ಮಹಾತ್ಮಾ ಗಾಂಧಿ ಮತ್ತು ಇಸ್ಲಾಂ ವಿರೋಧಿ ಹೇಳಿಕೆ: ಕಾಳಿಚರಣ್‌ ಮಹಾರಾಜ್‌ ಬಂಧನ

Update: 2021-12-30 06:09 GMT

ಭೋಪಾಲ್: ಮಹಾತ್ಮಾ ಗಾಂಧಿಯನ್ನು ಅವಮಾನಿಸಿದ ಮತ್ತು ಹಂತಕ ನಾಥೂರಾಂ ಗೋಡ್ಸೆಯನ್ನು ಹೊಗಳಿದ ಮಹಾರಾಷ್ಟ್ರದ ಹಿಂದೂ ಧಾರ್ಮಿಕ ಮುಖಂಡನನ್ನು ಮಧ್ಯಪ್ರದೇಶದ ಖಜುರಾಹೊದಲ್ಲಿ ಛತ್ತೀಸ್‌ಗಢ ಪೊಲೀಸರು ಬಂಧಿಸಿದ್ದಾರೆ.

ಛತ್ತೀಸ್‌ಗಢದ ರಾಯ್‌ಪುರದಲ್ಲಿ ನಡೆದ ಧರ್ಮ ಸಂಸದ್ ಅಥವಾ ಧಾರ್ಮಿಕ ಸಭೆಯಲ್ಲಿ ವಿವಾದಾತ್ಮಕ ಭಾಷಣ ಮಾಡಿದ ಕಾಳೀಚರಣ್ ಮಹಾರಾಜ್ ಕಾರಣದಿಂದಾಗಿ ಮುಖ್ಯ ಪೋಷಕ ಮಹಂತ್ ರಾಮಸುಂದರ್ ದಾಸ್ ಕಾರ್ಯಕ್ರಮವನ್ನು ನಿರಾಕರಿಸಿ ಕೋಪದಿಂದ ವೇದಿಕೆಯಿಂದ ಹೊರನಡೆದಿದ್ದರು. ಈ ಪ್ರಕರಣದ ಕುರಿತಾದಂತೆ ಮಾಜಿ ಮೇಯರ್ ಪ್ರಮೋದ್ ದುಬೆ ಅವರು ಪೊಲೀಸರಿಗೆ ದೂರು ನೀಡಿದ ನಂತರ ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿದ ಆರೋಪವನ್ನು ಹೊರಿಸಲಾಯಿತು.

ಕಾಳಿಚರಣ್‌ನನ್ನು ಬಂಧಿಸಲಾಗಿದೆ ಎಂದು ರಾಯ್‌ಪುರದ ಹಿರಿಯ ಪೊಲೀಸ್ ಅಧಿಕಾರಿ ಪ್ರಶಾಂತ್ ಅಗರ್ವಾಲ್ ಖಚಿತಪಡಿಸಿದ್ದಾರೆ.

ಕಾಳೀಚರಣ್ ಖಜುರಾಹೊದಲ್ಲಿ ಅತಿಥಿ ಗೃಹವನ್ನು ಕಾಯ್ದಿರಿಸಿದ್ದರು. ಆದರೆ ಅಲ್ಲಿ ಉಳಿದುಕೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬದಲಿಗೆ ಅವರು ಖಜುರಾಹೊದಿಂದ ಸುಮಾರು 25 ಕಿಮೀ ದೂರದಲ್ಲಿರುವ ಅವರ ಬಾಡಿಗೆ ಮನೆಗೆ ತೆರಳಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಿದ ದಿನದಿಂದಲೂ ಪೊಲೀಸರನ್ನು ಶೋಧ ಕಾರ್ಯದಲ್ಲಿ ತೊಡಗಿದ್ದರು.

ಪೊಲೀಸ್ ಟ್ರ್ಯಾಕಿಂಗ್‌ನಿಂದ ತಪ್ಪಿಸಿಕೊಳ್ಳಲು, ಅವರ ಎಲ್ಲಾ ಆಪ್ತ ಸಹಾಯಕರು ತಮ್ಮ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿದ್ದರು ಎಂದು ಮೂಲಗಳು ತಿಳಿಸಿವೆ. ಇಂದು ಬೆಳಿಗ್ಗೆ, 10 ಪೊಲೀಸರ ತಂಡ ಅಂತಿಮವಾಗಿ ಆತನನ್ನು ಪತ್ತೆಹಚ್ಚಿ, ಬಂಧಿಸಿ ಛತ್ತೀಸ್‌ಗಢದ ರಾಜಧಾನಿ ರಾಯ್‌ಪುರಕ್ಕೆ ಕರೆದೊಯ್ದಿದೆ.

ಸಂಜೆ ವೇಳೆಗೆ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ತಿಳಿದು ಬಂದಿದೆ.

ಅವರ ಭಾಷಣವು ಸಾಮಾಜಿಕ ಮಾಧ್ಯಮದಾದ್ಯಂತ ವೈರಲ್‌ ಆಗಿತ್ತು., ರಾಜಕೀಯದ ಮೂಲಕ ರಾಷ್ಟ್ರವನ್ನು ವಶಪಡಿಸಿಕೊಳ್ಳುವುದು ಇಸ್ಲಾಂನ ಗುರಿ ಎಂದು ಕಾಳಿಚರಣ್ ಮಹಾರಾಜ್ ಘೋಷಿಸಿದ್ದ. "ಮೋಹನ್‌ ದಾಸ್ ಕರಮಚಂದ್ ಗಾಂಧಿಯವರು ದೇಶವನ್ನು ನಾಶಪಡಿಸಿದರು. ಅವರನ್ನು ಕೊಂದ ನಾಥೂರಾಂ ಗೋಡ್ಸೆಗೆ ನಮಸ್ಕಾರಗಳು" ಎಂದು ಹೇಳಿಕೆ ನೀಡಿದ್ದ. "ಹಿಂದೂ ಧರ್ಮವನ್ನು ʼರಕ್ಷಿಸಲುʼ ಜನರು ʼಕಠಿಣ ಹಿಂದೂ ನಾಯಕನನ್ನುʼ ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News