×
Ad

ಮದರ್ ಥೆರೆಸಾ ಅವರ ಮಿಷನರೀಸ್ ಆಫ್ ಚ್ಯಾರಿಟಿ ಸಂಸ್ಥೆಯ ಭಾರತದಲ್ಲಿನ ಬ್ಯಾಂಕ್ ಖಾತೆಗಳು ಮುಟ್ಟುಗೋಲು

Update: 2021-12-27 17:15 IST
ಸಾಂದರ್ಭಿಕ ಚಿತ್ರ

ಕೊಲ್ಕತ್ತಾ: ಮದರ್ ತೆರೆಸಾ ಅವರ ಮಿಷನರೀಸ್ ಆಫ್ ಚ್ಯಾರಿಟಿ ಸಂಸೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

"ಕ್ರಿಸ್ಮಸ್ ದಿನದಂದು ಕೇಂದ್ರ ಸಚಿವಾಲಯವು ಮದರ್ ತೆರೆಸಾ ಅವರ ಮಿಷನರೀಸ್ ಆಫ್ ಚ್ಯಾರಿಟಿಯ ಭಾರತದಲ್ಲಿನ ಎಲ್ಲಾ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿದೆ ಎಂದು ತಿಳಿದು ಆಘಾತವಾಗಿದೆ. ಕಾನೂನು ಎಲ್ಲಕ್ಕಿಂತ  ಮಿಗಿಲಾದರೂ, ಮಾನವೀಯ ಕಾರ್ಯಗಳಿಗೆ ತೊಂದರೆಯಾಗಬಾರದು" ಎಂದು ಮಮತಾ ಬ್ಯಾನರ್ಜಿ ಟ್ವೀಟ್ ಮಾಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಆರ್ಚ್ ಡಯೋಸೀಸ್ ಆಫ್ ಕೊಲ್ಕತ್ತಾದ ವಿಕಾರ್ ಜನರಲ್ ಫಾ ಡೊಮಿನಿಕ್ ಗೋಮ್ಸ್, "ಇದು ಬಡವರಲ್ಲಿ ಬಡವರಿಗೆ ಅತ್ಯಂತ ಕಟು ಕ್ರಿಸ್ಮಸ್ ಉಡುಗೊರೆ" ಎಂದು ಬಣ್ಣಿಸಿದ್ದಾರೆ.

"ಈ ಕ್ರಮವು ಈ ಸಂಸ್ಥೆಯ  22,000 ಜನರು ಹಾಗೂ ಈ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಅವಲಂಬಿತರನ್ನು  ಹಾಗೂ ಈ ಸಂಸ್ಥೆಯ ಕಾರ್ಯಚಟುವಟಿಕೆಗಳಿಂದ ಪ್ರಯೋಜನ ಪಡೆಯುವವರನ್ನು ಬಾಧಿಸಲಿದೆ" ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಮಿಷನರೀಸ್ ಆಫ್ ಚ್ಯಾರಿಟಿಯ ಸಹೋದರ ಸಹೋದರಿಯರು ಸಾವಿರಾರು ಮಂದಿಗೆ ಸಹಾಯ ಮಾಡಿದ್ದಾರೆ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಕುಷ್ಠರೋಗಿಗಳ ಮತ್ತು ಸಾಮಾಜಿಕವಾಗಿ ಬಹಿಷ್ಕೃತರಾದವರಿಗೆ ಏಕೈಕ ಸ್ನೇಹಿತರಾಗಿದ್ದಾರೆ, ಕ್ರೈಸ್ತ ಸಮುದಾಯದ ಮೇಲಿನ ಈ ದಾಳಿಯು ಭಾರತದ ಬಡವರಲ್ಲಿ ಬಡವರ  ಮೇಲಿನ ಘೋರ ದಾಳಿಯಾಗಿದೆ" ಎಂದು  ಅವರು ಹೇಳಿದ್ದಾರೆ.

"ಕ್ರೈಸ್ತ ಸಂಘಟನೆಗಳು ಇತರ ಧರ್ಮದ ಜನರನ್ನು ಬಲವಂತವಾಗಿ ಮತಾಂತರಗೊಳಿಸುತ್ತಿವೆ ಎಂದು ಇಂತಹ ಕ್ರಮಗಳಿಗೆ ಸಮರ್ಥನೆ ನೀಡಬಹುದು, ಇಂತಹ ಆರೋಪಗಳು ಸುಳ್ಳು, ಹಾಗೆ ಮತಾಂತರವಾಗುತ್ತಿದ್ದರೆ ದೇಶದ ಜನಸಂಖ್ಯೆಯ ಶೇ 2.3ಕ್ಕಿಂತಲೂ ಹೆಚ್ಚು ಜನರು ಕ್ರೈಸ್ತರಾಗಿರುತ್ತಿದ್ದರು" ಎಂದು ಫಾ ಗೋಮ್ಸ್ ಹೇಳಿದ್ದಾರೆ.

ಈ ಕ್ರಮದ ಕುರಿತಂತೆ ಕೇಂದ್ರ ಸರಕಾರ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News