ಪ್ರಧಾನಿಯ ಇಂದಿನ ರ‍್ಯಾಲಿಗೆ 75,000 ಜನರನ್ನು ಸೇರಿಸುವಂತೆ ಕಾನ್ಪುರ್ ಜಿಲ್ಲಾಡಳಿತದಿಂದ ವಿವಿಧ ಇಲಾಖೆಗಳಿಗೆ ಸೂಚನೆ!
ಕಾನ್ಪುರ್: ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಇಲ್ಲಿನ ಮೆಟ್ರೋ ರೈಲು ಯೋಜನೆ ಉದ್ಘಾಟನೆ ನಂತರ ನಡೆಸಲಿರುವ ಸಾರ್ವಜನಿಕ ಸಭೆಗೆ ಕೇಂದ್ರದ ಯೋಜನೆಗಳ ಸುಮಾರು 75,000 ಫಲಾನುಭವಿಗಳನ್ನು ಒಟ್ಟುಗೂಡಿಸಬೇಕೆಂದು ಕಾನ್ಪುರ್ ಜಿಲ್ಲಾಡಳಿತವು ಸರಕಾರಿ ಇಲಾಖೆಗಳಿಗೆ ಸೂಚಿಸಿದೆ ಎಂದು ತಿಳಿದು ಬಂದಿದೆ.
ಆರೋಗ್ಯ, ವೈದ್ಯಕೀಯ, ಆಹಾರ ಮತ್ತು ನಾಗರಿಕ ಸರಬರಾಜು, ತೋಟಗಾರಿಕೆ, ಸಮಾಜ ಕಲ್ಯಾಣ, ಕಾರ್ಮಿಕ, ಗ್ರಾಮೀಣಾಭಿವೃದ್ಧಿ ಇಲಾಖೆ ಸಹಿತ ಹಲವು ಇಲಾಖೆಗಳಿಗೆ ಮೇಲಿನಂತೆ ಸೂಚನೆ ಕಳುಹಿಸಲಾಗಿದೆ.
ಸಭೆಗೆ ಆಗಮಿಸುವವರಿಗೆ ಸಾರಿಗೆ, ಆಹಾರ ಮತ್ತು ವಸತಿ ಸೌಕರ್ಯದ ಏರ್ಪಾಟು ಮಾಡುವಂತೆಯೂ ಇಲಾಖೆಗಳಿಗೆ ಸೂಚಿಸಲಾಗಿದೆ. ಮೂಲಗಳು ಪ್ರಕಾರ ಸಭೆಯ ಸ್ಥಳಕ್ಕೆ ಜನರನ್ನು ಕರೆತರಲು 2000ಕ್ಕೂ ಅಧಿಕ ಉತ್ತರ ಪ್ರದೇಶ ರೋಡ್‍ವೇಸ್ ಬಸ್ಸುಗಳು ಮತ್ತು ಇತರ ಖಾಸಗಿ ಬಸ್ಸುಗಳನ್ನು ಬಳಸಲಾಗುತವುದು.
ಪ್ರಧಾನಿಯ ಸಭೆಗೆ ಅಂಗನವಾಡಿ, ಆಶಾ ಮತ್ತು ಪಂಚಾಯತ್ ಕಾರ್ಯಕರ್ತರಿಗೂ ಹಾಜರಿರುವಂತೆ ಸೂಚಿಸಲಾಗಿದೆ.
ಇದಕ್ಕೂ ಮುಂಚೆ ರವಿವಾರ ಉತ್ತರ ಪ್ರದೇಶ ಸೀಎಂ ಯೋಗಿ ಆದಿತ್ಯನಾಥ್ ಅವರ ಸಭೆಯಲ್ಲಿ ಹಾಜರಾಗುವಂತೆ ಶಿಕ್ಷಾ ಮಿತ್ರರು, ವಿವಿಧ ಸರಕಾರಿ ಇಲಾಖೆಗಳ ಉದ್ಯೋಗಿಗಳಿಗೆ ಸೂಚಿಸಲಾಗಿತ್ತು.