×
Ad

ಹಣ ಅಕ್ರಮ ವರ್ಗಾವಣೆ ಪ್ರಕರಣ: ಅನಿಲ್ ದೇಶಮುಖ್ ವಿರುದ್ಧ ಇ.ಡಿ. ಪೂರಕ ಆರೋಪ ಪಟ್ಟಿ ಸಲ್ಲಿಕೆ

Update: 2021-12-29 23:04 IST

ಮುಂಬೈ, ಡಿ. 29: ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಮಹಾರಾಷ್ಟ್ರದ ಮಾಜಿ ಗೃಹ ಸಚಿವ ಅನಿಲ್ ದೇಶಮುಖ್ ವಿರುದ್ಧ ಜಾರಿ ನಿರ್ದೇಶನಾಲಯ ಬುಧವಾರ ಪೂರಕ ಆರೋಪ ಪಟ್ಟಿ ಸಲ್ಲಿಸಿದೆ.

ಅಕ್ರಮ ಹಣ ವರ್ಗಾವಣೆ ಕಾಯ್ದೆ (ಪಿಎಂಎಲ್ಎ)ಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆಗೆ ನಿಯೋಜಿಸಲಾದ ವಿಶೇಷ ನ್ಯಾಯಾಲಯದ ಮುಂದೆ ಜಾರಿ ನಿರ್ದೇಶನಾಲಯ ಸಲ್ಲಿಸಿದ 7000 ಪುಟಗಳ ಆರೋಪ ಪಟ್ಟಿಯಲ್ಲಿ ದೇಶಮುಖ್ ಅವರ ಪುತ್ರನನ್ನು ಕೂಡ ಆರೋಪಿ ಎಂದು ಉಲ್ಲೇಖಿಸಲಾಗಿದೆ.  ಈ ಹಿಂದೆ ಜಾರಿ ನಿರ್ದೇಶನಾಲಯ ದೇಶಮುಖ್ ಅವರ ಖಾಸಗಿ ಕಾರ್ಯದರ್ಶಿ (ಹೆಚ್ಚುವರಿ ಜಿಲ್ಲಾಧಿಕಾರಿ ಶ್ರೇಣಿಯ ಅಧಿಕಾರಿ) ಸಂಜೀವ್ ಪಾಲಂಡೆ ಹಾಗೂ ಆಪ್ತ ಸಹಾಯಕ ಕುಂದನ್ ಶಿಂದೆ ಸೇರಿದಂತೆ 14 ಮಂದಿ ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.

ಪ್ರಕರಣಕ್ಕೆ ಸಂಬಂಧಿಸಿ ದೇಶ್ಮುಖ್ ಅವರನ್ನು ಜಾರಿ ನಿರ್ದೇಶನಾಲಯ ಈ ವರ್ಷ ನವೆಂಬರ್ 1ರಂದು ಬಂಧಿಸಿತ್ತು. ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿ ಇದ್ದಾರೆ.

ಭ್ರಷ್ಟಾಚಾರ ಹಾಗೂ ಹುದ್ದೆಯ ದುರುಪಯೋಗದ ಆರೋಪದಲ್ಲಿ ಕಳೆದ ವರ್ಷ ಎಪ್ರಿಲ್ 21ರಂದು ದೇಶಮುಖ್ ಅವರ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದ ಬಳಿಕ ಜಾರಿ ನಿರ್ದೇಶನಾಲಯ ದೇಶಮುಖ್ ಹಾಗೂ ಅವರ ಸಹವರ್ತಿಗಳ ವಿರುದ್ಧ ತನಿಖೆ ಆರಂಭಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News