ನಾಗಾಲ್ಯಾಂಡ್ ನಾಗರಿಕರ ಹತ್ಯೆ ಪ್ರಕರಣ: ಸೇನಾ ಸಿಬ್ಬಂದಿ ವಿರುದ್ಧ ತತ್ಕ್ಷಣ ಕ್ರಮಕ್ಕೆ ಕೊನ್ಯಾಕ್ ಸಿಎಸ್ಒ ಆಗ್ರಹ

Update: 2021-12-30 18:15 GMT

ಗುವಾಹತಿ, ಡಿ. 30: ನಾಗಾ ಲ್ಯಾಂಡ್‌ ನ ಮೊನ್ ಜಿಲ್ಲೆಯಲ್ಲಿ 14 ನಾಗರಿಕರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿರುವ ಭದ್ರತಾ ಸಿಬ್ಬಂದಿಗೆ ತತ್‍ಕ್ಷಣ ಶಿಕ್ಷೆ ನೀಡುವಂತೆ ಪ್ರಭಾವಿ ನಾಗಾ ಬುಡಕಟ್ಟು ಸಂಘಟನೆ ಕೊನ್ಯಾಕ್ ಸಿವಿಲ್ ಸೊಸೈಟಿ ಆರ್ಗನೈಸೇಶನ್ ಆಗ್ರಹಿಸಿದೆ.

ಕೊನ್ಯಾಕ್ ಸಿವಿಲ್ ಸೊಸೈಟಿ ಸಂಘಟನೆ ತನ್ನ ಹೇಳಿಕೆಯಲ್ಲಿ, ಡಿಸೆಂಬರ್ 4 ಹಾಗೂ 5ರಂದು 14 ಮಂದಿ ಅಮಾಯಕ ಜನರನ್ನು ಹತ್ಯೆಗೈದ ಪ್ರಕರಣದಲ್ಲಿ ಭಾಗಿಯಾಗಿರುವ ಸೇನಾ ಅಧಿಕಾರಿಗಳನ್ನು ಶಿಕ್ಷಿಸಲು ಕೇಂದ್ರ ಸರಕಾರ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. 14 ಕೋನ್ಯಾಕ್ ಯುವಕರ ಹತ್ಯಾಕಾಂಡದಲ್ಲಿ ಪಾಲ್ಗೊಂಡ 21 ಪ್ಯಾರಾ ವಿಶೇಷ ಪೊಲೀಸ್ ಪಡೆಯ ಸಿಬ್ಬಂದಿಯನ್ನು ಕೂಡಲೇ ಶಿಕ್ಷಿಸಬೇಕು ಎಂದು ಅದು ಹೇಳಿದೆ. ಸತ್ಯವನ್ನು ಮುಚ್ಚಿ ಹಾಕುವ ಯಾವುದೇ ಪ್ರಯತ್ನವನ್ನು  ಕೊನ್ಯಾಕ್ ಸಿವಿಲ್ ಸೊಸೈಟಿ ಆರ್ಗನೈಸೇಶನ್ ವಿರುದ್ಧದ ನಡೆ ಎಂದು ಪರಿಗಣಿಸಲಾಗುವುದು. ‘‘ಆದುದರಿಂದ, ಕೊನ್ಯಾಕ್ಗಳು ಇಲ್ಲಿನ ಪ್ರಜೆಗಳೇ, ಅಲ್ಲವೇ ಎಂಬುದನ್ನು ಸಾಬೀತುಪಡಿಸುವ ಜವಾಬ್ದಾರಿ ಕೇಂದ್ರ ಸರಕಾರದ ಮೇಲಿದೆ’’ ಎಂದು ಹೇಳಿಕೆ ತಿಳಿಸಿದೆ. ಈ ಹೇಳಿಕೆಗೆ ಕೊನ್ಯಾಕ್ ಒಕ್ಕೂಟದ ಅಧ್ಯಕ್ಷ ಹೋವಿಂಗ್ ಕೊನ್ಯಾಕ್, ಕೆಎನ್ಎಸ್ಕೆಯ ಅಧ್ಯಕ್ಷ ಪೊಂಗ್ಲೆಮ್ ಕೊನ್ಯಾಕ್, ಕೊನ್ಯಾಕ್ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ನೊಕ್ಲೇಮ್ ಕೊನ್ಯಾಕ್ ಮೊದಲಾದವರು ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News