘಟನೆ ಶನಿವಾರ ನಡೆದಿದೆ.

ಅಂತರರಾಷ್ಟ್ರೀಯ ಹಿಂದೂ ಪರಿಷತ್ ಮತ್ತು ರಾಷ್ಟ್ರೀಯ ಬಜರಂಗ ದಳ ಕಾರ್ಯಕರ್ತರು, ಎಂಜಿ ರಸ್ತೆಯ ಸಂತ ಜಾನ್ಸ್ ಕಾಲೇಜು ಮತ್ತು ನಗರದ ವಿವಿಧ ಶಾಲೆಗಳ ಆವರಣದಲ್ಲಿ ಫಾದರ್ ಕ್ರಿಸ್ಮಸ್ ಅಥವಾ ಸಂತ ನಿಕೋಲಸ್‌ನ ಪ್ರತಿಕೃತಿಯನ್ನು ಸುಟ್ಟು ಹಾಕಿದರು.

"ಡಿಸೆಂಬರ್ ಬರುತ್ತಿದ್ದಂತೆ, ಕ್ರಿಶ್ಚಿಯನ್ ಮಿಷಿನರಿಗಳು ಕ್ರಿಸ್ಮಸ್, ಸಾಂತಾ ಕ್ಲಾಸ್ ಮತ್ತು ಹೊಸ ವರ್ಷದ ಹೆಸರಿನಲ್ಲಿ ಸಕ್ರಿಯವಾಗುತ್ತವೆ. ಮಕ್ಕಳಿಗೆ ಸಾಂತಾ ಕ್ಲಾಸ್ ಉಡುಗೊರೆಗಳನ್ನು ವಿತರಿಸುವ ಮೂಲಕ ಮಕ್ಕಳಿಗೆ ಆಮಿಷ ಒಡ್ಡುತ್ತವೆ ಹಾಗೂ ಅವರನ್ನು ಕ್ರೈಸ್ತಧರ್ಮದತ್ತ ಆಕರ್ಷಿಸುತ್ತವೆ" ಎಂದು ರಾಷ್ಟ್ರೀಯ ಬಜರಂಗ ದಳದ ಪ್ರಾದೇಶಿಕ ಪ್ರಧಾನ ಕಾರ್ಯದರ್ಶಿ ಅಜ್ಜು ಚೌಹಾಣ್ ಆರೋಪಿಸಿದ್ದಾರೆ.

"ಕೊಳಗೇರಿಗಳಿಗೆ ಭೇಟಿ ನೀಡಿ ಹಿಂದೂ ಧರ್ಮದಿಂದ ಕ್ರೈಸ್ತಧರ್ಮಕ್ಕೆ ಮತಾಂತರ ಮಾಡುವ ಮಿಷಿನರಿಗಳ ಬಗ್ಗೆ ನಾವು ಕಣ್ಣಿಟ್ಟಿದ್ದೇವೆ. ಸಂಘಟನೆಯ ಸದಸ್ಯರು ಇಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದ್ದಾರೆ" ಎಂದು ಸಂಘಟನೆಯ ಮತ್ತೊಬ್ಬ ಸದಸ್ಯ ಅವತಾರ್ ಸಿಂಗ್ ಗಿಲ್ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News