ಕೋವಿಡ್ ನಿಯಮ ಪಾಲನೆಯೊಂದಿಗೆ ವಿಧಾನಸಭಾ ಚುನಾವಣೆ ನಡೆಸಲು ಎಲ್ಲ ಪಕ್ಷಗಳ ಒಪ್ಪಿಗೆಯಿದೆ: ಮುಖ್ಯ ಚುನಾವಣಾ ಆಯುಕ್ತ

Update: 2021-12-30 14:31 GMT

ಹೊಸದಿಲ್ಲಿ: ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಕೊಂಡು  ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗಳನ್ನು ನಡೆಸಬೇಕೆಂದು ಎಲ್ಲಾ ರಾಜಕೀಯ ಪಕ್ಷಗಳು ಸರ್ವಾನುಮತದಿಂದ ಒಪ್ಪಿವೆ ಎಂದು ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಗುರುವಾರ ಹೇಳಿದ್ದಾರೆ.

ಕೋವಿಡ್‍ನ ಓಮಿಕ್ರಾನ್ ರೂಪಾಂತರಿ ವೇಗವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚುನಾವಣೆ ಮುಂದೂಡುವಂತೆ ಚುನಾವಣಾ ಆಯೋಗವನ್ನು  ಅಲಹಾಬಾದ್ ಹೈಕೋರ್ಟ್ ಕಳೆದ ವಾರ ವಿನಂತಿಸಿದ ನಂತರ ಸುಶೀಲ್ ಚಂದ್ರ ಅವರ ನೇತೃತ್ವದ ತಂಡವು ಉತ್ತರ ಪ್ರದೇಶಕ್ಕೆ ಪರಿಸ್ಥಿತಿಯನ್ನು ಅವಲೋಕಿಸಲು ಮತ್ತು ರಾಜಕೀಯ ಪಕ್ಷದ ಪ್ರತಿನಿಧಿಗಳನ್ನು ಭೇಟಿಯಾಗಲು ಕಳೆದ ವಾರ ಉತ್ತರ ಪ್ರದೇಶಕ್ಕೆ ತೆರಳಿತ್ತು.

ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ರಾಜಕೀಯ ರ್ಯಾಲಿಗಳು ನಡೆಯುತ್ತಿರುವುದರಿಂದ ನಿರ್ಬಂಧಗಳನ್ನು ಹೇರಬೇಕೆಂದು ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮನವಿ ಮಾಡಿರುವುದರಿಂದ ಈ ಕುರಿತು ಮಾರ್ಗಸೂಚಿಗಳನ್ನು ಸದ್ಯದಲ್ಲಿಯೇ ಹೊರಡಿಸಲಾಗುವುದು ಎಂದು ಮುಖ್ಯ ಚುನಾವಣಾ ಆಯುಕ್ತರು ಹೇಳಿದ್ದಾರೆ.

ಮತದಾನ ಸಮಯವನ್ನು ಒಂದು ಗಂಟೆ ವಿಸ್ತರಿಸಲಾಗುವುದು ಹಾಗೂ ಬೆಳಿಗ್ಗೆ 8ರಿಂದ 6ರ ತನಕ ನಡೆಯಲಿದೆ ಮತ್ತು 11,000 ಹೆಚ್ಚುವರಿ ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮತದಾನ ಸಿಬ್ಬಂದಿಗಳು ಎರಡೂ ಡೋಸ್ ಲಸಿಕೆ ಪಡೆದವರಾಗಿರುತ್ತಾರೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News