ದ್ವೇಷ ಭಾಷಣಗಳೆಂಬ ದೇಶದ್ರೋಹ

Update: 2021-12-28 06:28 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ವಿಭಿನ್ನ ಧಾರ್ಮಿಕ, ಸಾಂಸ್ಕೃತಿಕ, ಭಾಷಿಕ ಹಿನ್ನೆಲೆಯ ಜನಸಮುದಾಯಗಳು ಪ್ರೀತಿ, ವಿಶ್ವಾಸದಿಂದ ಕಟ್ಟಿದ ಭಾರತದಲ್ಲಿ ಧರ್ಮ ಸಂಸತ್ ಹೆಸರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ ದೇಶದ್ರೋಹಿ, ಜನದ್ರೋಹಿ ಚಟುವಟಿಕೆಗಳಿಗೆ ನಾಗರಿಕ ಸಮಾಜ ಮತ್ತು ನಿಜವಾದ ಧಾರ್ಮಿಕರು ನಾಚಿಕೆಯಿಂದ ತಲೆ ತಗ್ಗಿಸಬೇಕಾಗಿದೆ. ಆದರೂ ಈ ಕಾನೂನು ವಿರೋಧಿ ಚಟುವಟಿಕೆಗಳನ್ನು ಸದೆ ಬಡಿಯಬೇಕಾದ ಸರಕಾರ ಈ ವಿಧ್ವಂಸಕರ ಬಗ್ಗೆ ಮೃದು ಧೋರಣೆ ತಾಳಿದೆ. ಹರಿದ್ವಾರ ಮತ್ತು ಛತ್ತೀಸಗಡಗಳಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸತ್ ಸಭೆಗಳಲ್ಲಿ ಮಾತಾಡಿದ ಸ್ವಯಂ ಘೋಷಿತ ಧರ್ಮಗುರುಗಳು ಹಿಂದೂ ಧರ್ಮವನ್ನು ರಕ್ಷಿಸಲು, ಹಿಂದೂ ರಾಷ್ಟ್ರ ನಿರ್ಮಾಣ ಮಾಡಲು ಹಿಂದೂ ಯುವಕರು ಶಸ್ತ್ರಗಳನ್ನು ಕೈಗೆ ತೆಗೆದುಕೊಳ್ಳಬೇಕೆಂದು ಬಹಿರಂಗವಾಗಿ ಕರೆ ನೀಡಿದರು.

ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿ ಮಾತಾಡಿದ ಧರ್ಮದಾಸ ಮಹಾರಾಜ ಎಂಬಾತ ತಾನು ಗೋಡ್ಸೆ ಹಿಂಬಾಲಕ ಎಂದು ಬಹಿರಂಗವಾಗಿ ಘೋಷಿಸಿದ. ಅಷ್ಟೇ ಅಲ್ಲ ರಾಷ್ಟ್ರೀಯ ಸಂಪನ್ಮೂಲಗಳಲ್ಲಿ ಅಲ್ಪಸಂಖ್ಯಾತರಿಗೆ ಮೊದಲ ಹಕ್ಕು ಎಂದು ಹೇಳಿದ್ದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಎದೆಗೆ ಗುಂಡು ಹಾರಿಸುತ್ತಿದ್ದೆ ಎಂದು ಹೇಳಿದ.ಇದೇ ಸಮಾವೇಶದಲ್ಲಿ ಮಾತಾಡಿದ ಹಿಂದೂ ಮಹಾಸಭೆಯ ಪದಾಧಿಕಾರಿ ಅನ್ನಪೂರ್ಣ ಮಾತಾಜಿ ಎಂಬಾಕೆ ‘‘ಹಿಂದೂ ಧರ್ಮವನ್ನು ರಕ್ಷಿಸಲು ಶಸ್ತ್ರಾಸ್ತ್ರಗಳನ್ನು ಹಿಡಿಯಲು ಹಿಂಜರಿಯುವುದಿಲ್ಲ’’ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಇತ್ತೀಚೆಗೆ ಹಿಂದೂ ಧರ್ಮ ಸ್ವೀಕರಿಸಿದ ಶಿಯಾ ವಕ್ಫ್ ಮಂಡಲಿಯ ವಸೀಮ್ ರಿಝ್ವ್ವಿ ಅಲಿಯಾಸ್ ಜಿತೇಂದ್ರ ನಾರಾಯಣ ತ್ಯಾಗಿ ಧರ್ಮ ರಕ್ಷಣೆಗೆ ಹಿಂದೂ ಯುವಕರು ತಲವಾರುಗಳನ್ನು ಹಿಡಿಯಬೇಕೆಂದು ಅರಚಾಡಿದರು.

ಈ ಪ್ರಚೋದನಕಾರಿ ಧರ್ಮ ಸಂಸತ್ ನಡೆದು ಒಂದು ವಾರದ ನಂತರ ಉತ್ತರ ಪ್ರದೇಶ ಪೊಲೀಸರು ಕಾಟಾಚಾರಕ್ಕೆ ಎಂಬಂತೆ ಪ್ರಚೋದನಕಾರಿ ಭಾಷಣ ಮಾಡಿದವರ ಮೇಲೆ ಭಾರತೀಯ ಅಪರಾಧ ಸಂಹಿತೆಯ 153(ಎ) ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ.
 ಹಿಂಸೆಗೆ, ಹತ್ಯೆಗೆ ಪ್ರಚೋದಿಸಿದ ಈ ಕಪಟ ಭೈರಾಗಿಗಳ ಮೇಲೆ ನ್ಯಾಯವಾಗಿ ಕಠಿಣವಾದ ಯುಎಪಿಎ ಅನ್ವಯ ಪ್ರಕರಣ ದಾಖಲಿಸಿಕೊಂಡು ಜೈಲಿಗೆ ತಳ್ಳಬೇಕಾಗಿತ್ತು.ಆದರೆ ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರ್ಬಳಕೆ ಮಾಡಿಕೊಳ್ಳಲು ಹೊರಟವರಿಂದ ಇಂತಹ ಕಠಿಣ ಕ್ರಮವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.

ಈ ಧರ್ಮ ಸಂಸತ್ ಎಂಬುದೇ ನಮ್ಮ ಸಾಂವಿಧಾನಿಕವಾದ ಚುನಾಯಿತ ಸಂಸತ್ತಿಗೆ ಪ್ರತಿಯಾಗಿ ಕೋಮುವಾದಿ ಶಕ್ತಿಗಳು ರೂಪಿಸಿದ ಪರ್ಯಾಯ ಸಂಸತ್. ಇಂತಹ ಭಾಷಣಗಳು ಇದೇ ಮೊದಲ ಸಲವೇನಲ್ಲ. 1992ರ ನಂತರ ಭಾರತೀಯರನ್ನು ಧರ್ಮದ ಆಧಾರದಲ್ಲಿ ವಿಭಜಿಸಲು ಇಂತಹ ಬೆಂಕಿಯುಗುಳುವ ಭಾಷಣಗಳು ಸಾಮಾನ್ಯವಾಗಿವೆ.ಇಂತಹ ದ್ವೇಷದ ಭಾಷಣಗಳಿಂದಲೇ ಕೋಮು ದಳ್ಳುರಿ ಎಬ್ಬಿಸಿ ಜನಸಾಮಾನ್ಯರ ಹೆಣಗಳ ಮೇಲೆ ವೋಟಿನ ಬೆಳೆ ತೆಗೆದವರಿಗೆ ಇದು ಅಪರಾಧ ಎನಿಸುವುದಿಲ್ಲ. ಧರ್ಮಸಂಸತ್‌ನಲ್ಲಿ ಮಾತ್ರವಲ್ಲ ಅನೇಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ನುಸುಳುವ ಈ ಧರ್ಮದ್ರೋಹಿಗಳು ವೇದಿಕೆ ಆಕ್ರಮಿಸಿ ಇಂತಹ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಹಿಂದೂಗಳು ಸ್ವಯಂ ರಕ್ಷಣೆಗೆ ತಲವಾರುಗಳನ್ನು ಹಿಡಿಯಬೇಕೆಂದು ಪ್ರಮೋದ್ ಮುತಾಲಿಕ್, ಜಗದೀಶ್‌ಕಾರಂತರಂತಹವರು ಕರೆ ನೀಡುತ್ತಲೇ ಇರುತ್ತಾರೆ. ಇವರು ಮಾತ್ರವಲ್ಲ ಬಿಜೆಪಿ ಸಂಸದರು ಮತ್ತು ಶಾಸಕರು ಪ್ರಚೋದನಕಾರಿ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇತ್ತೀಚೆಗೆ ಸಚಿವರೊಬ್ಬರು ತಾನು ಮಂತ್ರಿ ಎಂಬುದನ್ನು ಮರೆತು ವಿಧಾನ ಸಭೆಯಲ್ಲಿ ಮತಾಂತರ ವಿರುದ್ಧ ಮಾತಾಡುತ್ತಾ ‘‘ನಮ್ಮ ಧರ್ಮದ ತಂಟೆಗೆ ಬಂದರೆ ಚಿಂದಿ, ಚಿಂದಿ ಮಾಡುತ್ತೇವೆ’’ ಎಂದು ಕೂಗಾಡಿದರು. ಇವರು ಪ್ರಚೋದನಕಾರಿ ಮಾತನ್ನಾಡಬಾರದೆಂದು ಮುಖ್ಯ ಮಂತ್ರಿಗಳೂ ಹೇಳಲಿಲ್ಲ. ವಿಧಾನಸಭಾಧ್ಯಕ್ಷರೂ ಎಚ್ಚರಿಕೆ ನೀಡಲಿಲ್ಲ. ಇದು ಭಾರತದ ಇಂದಿನ ದುರವಸ್ಥೆ. ಸಂಸದ ತೇಜಸ್ವಿ ಸೂರ್ಯ ಇತ್ತೀಚೆಗೆ ಎಲ್ಲ ಮುಸಲ್ಮಾನ ಹಾಗೂ ಕ್ರೈಸ್ತರನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಬೇಕಾಗಿದೆ ಎಂದರು. ತೀವ್ರ ಆಕ್ರೋಶ ವ್ಯಕ್ತವಾದ ಬಳಿಕ ಹೇಳಿಕೆ ವಾಪಸ್ ಪಡೆದರು. ಜನರಿಗೆ ಶಾಂತಿ, ಸಹನೆ, ಪ್ರೀತಿ, ವಿಶ್ವಾಸದ ಉಪದೇಶ ನೀಡುವ ಜೊತೆಗೆ ಪರಮಾರ್ಥ ಚಿಂತನೆ ಹಿತ ವಚನ ನೀಡಬೇಕಾದ ಧರ್ಮಗುರುಗಳು ಶಸ್ತ್ರಾಸ್ತ್ರ ಹಿಡಿದು ರಕ್ತಪಾತ ಮಾಡಲು ಬಹಿರಂಗವಾಗಿ ಕರೆ ನೀಡುವುದು ಕಾನೂನಿನ ದೃಷ್ಟಿಯಿಂದ ಘನ ಘೋರ ಅಪರಾಧ. ಇದು ಧಾರ್ಮಿಕ ಪರಂಪರೆಗೂ ಅಪಚಾರ ಮಾಡಿದಂತೆ. ಸಾಮಾಜಿಕ ಶಾಂತಿ ಮತ್ತು ನೆಮ್ಮದಿಗೆ ಕೊಳ್ಳಿ ಇಡುವ ಇಂತಹವರನ್ನು ಹಿಡಿದು ಜೈಲಿಗೆ ತಳ್ಳದಿರುವ ಕಾರಣಕ್ಕಾಗಿ ಅಪರಾಧಿಗಳಿಗೆ ರಕ್ಷಣೆ ನೀಡುವ ಸರಕಾರವೂ ದೇಶದ ಜನರ ಕ್ಷಮೆ ಯಾಚಿಸಬೇಕಾಗಿದೆ.

ಧರ್ಮ ಸಂಸತ್‌ನಲ್ಲಿ ಹೊಡಿ, ಬಡಿ, ಕಡಿ, ಕತ್ತರಿಸು ಎಂಬಂತಹ ಪ್ರಚೋದನಕಾರಿ ಹಿಂಸಾತ್ಮಕ ಮಾತುಗಳನ್ನು ಕೇಳಿದ, ಆ ಮಾತುಗಳಿಂದ ಮತ್ತೇರಿಸಿಕೊಂಡ ಯುವಕರು ಅಲ್ಲಲ್ಲಿ ಬೀದಿಗೆ ಬಂದು ಅಲ್ಪಸಂಖ್ಯಾತ ಸಮುದಾಯದ ಧಾರ್ಮಿಕ ಕಾರ್ಯಕ್ರಮಗಳ ಮೇಲೆ ದಾಳಿ ಮಾಡುತ್ತಿದ್ದಾರೆ. ಈ ಸಲದ ಕ್ರಿಸ್‌ಮಸ್ ವೇಳೆಯಲ್ಲಿ ಅನೇಕ ಕಡೆ ಚರ್ಚ್ ಗಳ ಮೇಲೆ ದಾಳಿ ಮಾಡಿದ, ಶಿಲುಬೆಯನ್ನು, ಏಸುವಿನ ಮೂರ್ತಿಯನ್ನು ಭಗ್ನಗೊಳಿಸಿದ, ಧಾರ್ಮಿಕ ಗ್ರಂಥಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದಿವೆ. ಅಂಬಾಲಾದಲ್ಲಿ ರವಿವಾರ ಚರ್ಚ್ ಮೇಲೆ ದಾಳಿ ಮಾಡಿ ಕಿಟಕಿ ಗಾಜುಗಳನ್ನು ಒಡೆದು ಹಾಕಿದ್ದಾರೆ. ಗುವಾಹಟಿಯಲ್ಲಿ ಕ್ರಿಸ್‌ಮಸ್ ಕಾರ್ಯಕ್ರಮದಲ್ಲಿ ಹಿಂದೂಗಳು ಪಾಲ್ಗೊಳ್ಳುವುದನ್ನು ಕೆಲ ಸಂಘಟನೆಗಳ ಯುವಕರು ಆಕ್ಷೇಪಿಸಿ ಹಿಂಸಾಚಾರ ಮಾಡಿದ್ದಾರೆ. ಕರ್ನಾಟಕದಲ್ಲಿ ಅಲ್ಲಲ್ಲಿ ಕ್ರೈಸ್ತರ ಮೇಲೆ ದಾಳಿ ನಡೆಯುತ್ತಲೇ ಇವೆ. ಇನ್ನು ಮುಸ್ಲಿಮರ ಮೇಲೆ ಪ್ರತಿನಿತ್ಯ ಅಲ್ಲಲ್ಲಿ ಹಲ್ಲೆ, ಹಿಂಸಾಚಾರಗಳು ನಡೆಯುತ್ತಲೇ ಇವೆ. ಪೊಲೀಸರು ಕಾಟಾಚಾರಕ್ಕೆ ಪ್ರಕರಣಗಳನ್ನು ದಾಖಲಿಸಿಕೊಳ್ಳುತ್ತಾರೆ. ಆದರೆ ಇಂತಹ ಪ್ರಕರಣಗಳಲ್ಲಿ ಸಂಬಂಧಿಸಿದವರನ್ನು ಬಂಧಿಸಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಏನು ಮಾತಾಡಿದರೂ ನಡೆಯುತ್ತದೆ ಎಂದಾದಾಗ ಪ್ರಚೋದನಕಾರಿ ಮಾತುಗಳನ್ನಾಡುವ ವೈರಾಣುಗಳ ಹಾವಳಿ ಹೆಚ್ಚಾಗುತ್ತವೆ.

ದಯವೇ ಧರ್ಮದ ಮೂಲ ಎಂದು ಹೇಳಿದ ಬಸವಣ್ಣ, ಜಾತಿ ಮತಗಳನ್ನು ಮೀರಿ ಎಲ್ಲರನ್ನೂ ಪ್ರೀತಿಸಬೇಕೆಂದು ಕರೆ ನೀಡಿದ ಸ್ವಾಮಿ ವಿವೇಕಾನಂದ, ನಾರಾಯಣ ಗುರುಗಳು, ರಾಮಕೃಷ್ಣ ಪರಮಹಂಸ ನಡೆದಾಡಿದ ನೆಲದಲ್ಲಿ ಈಗ ದ್ವೇಷ ಭಾಷಣದ ರೋಗ ವ್ಯಾಪಕವಾಗಿ ಹರಡುತ್ತಿದೆ. ಹಿಂದಿನ ಪ್ರಧಾನಿ ಮನಮೋಹನ ಸಿಂಗ್‌ರಿಗೆ ‘ಮೌನಿ ಬಾಬಾ’ ಎಂದು ಹಿಯಾಳಿಸಿದ್ದ ಈಗಿನ ಪ್ರಧಾನಿಗಳು ಈಗ ದಿವ್ಯ ಮೌನ ತಾಳಿದ್ದಾರೆ. ಪ್ರಚೋದನಕಾರಿ ಮಾತುಗಳ ಬಗ್ಗೆ ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತರೂ ಜಾಣ ಮೌನ ವಹಿಸಿ ನಯವಾದ ಭಾಷೆಯಲ್ಲಿ ಇಂತಹದೇ ಮಾತುಗಳನ್ನು ಆಡುತ್ತಾರೆ.

ಭಾರತದ ಆರ್ಥಿಕ ಪರಿಸ್ಥಿತಿ ಹಳ್ಳ ಹಿಡಿದಿದೆ. ಉದ್ಯೋಗಾವಕಾಶಗಳು ಕಡಿಮೆಯಾಗಿವೆ.ಜೀವನಾವಶ್ಯಕ ಪದಾರ್ಥಗಳ ಬೆಲೆಗಳು ಗಗನಕ್ಕೇರಿವೆ. ಬ್ಯಾಂಕಿಂಗ್ ಕ್ಷೇತ್ರದ ಪರಿಸ್ಥಿತಿ ಗಂಭೀರವಾಗಿದೆ. ಶೈಕ್ಷಣಿಕ ಕ್ಷೇತ್ರವನ್ನು ಸುಧಾರಿಸಲಾಗದ ಸರಕಾರದ ಶಿಕ್ಷಣ ಸಚಿವಾಲಯ ಸೂರ್ಯ ನಮಸ್ಕಾರದ ಸೂಚನೆ ನೀಡುತ್ತಿದೆ. ಕೊಠಡಿಗಳಿಲ್ಲದ ಶಾಲೆಗಳಲ್ಲಿ ಪರದಾಡುತ್ತಿರುವ ವಿದ್ಯಾರ್ಥಿಗಳು ಸೂರ್ಯ ಉದಯಿಸಿದ ನಂತರ ಬಂದು ಸೂರ್ಯ ನಮಸ್ಕಾರ ಮಾಡುವ ವಿಚಿತ್ರ ಪದ್ಧತಿಯನ್ನು ಪಾಲಿಸಬೇಕಾಗಿದೆ. ಸರಕಾರದ ವೈಫಲ್ಯಗಳನ್ನು ಮುಚ್ಚಿ ಕೊಂಡು ಮತ್ತೆ ಚುನಾವಣೆಯಲ್ಲಿ ಗೆಲ್ಲಲು ಜನಸಾಮಾನ್ಯರಲ್ಲಿ ಧರ್ಮ ದ್ವೇಷದ ಕಿಚ್ಚು ಹಚ್ಚಬೇಕಾಗಿದೆ. ಅದಕ್ಕಾಗಿ ದ್ವೇಷ ಭಾಷಣಗಳ ಧರ್ಮ ಸಂಸತ್‌ಗಳು ಮತ್ತೆ ಆರಂಭವಾಗಿವೆ.

ಆದರೆ ದ್ವೇಷ ಭಾಷಣಗಳಿಂದ ಬಹಳ ಕಾಲ ಜನರನ್ನು ಮೂರ್ಖರನ್ನಾಗಿ ಮಾಡಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯವಿಲ್ಲ. ಜನರನ್ನು ಸದಾ ಮತಾಂಧತೆಯ ನಶೆಯಲ್ಲಿ ಇರಿಸಲು ಸಾಧ್ಯವಿಲ್ಲ. ಬಿಜೆಪಿಗೆ ಭಾರತದ ಸಂವಿಧಾನ, ಕಾನೂನು ಆಡಳಿತದಲ್ಲಿ ನಂಬಿಕೆ ಇದ್ದರೆ ದ್ವೇಷ ಭಾಷಣಗಳ ಧರ್ಮ ಸಂಸತ್‌ಗಳಿಗೆ ಮೊದಲು ಕಡಿವಾಣ ಹಾಕಲಿ. ‘‘ಕ್ರಿಯೆಗೆ ಪ್ರತಿಕ್ರಿಯೆ’’ ಎಂಬಂತಹ ಮುಖ್ಯಮಂತ್ರಿಯವರ ಮಾತುಗಳು ಕೂಡ ರಾಜ್ಯದಲ್ಲಿ ಪರಿಸ್ಥಿತಿ ಹದಗೆಡಲು ಕಾರಣವಾಗಿದೆ. ಪ್ರಧಾನಿಯ ಮೌನ ಕೂಡ ಸಮ್ಮತಿಯ ಸಂದೇಹ ಮೂಡಿಸುತ್ತ್ತಿದೆ. ಇಂತಹ ಅಪಾಯಕಾರಿ ಆಟಗಳಿಂದ ಅಧಿಕಾರದಲ್ಲಿರುವವರು ಮುಂದೆ ಭಾರೀ ಬೆಲೆ ತೆರಬೇಕಾಗುತ್ತದೆ ಎಂಬುದನ್ನು ಮರೆಯಬಾರದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News