ನಾಗಾಲ್ಯಾಂಡ್: ವಿವಾದಗಳ ನಡುವೆಯೂ ಸೇನಾ ಪಡೆಗಳ ವಿಶೇಷಾಧಿಕಾರ ಕಾಯಿದೆ ಆರು ತಿಂಗಳು ವಿಸ್ತರಣೆ

Update: 2021-12-30 18:14 GMT
ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ,ಸೆ.30: ನಾಗಾಲ್ಯಾಂಡ್‌ನ ಪರಿಸ್ಥಿತಿ ಅತ್ಯಂತ ಅಶಾಂತಿಯುತವಾಗಿದೆ ಹಾಗೂ ಅಪಾಯಕಾರಿಯಾಗಿದೆ ಎಂದು ಗುರುವಾರ ಬಣ್ಣಿಸಿರುವ ಕೇಂದ್ರ ಸರಕಾರವು ಡಿಸೆಂಬರ್ 30ರಿಂದ ಅನ್ವಯವಾಗುವಂತೆ ಆರು ತಿಂಗಳವರೆಗೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಅಫ್‌ಸ್ಪಾ)ಯಡಿ ಆ ರಾಜ್ಯವನ್ನು ಉದ್ವಿಗ್ನ ಪ್ರದೇಶವೆಂದು ಘೋಷಿಸಿದೆ.

ನಾಗಾಲ್ಯಾಂಡ್‌ನಿಂದ ವಿವಾದಾತ್ಮಕ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆಯನ್ನು ಹಿಂತೆಗೆದುಕೊಳ್ಳುವ ಸಾಧ್ಯತೆಯ ಬಗ್ಗೆ ಪರಿಶೀಲಿಸಲು ಕೇಂದ್ರ ಸರಕಾರವು ಉನ್ನತ ಮಟ್ಟದ ಸಮಿತಿಯನ್ನು ರಚಿಸಿದ ಕೆಲವೇ ದಿನಗಳ ಬಳಿಕ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಇಡೀ ನಾಗಾಲ್ಯಾಂಡ್ ರಾಜ್ಯವು ಎಷ್ಟೊಂದು ಅಶಾಂತಿಯುತವಾಗಿದೆ ಹಾಗೂ ಅಪಾಯಕಾರಿ ಪರಿಸ್ಥಿತಿಯಲ್ಲಿದೆಯೆಂದರೆ, ನಾಗರಿಕ ಪಡೆಗಳಿಗೆ ನೆರವು ನೀಡಲು ಸಶಸ್ತ್ರ ಪಡೆಗಳನ್ನು ಬಳಸಿಕೊಳ್ಲುವದು ಅಗತ್ಯವಾಗಿದೆ ಎಂಬ ಅಭಿಪ್ರಾಯವನ್ನು ಕೇಂದ್ರ ಸರಕಾರ ಹೊಂದಿದೆ ಎಂದು ಕೇಂದ್ರ ಗೃಹ ಸಚಿವಾಲಯ ಗುರುವಾರ ಪ್ರಕಟಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಪಿಯೂಶ್ ಗೋಯಲ್ ಅವರು ಈ ಅಧಿಸೂಚನೆಯನ್ನು ಪ್ರಕಟಿಸಿದ್ದಾರೆ. ನಾಗಾಲ್ಯಾಂಡ್‌ನಿಂದ ಅಫ್‌ಸ್ಪಾ ಹಿಂತೆಗೆದುಕೊಳ್ಳುವ ಬಗ್ಗೆ ಪರಿಶೀಲಿಸಲು ರಚಿಸಲಾದ ಸಮಿತಿಯಲ್ಲಿ ಗೋಯಲ್ ಅವರು ಸದಸ್ಯರಾಗಿದ್ದಾರೆ. ಕಾರ್ಯದರ್ಶಿ ದರ್ಜೆಯ ಅಧಿಕಾರಿ ವಿವೇಕ್ ಜೋಶಿ ಅವರು ಸಮಿತಿಯ ನೇತೃತ್ವ ವಹಿಸಿದ್ದಾರೆ.

ನಾಗಾಲ್ಯಾಂಡ್‌ನ ಮೊನ್ ಜಿಲ್ಲೆಯಲ್ಲಿ ಭದ್ರತಾಪಡೆಗಳು 14 ಮಂದಿಯನ್ನು ಗುಂಡಿಕ್ಕಿ ಹತ್ಯೆಗೈದ ಘಟನೆಯ ಬಳಿಕ ಆ ರಾಜ್ಯದಲ್ಲಿ ಭುಗಿಲೆದ್ದಿರುವ ಉದ್ವಿಗ್ನತೆಯನ್ನು ಶಮನಗೊಳಿಸುವ ಕ್ರಮವಾಗಿ ಈ ಉನ್ನತ ಮಟದ ಸಮಿತಿಯನ್ನು ರಚಿಸಲಾಗಿತ್ತು.

ಮೊನ್ ಜಿಲ್ಲೆಯಲ್ಲಿ ಉಗ್ರರೆಂದು ತಪ್ಪಾಗಿ ಭಾವಿಸಿ ಭದ್ರತಾಪಡೆಗಳು 14 ಮಂದಿ ನಾಗರಿಕರನ್ನು ಹತ್ಯೆಗೈದ ಘಟನೆಯ ಬಳಿಕ ನಾಗಾಲ್ಯಾಂಡ್ ನ ಹಲವಾರು ಜಿಲ್ಲೆಗಳಲ್ಲಿ ಅಫ್‌ಸ್ಪಾ ಕಾಯ್ದೆಯನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆಗಳು ಭುಗಿಲೆದ್ದಿವೆ.

ಅಫ್‌ಸ್ಪಾ ಕಾಯ್ದೆಯು ಕಾರ್ಯಾಚರಣೆಗಳನ್ನು ನಡೆಸಲು ಹಾಗೂ ಯಾವುದೇ ವಾರಂಟ್ ಇಲ್ಲದೆ ಯಾರನ್ನೂ ಕೂಡಾ ಬಂಧಿಸಲು ಸಶಸ್ತ್ರ ಪಡೆಗಳಿಗೆ ಅಧಿಕಾರವನ್ನು ನೀಡುತ್ತದೆ. ಒಂದು ವೇಳೆ ಭದ್ರತಾಪಡೆಗಳು ಯಾರನ್ನಾದರೂ ಗುಂಡಿಕ್ಕಿ ಸಾಯಿಸಿದಲ್ಲಿ, ಅವುಗಳಿಗೆ ಕಾನೂನುಕ್ರಮಕ್ಕೆ ಒಳಗಾಗುವುದರಿಂದ ರಕ್ಷಣೆ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News