ಕೇರಳದ ಎರಡನೇ ಮಹಿಳಾ ಟ್ಯಾಂಕರ್ ಚಾಲಕಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಲು ಸಜ್ಜಾಗಿರುವ ಬರ್ಕತ್ ನಿಶಾ

Update: 2021-12-28 07:19 GMT
ಬರ್ಕತ್ ನಿಶಾ (Photo: newindianexpress)

ಪಾಲಕ್ಕಾಡ್: ಕೇರಳದ ಪಾಲಕ್ಕಾಡ್ ನಿವಾಸಿಯಾಗಿರುವ 25 ವರ್ಷದ ಯುವತಿ ಬರ್ಕತ್ ನಿಶಾಗೆ ಚಿಕ್ಕಂದಿನಿಂದಲೂ ವಾಹನ ಚಲಾಯಿಸುವುದೆಂದರೆ ಪಂಚಪ್ರಾಣ. ಆಕೆಯ ಈ ಬಯಕೆಯೇ ಆಕೆಗೆ ಘನ ವಾಹನಗಳನ್ನು ಚಲಾಯಿಸುವುದಕ್ಕೆ ಪ್ರೇರಣೆಯಾಯಿತು. ಸದ್ಯದಲ್ಲಿಯೇ ಟ್ಯಾಂಕರ್ ಲಾರಿಗಳನ್ನು ಚಲಾಯಿಸಲಿರುವ ಕೇರಳದ ಎರಡನೇ ಮಹಿಳೆ ಎಂಬ ಹೆಗ್ಗಳಿಕೆಗೂ ಈಕೆ ಪಾತ್ರಳಾಗಲಿದ್ದಾರೆ ಎಂದು newindianexpress.com ವರದಿ ಮಾಡಿದೆ.

ಕೇರಳದ ತ್ರಿಶ್ಶೂರಿನ ಕಂದಸ್ಸನಕಡವು ನಿವಾಸಿ ಡೆಲಿಷಾ ಡೇವಿಸ್ ಈಗಾಗಲೇ ರಾಜ್ಯದ ಮೊದಲ ಟ್ಯಾಂಕರ್ ಚಾಲಕಿ ಎಂಬ ಖ್ಯಾತಿ ಪಡೆದಿದ್ದಾರೆ.

ಅಪಾಯಕಾರಿ ವಸ್ತುಗಳನ್ನು ಹೊಂದಿರುವ ವಾಹನ ಚಲಾಯಿಸುವ ಪರವಾನಗಿಯನ್ನು ಈಗಾಗಲೇ ಪಡೆದಿರುವ ಬರ್ಕತ್ ಸದ್ಯ ಚಲಿಶ್ಶೇರಿ ಪೊಲೀಸ್ ಠಾಣೆಯಿಂದ ಒಂದು ಅನುಮೋದನೆಗಾಗಿ ಕಾದಿದ್ದಾರೆ.

"ಇಲ್ಲಿ ದೊರಕುವ ಪಾಸ್ ಅನ್ನು ಕೊಚ್ಚಿ ತೈಲ ಮಾರುಕಟ್ಟೆ ಕಂಪೆನಿಗೆ ಸಲ್ಲಿಸಿ  ಪೆಟ್ರೋಲಿಯಂ ಉತ್ಪನ್ನಗಳನ್ನು ಲೋಡ್ ಮಾಡಲು ಮತ್ತು ಸಾಗಾಟ ಮಾಡಲು ಅನುಮತಿ ಪಡೆಯಬೇಕಿದೆ," ಎಂದು ಪಾಲಕ್ಕಾಡಿನ ನಾಗಲಸ್ಸೇರಿ ಪಂಚಾಯತಿನ ಕಿಲಿವಳನಕುನ್ನು ಎಂಬಲ್ಲಿನ ಬರ್ಕತ್ ಹೇಳುತ್ತಾರೆ.

"14 ವರ್ಷದವಳಿರುವಾಗಲೇ ಅಣ್ಣನ ಮೋಟಾರ್ ಸೈಕಲ್ ಸವಾರಿ ಕಲಿತಿದ್ದೆ.  ಬೈಕ್, ಆಟೋರಿಕ್ಷಾ, ಕಾರು, ಲಾರಿ, ಯಾವ ವಾಹನ ಚಲಾಯಿಸಲು ಅವಕಾಶ ದೊರೆತರೂ ಬಿಡುತ್ತಿರಲಿಲ್ಲ. ನವೆಂಬರ್ 10ರಂದು  ಎರ್ಣಾಕುಳಂನಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ಅಪಾಯಕಾರಿ ವಸ್ತುಗಳ ಸಾಗಾಟ ಮಾಡುವ ಘನ ವಾಹನ ಚಲಾಯಿಸಲು ಪರವಾನಗಿ ದೊರಕಿದೆ,'' ಎಂದು ಅವರು ಹೇಳುತ್ತಾರೆ.

ಪ್ರಸ್ತುತ ಆಕೆ ಟೌರಸ್ ಲಾರಿಗಳನ್ನು ತನ್ನ ಸೋದರ ನಿಶಾದ್ ಜತೆಗೆ ಚಲಾಯಿಸುತ್ತಾರೆ. ಆದರೆ ಟ್ಯಾಂಕರ್ ಲಾರಿ ಚಾಲಕಿಯಾಗುವುದು ತನ್ನ ಗುರಿ ಎಂದು ಆಕೆ ಹೇಳುತ್ತಾರೆ.

ಬರ್ಕತ್ ತಂದೆ ದಿವಂಗತ ಅಬ್ದುಲ್ ಹಮೀದ್ ದಿನಗೂಲಿ ಕಾರ್ಮಿಕರಾಗಿದ್ದರು. ಅವರ ನಿಧನಾನಂತರ ಆಕೆಯ ತಾಯಿ ಹಫ್ಝತ್ ತನ್ನ ನಾಲ್ಕು ಮಕ್ಕಳನ್ನು ಬೆಳೆಸಲು ಬಹಳ ಶ್ರಮಪಟ್ಟಿದ್ದರು. ಸ್ಥಳೀಯ ಪಂಚಾಯತ್  ಸಹಕಾರದಿಂದ ಕುಟುಂಬ ಮನೆ ನಿರ್ಮಿಸಿದೆ. ಈಗ ಅಲ್ಲಿ ಬರ್ಕತ್ ತನ್ನ ಸೋದರ ನಿಶಾದ್, ತನ್ನ ಐದು ವರ್ಷದ ಪುತ್ರಿ ಹಾಗೂ ತಾಯಿಯೊಂದಿಗೆ ವಾಸವಾಗಿದ್ದಾರೆ. ಆರಂಭದಲ್ಲಿ ಟ್ಯಾಂಕರ್ ಚಾಲಕಿಯಾಗುವ ಆಕೆಯ ಇಚ್ಛೆಗೆ ಕುಟುಂಬದಿಂದ ವಿರೋಧ ಇತ್ತಾದರೂ ಕ್ರಮೇಣ ಎಲ್ಲರ ಮನವೊಲಿಸುವಲ್ಲಿ ಬರ್ಕತ್ ಯಶಸ್ವಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News