ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸಿಧು ವಿರುದ್ಧ ಮಾನನಷ್ಟ ನೋಟಿಸ್
ಚಂಡೀಗಢ: ಪಕ್ಷದ ಇಬ್ಬರು ಸದಸ್ಯರನ್ನು "ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಇರುವವರು ಎಂದು ಗುಣಗಾನ ಮಾಡಿದ ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜ್ಯೋತ್ ಸಿಂಗ್ ಸಿಧು ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸುವ ನೋಟಿಸ್ ನೀಡಲಾಗಿದೆ.
ಸಿಧು ಮಾಡಿದ ಭಾಷಣವೊಂದರಲ್ಲಿ ಇಬ್ಬರು ಸದಸ್ಯರ ಗುಣಗಾನ ಮಾಡಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ.
ಮಾಜಿ ಸಿಎಂ ಅಮರೀಂದರ್ ಸಿಂಗ್ ಮತ್ತು ಶಿರೋಮಣಿ ಅಕಾಲಿದಳ ಮುಖಂಡ ದಲ್ಜೀತ್ ಸಿಂಗ್ ಚೀಮಾ, ಸಿಧು ಅವರನ್ನು ಟೀಕಿಸಿದ್ದು, ಪಂಜಾಬ್ ಪೊಲೀಸ್ ಅಧಿಕಾರಿಯೊಬ್ಬರು ಮಾನನಷ್ಟ ಮೊಕದ್ದಮೆ ನೋಟಿಸ್ ನೀಡಿದ್ದಾರೆ. ಪೊಲೀಸರನ್ನು ಅವಮಾನಿಸಿದ್ದಕ್ಕಾಗಿ ಈ ನೋಟಿಸ್ ನೀಡಲಾಗಿದೆ ಎಂದು ಚಂಡೀಗಢ ಡಿವೈಎಸ್ಪಿ ದಿಲ್ಶೇರ್ ಸಿಂಗ್ ಚಂಡೇಲ್ ಹೇಳಿದ್ದಾರೆ.
ಸಬ್ ಇನ್‌ಸ್ಪೆಕ್ಟರ್ ಒಬ್ಬರು ಸಿಧು ಅವರ ಹೇಳಿಕೆಯನ್ನು ಖಂಡಿಸುವ ವೀಡಿಯೊ ಸಂದೇಶವನ್ನೂ ಬಿಡುಗಡೆ ಮಾಡಿದ್ದಾರೆ. ಪೊಲೀಸರನ್ನು ಬೆಂಬಲಿಸಿರುವ ಕಾಂಗ್ರೆಸ್ ಪಕ್ಷದ ಲೂಧಿಯಾನಾ ಸಂಸದ ರವ್ನೀತ್ ಸಿಂಗ್, ಕೋವಿಡ್-19 ಸಂದರ್ಭದಲ್ಲಿ ಮತ್ತು ಭಯೋತ್ಪಾದನೆ ವೇಳೆ ಅವರ ವಹಿಸಿದ ಪಾತ್ರವನ್ನು ಶ್ಲಾಘಿಸಿದ್ದಾರೆ.
ಇತ್ತೀಚೆಗೆ ಸುಲ್ತಾನ್‌ಪುರ ಲೋಧಿಯಲ್ಲಿ ನಡೆದ ರ‍್ಯಾಲಿಯೊಂದರಲ್ಲಿ ಸಿಧು, ಹಾಲಿ ಶಾಸಕ ನವತೇಜ್ ಸಿಂಗ್ ಚೀಮಾ ಅವರನ್ನು ತೋರಿಸಿ, ಪೊಲೀಸರ ಪ್ಯಾಂಟ್ ಒದ್ದೆ ಮಾಡುವ ಸಾಮರ್ಥ್ಯ ಇರುವವರು ಎಂದು ಹೇಳಿದ್ದು, ವಿವಾದಕ್ಕೆ ಕಾರಣವಾಗಿತ್ತು. ರವಿವಾರ ಬಟಾಲದಲ್ಲಿ ನಡೆದ ಮತ್ತೊಂದು ರ‍್ಯಾಲಿಯಲ್ಲಿ ಸ್ಥಳೀಯ ಮುಖಂಡ ಅಶ್ವಿನಿ ಶೇಖ್ರಿ ಅವರ ಬಗ್ಗೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದರು.