ಲೈಂಗಿಕ ಕಿರುಕುಳ ಕುರಿತಂತೆ ಜೆಎನ್‌ಯು ಆಂತರಿಕ ದೂರು ಸಮಿತಿಯ ಸುತ್ತೋಲೆಗೆ ಟೀಕೆ

Update: 2021-12-28 17:13 GMT

ಹೊಸದಿಲ್ಲಿ,ಡಿ.28: ‘ತಮ್ಮ ಮತ್ತು ತಮ್ಮ ಪುರುಷ ಸ್ನೇಹಿತರ ನಡುವೆ ಸ್ಪಷ್ಟವಾದ ಗೆರೆಯನ್ನು ಎಳೆಯುವುದು ಹುಡುಗಿಯರಿಗೆ ಗೊತ್ತಿರಬೇಕು’ ಎಂದು ಸೂಚಿಸಿರುವ ದಿಲ್ಲಿಯ ಜವಾಹರಲಾಲ ನೇಹರು ವಿವಿ (ಜೆಎನ್‌ಯು)ಯ ‘ಸ್ತ್ರೀ ದ್ವೇಷಿ’ ಸುತ್ತೋಲೆಯನ್ನು ಹಿಂದೆಗೆದುಕೊಳ್ಳುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.

ಲೈಂಗಿಕ ಕಿರುಕುಳ ಕುರಿತು ಜ.17ರಂದು ಕೌನ್ಸೆಲಿಂಗ್ ಅಧಿವೇಶನಕ್ಕಾಗಿ ಜೆಎನ್‌ಯು ಹೊರಡಿಸಿರುವ ಸುತ್ತೋಲೆಯನ್ನು ಟ್ವಿಟರ್ ನಲ್ಲಿ ಟ್ಯಾಗ್ ಮಾಡಿರುವ ಶರ್ಮಾ, ಅದನ್ನು ಹಿಂದೆಗೆದುಕೊಳ್ಳುವಂತೆ ಕೋರಿದ್ದಾರೆ. ‘ಎಲ್ಲ ಬೋಧನೆಗಳು ಯಾವಾಗಲೂ ಹುಡುಗಿಯರಿಗಾಗಿಯೇ ಇರುವುದು ಏಕೆ? ಇದು ಕಿರುಕುಳ ನೀಡುವವರಿಗೆ ಪಾಠ ಹೇಳುವ ಸಮಯವಾಗಿದೆಯೇ ಹೊರತು ಬಲಿಪಶುಗಳಿಗಲ್ಲ. ಜೆಎನ್‌ಯುದ ಆಂತರಿಕ ಸಮಿತಿಯು ಸಂತ್ರಸ್ತರನ್ನು ಕೇಂದ್ರೀಕರಿಸಿಕೊಂಡು ನಿಲುವು ಹೊಂದಿರಬೇಕೇ ಹೊರತು ಬೇರೆಯದಲ್ಲ ’ಎಂದು ಹೇಳಿದ್ದಾರೆ.

ಜೆಎನ್‌ಯು ಆಂತರಿಕ ದೂರುಗಳ ಸಮಿತಿ(ಐಸಿಸಿ)ಯು ಈ ಸುತ್ತೋಲೆಯನ್ನು ವಿವಿಯ ವೆಬ್‌ಸೈಟ್‌ನಲ್ಲಿ ಅಪ್ಲೋಡ್ ಮಾಡಿದೆ. ಪ್ರತಿ ತಿಂಗಳು ಇಂತಹ ಅಧಿವೇಶನವನ್ನು ನಡೆಸಲಾಗುವುದು ಎಂದು ಅದು ತಿಳಿಸಿದೆ.

‘ಕೌನ್ಸೆಲಿಂಗ್ ಅಧಿವೇಶನ ಏಕೆ ಅಗತ್ಯ?’ ಎಂಬ ಉಪಶೀರ್ಷಿಕೆಯಡಿ,ಲೈಂಗಿಕ ಕಿರುಕುಳದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವನ್ನು ಮೂಡಿಸುವುದಾಗಿ ಸಮಿತಿಯು ಸುತ್ತೋಲೆಯಲ್ಲಿ ಹೇಳಿದೆ.

‘ಆಪ್ತ ಸ್ನೇಹಿತರಿಂದಲೇ ಹುಡುಗಿಯರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಿರುವ ಹಲವಾರು ಪ್ರಕರಣಗಳು ಐಸಿಸಿಯ ಗಮನಕ್ಕೆ ಬಂದಿವೆ. ಹುಡುಗರು ಸಾಮಾನ್ಯವಾಗಿ ಕೆಲವೊಮ್ಮೆ ಅನುದ್ದಿಷ್ಟವಾಗಿ, ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಗೆಳೆತನದ ತಮಾಷೆ ಮತ್ತು ಲೈಂಗಿಕ ಕಿರುಕುಳದ ನಡುವಿನ ತೆಳುವಾದ ಗೆರೆಯನ್ನು ದಾಟುತ್ತಾರೆ. ಇಂತಹ ಕಿರುಕುಳಗಳನ್ನು ತಪ್ಪಿಸಲು ತಮ್ಮ ಮತ್ತು ತಮ್ಮ ಪುರುಷ ಸ್ನೇಹಿತರ ನಡುವೆ ಸ್ಪಷ್ಟವಾದ ಗೆರೆಯನ್ನು ಹೇಗೆ ಎಳೆಯಬೇಕು ಎನ್ನುವುದು ಹುಡುಗಿಯರಿಗೆ ತಿಳಿದಿರಬೇಕು ’ ಎಂದು ತಿಳಿಸಿರುವ ಸುತ್ತೋಲೆಯು,ಯಾವುದೇ ರೀತಿಯ ಲೈಂಗಿಕ ಕಿರುಕುಳದತ್ತ ಐಸಿಸಿಯು ಶೂನ್ಯ ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News