ಪೊಲೀಸರ ಸಮ್ಮುಖದಲ್ಲೇ ʼಇವರು ನಮ್ಮ ಪರವಾಗಿದ್ದಾರೆʼ ಎಂದು ನಕ್ಕ ನರಸಿಂಗಾನಂದ, ಸಹಚರರು

Update: 2021-12-29 13:49 GMT

ಹೊಸದಿಲ್ಲಿ: ಉತ್ತರಾಖಂಡದ ಹರಿದ್ವಾರದಲ್ಲಿ ಇತ್ತೀಚೆಗೆ ನಡೆದ ಧರ್ಮ ಸಂಸದ್‍ನಲ್ಲಿ ಹಲವು  ಹಿಂದು ಧಾರ್ಮಿಕ ನಾಯಕರು ಮುಸ್ಲಿಮರ ಹತ್ಯೆಗೆ ಹಾಗೂ ಅವರ ವಿರುದ್ಧ ಶಸ್ತ್ರ ಕೈಗೆತ್ತಿಕೊಳ್ಳಲು ಕರೆ ನೀಡಿ ಮಾಡಿದ ಭಾಷಣಗಳು ವಿವಾದಕ್ಕೀಡಾಗಿರುವ ಬೆನ್ನಿಗೇ ಇದೀಗ ಹರಿದಾಡುತ್ತಿರುವ ಇನ್ನೊಂದು ವೀಡಿಯೋದಲ್ಲಿ ಈ ಧಾರ್ಮಿಕ ನಾಯಕರು ಒಬ್ಬ ಪೊಲೀಸ್ ಅಧಿಕಾರಿ ಜತೆಗೆ ನಗುತ್ತಾ ಮಾತನಾಡುತ್ತಾ "ಅವರು ನಮ್ಮ ಕಡೆಗಿದ್ದಾರೆ" ಎಂದು ಹೇಳುತ್ತಿರುವುದು ಕೇಳಿಸುತ್ತದೆ. ಈ ವೀಡಿಯೊ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಮೌಲಾನಾಗಳು ಹಿಂದುಗಳ ವಿರುದ್ಧ ಷಡ್ಯಂತ್ರ ಹೂಡುತ್ತಿದ್ದಾರೆ, ಅವರನ್ನು  ಶಿಕ್ಷಿಸಬೇಕೆಂದು ಕೋರಿ ದೂರು ದಾಖಲಿಸಲು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಐದು ಮಂದಿ ಮಂಗಳವಾರ ಹರಿದ್ವಾರ ಪೊಲೀಸ್ ಠಾಣೆಗೆ ತೆರಳಿದ್ದರು. ಆದರೆ ಯಾವುದೇ ಎಫ್‍ಐಆರ್ ದಾಖಲಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ.

ಈ ಐದು ಮಂದಿ ಪೊಲೀಸ್ ಅಧಿಕಾರಿ ರಾಕೇಶ್ ಕಥಯತ್ ಅವರ ಜತೆ ಮಾತನಾಡುತ್ತಿರುವ ವೀಡಿಯೋವೊಂದು ಹರಿದಾಡುತ್ತಿದೆ. ಧರ್ಮ ಸಂಸದ್ ಆಯೋಜಿಸಿದ್ದ ಹಿಂದು ರಕ್ಷಾ ಸೇನಾದ ಪ್ರಬೋದಾನಂದ ಗಿರಿ, ಧಾರ್ಮಿಕ ನಾಯಕ ಯತಿ ನರಸಿಂಹಾನಂದ, ಪೂಜಾ ಶಕುನ್ ಪಾಂಡೆ ಆಲಿಯಾಸ್ ಸಾಧ್ವಿ ಅನ್ನಪೂರ್ಣ, ಶಂಕರಾಚಾರ್ಯ ಪರಿಷದ್ ಮುಖ್ಯಸ್ಥ ಆನಂದ್ ಸ್ವರೂಪ್ ಮತ್ತು ವಝೀಂ ರಿಝ್ವಿ ಆಲಿಯಾಸ್ ಜಿತೇಂದ್ರ ನಾರಾಯಣ್ ಈ ವೀಡಿಯೋದಲ್ಲಿ ಕಾಣಿಸುತ್ತಾರೆ. ಇವರ ಪೈಕಿ ಮೂವರ ಹೆಸರುಗಳು ಉತ್ತರಾಖಂಡ ಪೊಲೀಸರು ದಾಖಲಿಸಿರುವ ದ್ವೇಷದ ಭಾಷಣ ಪ್ರಕರಣದ ಎಫ್‍ಐಆರ್‍ನಲ್ಲಿವೆ.

ಮೌಲಾನಾಗಳ ವಿರುದ್ಧ ಇವರು ನೀಡಿದ್ದ ದೂರಿನ ಪ್ರತಿಯನ್ನು ಕೈಯ್ಯಲ್ಲಿ ಹಿಡಿದುಕೊಂಡಿದ್ದ ಪೊಲೀಸ್ ಅಧಿಕಾರಿಯನ್ನು ಉಲ್ಲೇಖಿಸಿ ಪೂಜಾ ಶಕುನ್ ಪಾಂಡೆ "ನೀವು ತಾರತಮ್ಯಕಾರಿ ಧೋರಣೆ ಹೊಂದಿಲ್ಲ ಎಂಬ ಸಂದೇಶ  ನೀಡಬೇಕು. ನೀವು ಪೊಲೀಸ್ ಅಧಿಕಾರಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ನಿಮ್ಮಿಂದ ಇದನ್ನೇ ನಿರೀಕ್ಷಿಸುತ್ತೇವೆ, ನೀವು ಯಾವತ್ತೂ ಗೆಲ್ಲಬೇಕು" ಎಂದು ಹೇಳುತ್ತಾರೆ. ಆಗ ಯತಿ ನರಸಿಂಹಾನಂದ "ಲಡ್ಕಾ ಹಮಾರೇ ತರಫ್ ಹೋಗಾ" (ಈತ ನಮ್ಮ ಪರ ಇರುತ್ತಾನೆ) ಎಂದು ಹೇಳುತ್ತಾರೆ.

ಆಗ ಅಲ್ಲಿದ್ದವರೆಲ್ಲರೂ ಜೋರಾಗಿ ನಗುತ್ತಾರೆ. ಪೊಲೀಸ್ ಅಧಿಕಾರಿ ಕೂಡ  ನಕ್ಕು ತಲೆ ಅಲ್ಲಾಡಿಸುತ್ತಿರುವುದು ಕಾಣಿಸುತ್ತದೆ. ಕೇಂದ್ರದ ಬಿಜೆಪಿ ಆಡಳಿತದಲ್ಲಿ ಕ್ರಿಮಿನಲ್‌ ಗಳು ಸ್ವೇಚ್ಛೆಯಿಂದ ಬದುಕುತ್ತಿದ್ದಾರೆ ಎಂದು ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News