'ಭ್ರಷ್ಟಾಚಾರ 15 ಲಕ್ಷ ರೂ.ಗಿಂತ ಮಿಗಿಲಾಗಿದ್ದರೆ ಮಾತ್ರ ನನ್ನ ಬಳಿ ಬನ್ನಿ' ಎಂದು ಹೇಳಿ ವಿವಾದಕ್ಕಿಡಾದ ಬಿಜೆಪಿ ಸಂಸದ
ಹೊಸದಿಲ್ಲಿ: "ರೂ 15 ಲಕ್ಷಕ್ಕಿಂತ ಹೆಚ್ಚು ಮೊತ್ತದ ಭ್ರಷ್ಟಾಚಾರದಲ್ಲಿ ಒಬ್ಬ ವ್ಯಕ್ತಿ ಶಾಮೀಲಾಗಿದ್ದರೆ ಮಾತ್ರ ತನ್ನ ಬಳಿ ಬರಬೇಕು" ಎಂದು ಹೇಳುವ ಮೂಲಕ ಬಿಜೆಪಿ ಸಂಸದ ಜರ್ನಾದನ್ ಮಿಶ್ರಾ ವಿವಾದಕ್ಕೀಡಾಗಿದ್ದಾರೆ. ಈ ಕುರಿತ ವೀಡಿಯೋ ಕೂಡ ವೈರಲ್ ಆಗಿದೆ.
"ಜನರು ಒಬ್ಬ ಸರಪಂಚನ ವಿರುದ್ಧ ಭ್ರಷ್ಟಾಚಾರ ಆರೋಪ ಹೊರಿಸಿದಾಗ ನಾನು ಅವರಿಗೆ ಹಾಸ್ಯಭರಿತವಾಗಿ ಹೇಳುತ್ತೇನೆ. ಭ್ರಷ್ಟಾಚಾರ ರೂ 15 ಲಕ್ಷ ತನಕ ಆಗಿದ್ದರೆ ನನ್ನ ಬಳಿ ಬರಬೇಡಿ, ರೂ 15 ಲಕ್ಷಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ಬನ್ನಿ ಎಂದು ಹೇಳುತ್ತೇನೆ" ಎಂದು ಮಧ್ಯಪ್ರದೇಶದ ರೇವಾ ಕ್ಷೇತ್ರದ ಸಂಸದರಾಗಿರುವ ಮಿಶ್ರಾ ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.
ಪ್ರಸ್ತುತ ಸವಾಲುಗಳನ್ನು ನಿಭಾಯಿಸುವಲ್ಲಿ ಮಾಧ್ಯಮದ ಪಾತ್ರದ ಕುರಿತ ವಿಚಾರಸಂಕಿರಣದಲ್ಲಿ ಅವರು ಮಾತನಾಡುತ್ತಿದ್ದರು. "ಸರಪಂಚರ ಭ್ರಷ್ಟಾಚಾರ ಕುರಿತಂತೆ ದೊಡ್ಡ ಸಂಖ್ಯೆಯಲ್ಲಿ ಜನರು ತಮ್ಮ ಬಳಿ ದೂರುತ್ತಾರೆ. ಅಭ್ಯರ್ಥಿಯು ಮೊದಲ ರೂ 7 ಲಕ್ಷ ಹಣವನ್ನು ಚುನಾವಣೆ ಸ್ಪರ್ಧಿಸಲು, ನಂತರ ರೂ 7 ಲಕ್ಷವನ್ನು ಮುಂದಿನ ಚುನಾವಣೆಯಲ್ಲಿ ಹಾಗೂ ರೂ 1 ಲಕ್ಷವನ್ನು ಹಣದುಬ್ಬರದ ಕಾರಣದಿಂದ ಖರ್ಚು ಮಾಡುತ್ತಾರೆ" ಎಂದು ಅವರು ಹೇಳಿದ್ದಾರೆ.
ಉತ್ತರ ಪ್ರದೇಶದ ಕಾನ್ಪುರ್‍ನಲ್ಲಿ ದೊಡ್ಡ ಮೊತ್ತದ ತೆರಿಗೆ ವಂಚನೆ ನಡೆಸಿದ ಉದ್ಯಮಿ ಪಿಯುಷ್ ಜೈನ್ ಎಂಬಾತನನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ ಮರುದಿನ ಈ ಬೆಳವಣಿಗೆ ನಡೆದಿದೆ. ಜೈನ್ ನಿವಾಸದಲ್ಲಿ ಅಧಿಕಾರಿಗಳು ರೂ 257 ಕೋಟಿ ನಗದು, 25 ಕೆಜಿ ಚಿನ್ನ ಹಾಗೂ 250 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದರು