ಲೂಧಿಯಾನಾ ಸ್ಫೋಟ ಪ್ರಕರಣ: ಜರ್ಮನಿಯಲ್ಲಿ ಬಂಧಿತ ಎಸ್‌ಜೆಎಫ್ ಸದಸ್ಯನ ವಿರುದ್ಧ ಕೇಸ್ ದಾಖಲು
ಹೊಸದಿಲ್ಲಿ,ಡಿ.31: ಕಳೆದ ವಾರ ಲೂಧಿಯಾನಾದ ನ್ಯಾಯಾಲಯದಲ್ಲಿ ಸಂಭವಿಸಿದ್ದ ಸ್ಫೋಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಯು ಜರ್ಮನಿಯಲ್ಲಿ ನೆಲೆಸಿರುವ ಸಿಖ್ ಫಾರ್ ಜಸ್ಟೀಸ್ (ಎಸ್‌ಜೆಎಫ್)ನ ಸದಸ್ಯ ಜಸ್ವಿಂದರ್ ಸಿಂಗ್ ಮುಲ್ತಾನಿ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿದೆ. ಮುಲ್ತಾನಿಯನ್ನು ಜರ್ಮನಿಯ ಅಧಿಕಾರಿಗಳು ಬಂಧಿಸಿದ್ದಾರೆ ಎನ್ನಲಾಗಿದೆ.
ಸ್ಫೋಟ ಪ್ರರಣದಲ್ಲಿ ಮುಲ್ತಾನಿಯ ಕೈವಾಡವಿದೆ ಎಂದು ಶಂಕಿಸಲಾಗಿದೆ.
ಎನ್‌ಐಎ ಇನ್ನಷ್ಟೇ ಸ್ಫೋಟ ಪ್ರಕರಣವನ್ನು ಅಧಿಕೃತವಾಗಿ ಹಸ್ತಾಂತರಿಸಿಕೊಳ್ಳಬೇಕಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಮತ್ತು ಕೊಲೆ ಸೇರಿದಂತೆ ಐಪಿಸಿಯ ವಿವಿಧ ಕಲಮ್‌ಗಳಡಿ ಮುಲ್ತಾನಿ ಮತ್ತು ಆತನ ಸಹಚರರ ವಿರುದ್ಧ ಪ್ರಕರಣ ದಾಖಲಾಗಿದೆ.
ಪಂಜಾಬನ್ನು ಭಾರತದಿಂದ ಪ್ರತ್ಯೇಕಗೊಳಿಸುವ ಉದ್ದೇಶದೊಂದಿಗೆ ತಮ್ಮ ಸಿದ್ಧಾಂತವನ್ನು ಪ್ರಸರಿಸಲು ರಾಜ್ಯದಲ್ಲಿಯ ಯುವಕರ ಮೂಲಭೂತೀಕರಣ,ಪ್ರಚೋದನೆ ಮತ್ತು ಅವರನ್ನು ತಮ್ಮ ಸಂಘಟನೆಗೆ ಭರ್ತಿ ಮಾಡಿಕೊಳ್ಳಲು ಮುಲ್ತಾನಿ ಮತ್ತು ವಿದೇಶಗಳಲ್ಲಿ ನೆಲೆಸಿರುವ ಇತರ ಹಲವಾರು ಖಲಿಸ್ತಾನ್ ಪರ ಶಕ್ತಿಗಳು ನಡೆಸುತ್ತಿರುವ ಕ್ರಿಮಿನಲ್ ಒಳಸಂಚಿಗೆ ಈ ಪ್ರಕರಣವು ಸಂಬಂಧಿಸಿದೆ. ಪಂಜಾಬ್‌ನಲ್ಲಿ ಮತ್ತೆ ಭಯೋತ್ಪಾದನೆಯನ್ನು ಆರಂಭಿಸಲು ಅಲ್ಲಿಯ ಕಳ್ಳಸಾಗಣೆ ಜಾಲಗಳನ್ನು ಬಳಸಿಕೊಂಡು ಶಸ್ತ್ರಾಸ್ತ್ರಗಳು,ಮದ್ದುಗುಂಡುಗಳು ಮತ್ತು ಸ್ಫೋಟಕಗಳ ಖರೀದಿಗಾಗಿ ಹಣ ಸಂಗ್ರಹದಲ್ಲಿ ಅವರು ತೊಡಗಿದ್ದಾರೆ. ಮುಂಬೈ ಮತ್ತು ಭಾರತದ ಇತರ ನಗರಗಳಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಮುಲ್ತಾನಿ ಐಎಸ್‌ಐ ಏಜೆಂಟ್‌ರೊಂದಿಗೂ ಸಂಪರ್ಕದಲ್ಲಿದ್ದಾನೆ ಎಂದು ಎನ್‌ಐಎ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ.
ಮುಲ್ತಾನಿಯ ಬಂಧನ ಮತ್ತು ಭಾರತಕ್ಕೆ ಆತನ ಗಡಿಪಾರಿಗಾಗಿ ಸಹಕಾರವನ್ನು ಕೋರಿ ಎನ್‌ಐಎ ಜರ್ಮನ್ ಅಧಿಕಾರಿಗಳನ್ನು ಸಂಪರ್ಕಿಸುವ ಸಾಧ್ಯತೆಯಿದೆ. ಅಗತ್ಯವಾದರೆ ಆತನನ್ನು ಪ್ರಶ್ನಿಸಲು ತಂಡವೊಂದು ಜರ್ಮನಿಗೆ ಭೇಟಿಯನ್ನೂ ನೀಡಲಿದೆ ಎಂದು ಎನ್‌ಐಎಯಲ್ಲಿನ ಮೂಲಗಳು ತಿಳಿಸಿವೆ.
ಮೊದಲ ದಿನದಿಂದಲೇ ಸ್ಫೋಟ ಸಂಭವಿಸಿದ್ದ ಸ್ಥಳದಲ್ಲಿರುವ ಎನ್‌ಐಎ ತಂಡಗಳು ಸಾಕ್ಷ್ಯಧಾರಗಳನ್ನು ಸಂಗ್ರಹಿಸುತ್ತಿವೆ ಮತ್ತು ಪಂಜಾಬ್ ಪೊಲೀಸರಿಗೆ ಸಮಾನಾಂತರವಾಗಿ ತನಿಖೆಯನ್ನು ನಡೆಸುತ್ತಿವೆ.
ಸಾಕಷ್ಟು ಪ್ರಮಾಣದಲ್ಲಿ ಮೊಳೆಗಳಿದ್ದ ಪ್ಲಾಸಿಕ್ ಡಬ್ಬಿಯಲ್ಲಿ ಸುಮಾರು 1.5 ಕೆ.ಜಿ ಆರ್‌ಡಿಎಕ್ಸ್‌ನ್ನು ತುಂಬಿ ಸ್ಫೋಟಕ್ಕೆ ಬಳಸಲಾಗಿತ್ತು ಎನ್ನುವುದು ವಿಧಿವಿಜ್ಞಾನ ಪರೀಕ್ಷೆಯಲ್ಲಿ ಪತ್ತೆಯಾಗಿತ್ತು.
ಸ್ಫೋಟಕವು ಮಿಲಿಟರಿ ದರ್ಜೆಯದಾಗಿದ್ದರಿಂದ ಅದು ಗಡಿಯಾಚೆಯಿಂದ ಪೂರೈಕೆಯಾಗಿತ್ತು ಮತ್ತು ಪಾಕಿಸ್ತಾನದ ಬೆಂಬಲವಿರುವ ಖಲಿಸ್ತಾನ್ ಪರ ಗುಂಪುಗಳು ಘಟನೆಯೊಂದಿಗೆ ನಂಟು ಹೊಂದಿವೆ ಎಂಬ ಬಗ್ಗೆ ಪುರಾವೆಗಳು ಲಭಿಸಿವೆ ಎಂದು ಎನ್‌ಐಎದ ಹಿರಿಯ ಅಧಿಕಾರಿಯೋರ್ವರು ತಿಳಿಸಿದರು.
ಗಡಿಯಾಚೆಯಿಂದ ನಿಯಮಿತವಾಗಿಡ್ರೋನ್‌ಗಳ ಮೂಲಕ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು, ಸ್ಫೋಟಕಗಳು ಮತ್ತು ಐಇಡಿಗಳನ್ನು ಬೀಳಿಸುತ್ತಿರುವುದರೊಂದಿಗೆ ಪಂಜಾಬಿನಲ್ಲಿ ಖಲಿಸ್ತಾನ ಪರ ಗುಂಪುಗಳ ಚಟುವಟಿಕೆಗಳು ಮತ್ತೆ ಆರಂಭವಾಗಿವೆ ಎಂದುಭದ್ರತಾ ಏಜನ್ಸಿಗಳು ಎಚ್ಚರಿಕೆಯನ್ನು ನೀಡಿರುವ ಸಂದರ್ಭದಲ್ಲಿಯೇ ಪ್ರಕರಣದಲ್ಲಿ ಈ ಹೊಸ ಅಂಶಗಳು ಬೆಳಕಿಗೆ ಬಂದಿವೆ. ಇತ್ತೀಚಿನ ದಿನಗಳಲ್ಲಿ ಅಮೃತಸರ ಮತ್ತು ಪಠಾಣಕೋಟ ಸಮೀಪದ ಅಂತರರಾಷ್ಟ್ರೀಯ ಗಡಿಯಲ್ಲಿ 43 ಡ್ರೋನ್‌ಗಳು ಕಂಡು ಬಂದಿದ್ದವು.