ಗೋಮಾಂಸ ಭಕ್ಷಣೆಗೆ ಸಾವರ್ಕರ್ ವಿರೋಧ ಇರಲಿಲ್ಲ: ದಿಗ್ವಿಜಯ ಸಿಂಗ್

Update: 2021-12-26 03:44 GMT

ಭೋಪಾಲ ಡಿ. 25: ಬಿಜೆಪಿ 2024ರಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ, ಅದು ಸಂವಿಧಾನವನ್ನು ಬದಲಾಯಿಸಲಿದೆ ಹಾಗೂ ಮೀಸಲಾತಿ ರದ್ದುಗೊಳಿಸಲಿದೆ ಎಂದು ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು ಶನಿವಾರ ಹೇಳಿದ್ದಾರೆ. ಭೋಪಾಲದಲ್ಲಿ ‘ಜನ ಜಾಗರಣ್ ಅಭಿಯಾನ’ದಲ್ಲಿ ಮಾತನಾಡಿದ ಅವರು, ಆರೆಸ್ಸೆಸ್ ನ ಸಿದ್ಧಾಂತದ ವಿರುದ್ಧ ಕಾಂಗ್ರೆಸ್ ಹೋರಾಡುತ್ತಿದೆ ಎಂದರು. ಹಿಂದೂ ಧರ್ಮ ಹಾಗೂ ಹಿಂದುತ್ವ ನಡುವೆ ಯಾವುದೇ ಸಂಬಂಧ ಇಲ್ಲ ಅವರು ಮರು ಉಚ್ಚರಿಸಿದರು.

‘‘ವೀರ ಸಾವರ್ಕರ್ ಅವರು ಹಿಂದೂ ಧರ್ಮ ಹಾಗೂ ಹಿಂದುತ್ವದ ನಡುವೆ ಯಾವುದೇ ಸಂಬಂಧ ಇಲ್ಲ ಎಂದು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. ಅವರು ಗೋವನ್ನು ಮಾತೆ ಎಂದು ಪರಿಗಣಿಸಿರಲಿಲ್ಲ. ಗೋಮಾಂಸ ಭಕ್ಷಣೆಗೆ ಅವರಿಗೆ ಯಾವುದೇ ವಿರೋಧ ಇರಲಿಲ್ಲ’’ ಎಂದು ಅವರು ಹೇಳಿದ್ದಾರೆ. ‘‘ನಮ್ಮ ಹೋರಾಟ ಆರ್ಎಸ್ಎಸ್ ಸಿದ್ಧಾಂತದ ವಿರುದ್ಧ. 2024ರಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂದರೆ, ಅವರು ಮೊದಲು ಸಂವಿಧಾನವನ್ನು ಬದಲಾಯಿಸುತ್ತಾರೆ. ಅನಂತರ ಮೀಸಲಾತಿ ರದ್ದುಗೊಳಿಸುತ್ತಾರೆ’’ ಎಂದು ಅವರು ಹೇಳಿದರು. ಕೇಂದ್ರ ಸರಕಾರ ಆರ್ಥಿಕತೆಯ ತಪ್ಪು ನಿರ್ವಹಣೆ ಬಹಿರಂಗಪಡಿಸಲು ಕಾಂಗ್ರೆಸ್ ಪಕ್ಷ ನವೆಂಬರ್ 14ರಿಂದ ದೇಶವ್ಯಾಪಿ ಜನ ಜಾಗರಣ್ ಅಭಿಯಾನ ಆರಂಭಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News