×
Ad

ಗಾಂಧಿ, ಇಸ್ಲಾಂ ವಿರುದ್ಧ ಹೇಳಿಕೆ: ಕಾಳಿಚರಣ್ ಮಹಾರಾಜ್ ವಿರುದ್ಧ ಪ್ರಕರಣ ದಾಖಲು

Update: 2021-12-27 12:55 IST

ರಾಯ್ಪುರ: ಛತ್ತೀಸ್ಗಢದ ರಾಯ್ಪುರದಲ್ಲಿ ನಿನ್ನೆ ನಡೆದ ಧರ್ಮ ಸಂಸದ್ ಅಥವಾ ಧರ್ಮಗಳ ಸಂಸತ್ತಿನಲ್ಲಿ ಮಹಾತ್ಮ ಗಾಂಧಿಯವರನ್ನು ಅವಮಾನಿಸಿ, ಅವರ ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಆರೋಪದ ಮೇಲೆ ಕಾಳಿಚರಣ್ ಮಹಾರಾಜ್ ವಿರುದ್ಧ ಪೊಲೀಸ್ ಕೇಸ್ ದಾಖಲಾಗಿದೆ.

ಸಂತ ಕಾಳಿಚರಣ್ ಮಹಾರಾಜ್ ವಿವಾದಾತ್ಮಕ ಭಾಷಣ ಮಾಡಿದ್ದು, ‘ಮುಖ್ಯ ಪೋಷಕ' ಮಹಂತ್ ರಾಮಸುಂದರ್ ದಾಸ್ ಅವರು ಕಾಳಿಚರಣ್ ಭಾಷಣದಿಂದ ಕೆರಳಿ ವೇದಿಕೆಯಿಂದ ಹೊರನಡೆದರು. ಮಾಜಿ ಮೇಯರ್ ಪ್ರಮೋದ್ ದುಬೆ ದೂರು ದಾಖಲಿಸಿದ ನಂತರ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಆರೋಪವನ್ನು ಕಾಳಿಚರಣ್ ಮೇಲೆ ಹೊರಿಸಲಾಗಿದೆ.

ಆಡಳಿತಾರೂಢ ಕಾಂಗ್ರೆಸ್ ನ ರಾಜ್ಯ ಘಟಕದ ಅಧ್ಯಕ್ಷ ಮೋಹನ್ ಮಾರ್ಕಂ ಕೂಡ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಕರೆ ನೀಡಿದ್ದಾರೆ.
ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿ ಎಂದ ಕಾಳಿಚರಣ್ ಮಹಾರಾಜ್ "ಮೋಹನ್ದಾಸ್ ಕರಮಚಂದ್ ಗಾಂಧಿಯವರು ದೇಶವನ್ನು ನಾಶಪಡಿಸಿದರು... ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮಸ್ಕಾರಗಳು" ಎಂದು ಹೇಳಿದರು.

ಛತ್ತೀಸ್ಗಢದ ದುಧಾಧಾರಿ ದೇವಸ್ಥಾನದ ಮಹಂತ್ ರಾಮಸುಂದರ್ ದಾಸ್ ಅವರು ಕಾಳಿಚರಣ್ ಭಾಷಣವನ್ನು ತಕ್ಷಣವೇ ಪ್ರತಿಭಟಿಸಿದರು, ಮಹಾತ್ಮ ಗಾಂಧಿಯವರು ದೇಶಕ್ಕಾಗಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ. ಅಂತಹ ನಿಂದನೀಯ ಭಾಷೆಯನ್ನು ಬಳಸಬಾರದು. ಈ ವೇದಿಕೆಯಲ್ಲಿ ಮಹಾತ್ಮ ಗಾಂಧಿಯವರನ್ನು ನಿಂದಿಸಲಾಗಿದೆ ಹಾಗೂ  ನಾನು ಅದನ್ನು ವಿರೋಧಿಸುತ್ತೇನೆ. ಇದು ಸನಾತನ ಧರ್ಮವಲ್ಲ ಅಥವಾ 'ಧರ್ಮಗಳ ಸಂಸತ್ತಿನಂತಹ ವೇದಿಕೆಯಲ್ಲಿ ಇಂತಹದ್ದು ನಡೆಯಬಾರದು. ಅಂತಹ ಪದಗಳನ್ನು ಬಳಸಿದಾಗ ನೀವು ಏಕೆ ಆಕ್ಷೇಪ ವ್ಯಕ್ತಪಡಿಸಲಿಲ್ಲ ಎಂದು ಸಂಘಟಕರನ್ನು ಕೇಳಲು ಬಯಸುತ್ತೇನೆ” ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News