ಬ್ಯಾಂಕಿಂಗ್ ವಂಚನೆ : 6 ತಿಂಗಳಲ್ಲಿ 36,342 ಕೋಟಿ ರೂ. ಪಂಗನಾಮ !

Update: 2021-12-29 02:29 GMT

ಮುಂಬೈ: ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ದೇಶಾದ್ಯಂತ 4071 ಬ್ಯಾಂಕಿಂಗ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ಇದು ಕಳೆದ ವರ್ಷ ಇದೇ ಅವಧಿಯಲ್ಲಿ ಬೆಳಕಿಗೆ ಬಂದ 3499 ಪ್ರಕರಣಗಳಿಗೆ ಹೋಲಿಸಿದರೆ ಅಧಿಕ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ "ಟ್ರೆಂಡ್ ಆ್ಯಂಡ್ ಪ್ರೋಗ್ರೆಸ್ ಆಫ್ ಬ್ಯಾಂಕಿಂಗ್ ಇನ್ ಇಂಡಿಯಾ 2020-21" ವರದಿಯಿಂದ ತಿಳಿದುಬರುತ್ತದೆ.

ಆದಾಗ್ಯೂ 2021ಕ್ಕೆ ಹೋಲಿಸಿದರೆ ವಂಚನೆಯಾದ ಮೊತ್ತ ಕಳೆದ ವರ್ಷಕ್ಕಿಂತ ಕಡಿಮೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಒಟ್ಟು 64,261 ಕೋಟಿ ರೂಪಾಯಿ ವಂಚನೆಯಾಗಿದ್ದರೆ, ಈ ಬಾರಿ ಈ ಪ್ರಮಾಣ 36,342 ಕೋಟಿಗೆ ಇಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಬ್ಯಾಂಕ್ ಸಾಲಕ್ಕೆ ಸಂಬಂಧಿಸಿದಂತೆ 1802 ವಂಚನೆ ಪ್ರಕರಣಗಳು ವರದಿಯಾಗಿದ್ದು, 35,060 ಕೋಟಿ ರೂಪಾಯಿ ವಂಚನೆಯಾಗಿದೆ. ಕಾರ್ಡ್/ ಇಂಟರ್‌ ನೆಟ್ ವಂಚನೆಯ 1532 ಪ್ರಕರಣಗಳು ವರದಿಯಾಗಿದ್ದು, 60 ಕೋಟಿ ರೂಪಾಯಿ ವಂಚನೆಯಾಗಿದೆ. ಠೇವಣಿಗಳ ವಿಚಾರಕ್ಕೆ ಬಂದರೆ 362 ಕೋಟಿ ರೂಪಾಯಿ ಮೌಲ್ಯವನ್ನು ಒಳಗೊಂಡ 208 ವಂಚನೆ ಪ್ರಕರಣಗಳು ನಡೆದಿವೆ.

ಒಟ್ಟು ಪ್ರಕರಣಗಳ ಪೈಕಿ ಖಾಸಗಿ ವಲಯದ ಬ್ಯಾಂಕ್‌ಗಳ ಪಾಲು ಅರ್ಧಕ್ಕಿಂತ ಅಧಿಕ. ಆದರೆ ಮೌಲ್ಯದ ಆಧಾರದಲ್ಲಿ ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ನಡೆದಿರುವ ವಂಚನೆ ಹೆಚ್ಚು. ಪಿಎಸ್‌ಬಿಗಳಲ್ಲಿ ಬಹುತೇಕ ಪ್ರಕರಣಗಳು ಸಾಲಕ್ಕೆ ಸಂಬಂಧಿಸಿದ್ದಾಗಿದ್ದರೆ, ಖಾಸಗಿ ಬ್ಯಾಂಕ್‌ಗಳಲ್ಲಿ ಬಹುತೇಕ ಪ್ರಕರಣಗಳು ಕಾರ್ಡ್/ಇಂಟರ್‌ನೆಟ್ ಮತ್ತು ನಗದು ಸಂಬಂಧಿತ ಪ್ರಕರಣಗಳಾಗಿವೆ.

2020-21ನೇ ಹಣಕಾಸು ವರ್ಷದಲ್ಲಿ ಒಟ್ಟು 7363 ವಂಚನೆ ಪ್ರಕರಣಗಳು ವರದಿಯಾಗಿದ್ದು, 1,38,422 ಕೋಟಿ ರೂಪಾಯಿ ವಂಚನೆಯಾಗಿತ್ತು. 2019-20ರಲ್ಲಿ 8703 ಪ್ರಕರಣಗಳು ಪತ್ತೆಯಾಗಿದ್ದು, 1,85,468 ಕೋಟಿ ವಂಚನೆಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News