ಕಾಶ್ಮೀರ: ಎರಡು ಪ್ರತ್ಯೇಕ ಎನ್‌ಕೌಂಟರ್‌ಗಳಲ್ಲಿ ಆರು ಮಂದಿ ಜೆಇಎಂ ಉಗ್ರರ ಹತ್ಯೆ
ಶ್ರೀನಗರ,ಡಿ.30: ನಗರದ ಹೊರವಲಯದಲ್ಲಿ ಡಿಸೆಂಬರ್ 13ರಂದು ಪೊಲೀಸ್ ಬಸ್ಸೊಂದರ ಮೇಲೆ ನಡೆದ ದಾಳಿಯಲ್ಲಿ ಶಾಮೀಲಾಗಿದ್ದರೆನ್ನಲಾದ ಇಬ್ಬರು ಪಾಕ್ ಪ್ರಜೆಗಳು ಸೇರಿದಂತೆ ಆರು ಮಂದಿ ಜೈಶೆ ಮೊಹಮ್ಮದ್ ಉಗ್ರರನ್ನು ದಕ್ಷಿಣ ಕಾಶ್ಮೀರದಲ್ಲಿ ಗುರುವಾರ ನಡೆದ ಅವಳಿ ಎನ್‌ಕೌಂಟರ್‌ಗಳಲ್ಲಿ ಹತ್ಯೆಗೈಯಲಾಗಿದೆ. ಘಟನೆಯಲ್ಲಿ ಓರ್ವ ಸೇನಾಯೋಧ ವೀರ ಮರಣವನ್ನಪ್ಪಿದ್ದಾರೆ.
ಆನಂತನಾಗ್‌ನಲ್ಲಿ ಬುಧವಾರ ರಾತ್ರಿಯಿಡೀ ನಡೆದ ಎನ್‌ಕೌಂಟರ್‌ನಲ್ಲಿ ಮೂವರು ಉಗ್ರರನ್ನು ಭದ್ರತಾಪಡೆಗಳು ಹತ್ಯೆಗೈದಿವೆ. ಇತರ ಮೂವರು ಉಗ್ರರು ಜಮ್ಮುಕಾಶ್ಮೀರದ ಕುಲಗಾಂವ್ ಜಿಲ್ಲೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಹತರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆನಂತನಾಗ್‌ನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಇಬ್ಬರು ಸೈನಿಕರು ಹಾಗೂ ಓರ್ವ ಪೊಲೀಸ್ ಸಿಬ್ಬಂದಿಗೆ ಗಾಯಗಳಾಗಿವೆ.
ಉಗ್ರರ ಉಪಸ್ಥಿತಿಯ ಬಗ್ಗೆ ನಿರ್ದಿಷ್ಟ ಮಾಹಿತಿಗಳು ಲಭ್ಯವಾದ ಹಿನ್ನೆಲೆಯಲ್ಲಿ ಭದ್ರತಾಪಡೆಗಳು ಆನಂತನಾಗ್ ಜಿಲ್ಲೆಯ ನೌಗಾಮ್ ಶಹಾಬಾದ್ ಹಾಗೂ ಕುಲಂಗಾಂವ್ನ ಮಿರ್ಹಾಮಾ ಪ್ರದೇಶದಲ್ಲಿ ಶೋಧ ಹಾಗೂ ಮುತ್ತಿಗೆ ಕಾರ್ಯಾಚರಣೆಯನ್ನು ಆರಂಭಿಸಿದ ಬಳಿಕ ಈ ಎನ್‌ಕೌಂಟರ್‌ಗಳು ನಡೆದಿವೆಯೆಂದು ಸೇನೆಯ 15 ಕಾರ್ಪ್ಸ್ ನ ಜನರಲ್ ಆಫೀಸರ್ ಕಮಾಂಡಿಂಗ್ (ಜಿಓಸಿ) ಲೆ.ಜ.ಡಿ.ಪಿ. ಪಾಂಡೆ ತಿಳಿಸಿದ್ದಾರೆ. ಸಂಘರ್ಷದಲ್ಲಿ ಸಿಪಾಯಿ ಜಸಬೀರ್ಸಿಂಗ್ ವೀರಮರಣವನ್ನಪ್ಪಿದ್ದಾರೆಂದು ಅವರು ಹೇಳಿದರು.
ಕಳೆದ ಐದು ದಿನಗಳಲ್ಲಿ ಕಾಶ್ಮೀರ ಕಣಿವೆಯಾದ್ಯಂತ ಭದ್ರತಾಪಡೆಗಳು ನಡೆಸಿದ ವಿವಿಧ ಕಾರ್ಯಾಚರಣೆಗಳಲ್ಲಿ 11 ಕಟ್ಟಾ ಉಗ್ರರನ್ನು ಹತ್ಯೆಗೈಯಲಾಗಿದೆ.