​ಮಧ್ಯಪ್ರದೇಶದಲ್ಲಿ ನಿರುದ್ಯೋಗ ತಾಂಡವ : 15 ಹುದ್ದೆಗೆ 11 ಸಾವಿರ ಅರ್ಜಿ

Update: 2021-12-29 01:41 GMT

ಭೋಪಾಲ್: ಗ್ವಾಲಿಯರ್‌ನಲ್ಲಿ ಜವಾನ, ಚಾಲಕ ಮತ್ತು ಕಾವಲುಗಾರರ 15 ಹುದ್ದೆಗಳಿಗೆ 11 ಸಾವಿರ ಮಂದಿ ನಿರುದ್ಯೋಗಿ ಯುವಕರು ಅರ್ಜಿ ಸಲ್ಲಿಸಿ ನಗರಕ್ಕೆ ದೌಡಾಯಿಸಿರುವುದು ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿರುವುದಕ್ಕೆ ಸಾಕ್ಷಿಯಾಗಿದೆ. ರಾಜ್ಯದಿಂದ ಮಾತ್ರವಲ್ಲದೇ ನೆರೆಯ ಉತ್ತರ ಪ್ರದೇಶದಿಂದಲೂ ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದಾರೆ.

ಈ ಉದ್ಯೋಗಕ್ಕೆ 10ನೇ ತರಗತಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಲು ಅರ್ಹರಾಗಿದ್ದರೂ, ಪದವಿ, ಸ್ನಾತಕೋತ್ತರ ಪದವಿ, ಎಂಜಿನಿಯರಿಂಗ್, ಎಂಬಿಎ ಹಾಗೂ ಸಿವಿಲ್ ಜಡ್ಜ್ ಆಕಾಂಕ್ಷಿಗಳು ಕೂಡಾ ಅರ್ಜಿ ಸಲ್ಲಿಸಿದ್ದಾರೆ.

"ನಾನು ವಿಜ್ಞಾನ ಪದವೀಧರ. ನಾನು ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ಪಿಎಚ್‌ಡಿ ಪದವಿ ಪಡೆದವರೂ ಸರದಿಯಲ್ಲಿ ಇದ್ದಾರೆ" ಎಂದು ಉದ್ಯೋಗಾಕಾಂಕ್ಷಿಗಳಲ್ಲೊಬ್ಬರಾದ ಅಜಯ್ ಬಘೇಲ್ ಹೇಳಿದರು.

"ನಾನು ಕಾನೂನು ಪದವೀಧರ. ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸಿದ್ದೇನೆ. ನ್ಯಾಯಾಧೀಶರ ಪರೀಕ್ಷೆಗೂ ನಾನು ಸಜ್ಜಾಗುತ್ತಿದ್ದೇನೆ. ನಾನು ಮಾಧವ ಕಾಲೇಜಿನ ವಿದ್ಯಾರ್ಥಿ. ಪರಿಸ್ಥಿತಿ ಹೇಗಿದೆ ಎಂದರೆ ಕೆಲವೊಮ್ಮೆ ಪುಸ್ತಕಗಳನ್ನು ಖರೀದಿಸಲೂ ಹಣ ಇರುವುದಿಲ್ಲ. ಆದ್ದರಿಂದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಿದ್ದೇನೆ" ಎಂದು ಕಾನೂನು ಪದವೀಧರ ಜಿತೇಂದ್ರ ಮೌರ್ಯ ವಿವರಿಸಿದರು.

ಉತ್ತರ ಪ್ರದೇಶದಿಂದ ಆಗಮಿಸಿದ್ದ ಅಲ್ತಾಫ್ ಜವಾನ ಹುದ್ದೆಗೆ ಅರ್ಜಿ ಸಲ್ಲಿಸಿದ್ದಾರೆ. ಇವರೂ ಪದವೀಧರರು. ಸರ್ಕಾರಿ ನೇಮಕಾತಿ ಬಗೆಗೆ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೇಳಿಕೆಯ ಹಿನ್ನೆಲೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಉದ್ಯೋಗಾಕಾಂಕ್ಷಿಗಳು ಸೇರಿದ್ದರು. ನಾವು ಒಂದು ವರ್ಷದಲ್ಲಿ ಒಂದು ಲಕ್ಷ ಮಂದಿಯನ್ನು ನೇಮಕ ಮಾಡಿಕೊಳ್ಳುತ್ತೇವೆ. ಎಲ್ಲ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಕೆಲ ದಿನಗಳ ಹಿಂದೆ ಸಿಎಂ ಹೇಳಿಕೆ ನೀಡಿದ್ದರು.

ಉದ್ಯೋಗ ನೋಂದಣಿ ಕಚೇರಿಯಲ್ಲಿ 32,57,136 ಮಂದಿ ಉದ್ಯೋಗಾಂಕ್ಷಿಗಳು ಹೆಸರು ನೋಂದಾಯಿಸಿದ್ದಾರೆ. ಶಿಕ್ಷಣ ಇಲಾಖೆಯಲ್ಲಿ 30600, ಗೃಹ ಇಲಾಖೆಯಲ್ಲಿ 9388, ಆರೋಗ್ಯ ಇಲಾಖೆಯಲ್ಲಿ 8592, ಕಂದಾಯ ಇಲಾಖೆಯಲ್ಲಿ 9530 ಖಾಲಿ ಹುದ್ದೆಗಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News