×
Ad

ಇನ್ನೊಬ್ಬ ಸುಗಂಧ ದ್ರವ್ಯ ಉದ್ಯಮಿ ಮೇಲೆ ಐಟಿ ದಾಳಿ: ತನಿಖಾ ಏಜನ್ಸಿಗಳು ಮೋದಿ-ಶಾ ತಾಳಕ್ಕೆ ಕುಣಿಯುತ್ತಿವೆ; ಅಖಿಲೇಶ್‌

Update: 2022-01-01 17:30 IST

ಲಕ್ನೋ : ಶುಕ್ರವಾರ ಮುಂಜಾನೆಯಿಂದ ಆದಾಯ ತೆರಿಗೆ ಅಧಿಕಾರಿಗಳು ಸಮಾಜವಾದಿ ಪಕ್ಷದ ವಿಧಾನಪರಿಷತ್ ಸದಸ್ಯ ಹಾಗೂ ಸುಗಂಧದ್ರವ್ಯ ಉದ್ಯಮಿ ಪುಷ್ಪರಾಜ್ ಜೈನ್ 'ಪಂಪಿ' ಅವರಿಗೆ ಸೇರಿದ ಸುಮಾರು 50 ಕಡೆಗಳಲ್ಲಿ ದಾಳಿ ನಡೆಸುತ್ತಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು ಪುಷ್ಪರಾಜ್ ಜತೆಗೂಡಿ ಕನೌಜ್‍ನಲ್ಲಿ ಅಪರಾಹ್ನ ಪತ್ರಿಕಾಗೋಷ್ಠಿ ನಡೆಸಲಿದ್ದರು. ಆದರೆ ಇದಕ್ಕಿಂತ ಕೆಲವೇ ಗಂಟೆಗಳಿಗೆ ಮುಂಚೆ ದಾಳಿ ನಡೆದಿದೆ. ಅಖಿಲೇಶ್ ಅವರು ಕನೌಜ್ ತಲುಪುವ ಮುನ್ನವೇ ದಾಳಿ ಆರಂಭಗೊಂಡಿತ್ತು.

ಪುಷ್ಪರಾಜ್ ಜೈನ್‍ಗೆ ಸೇರಿದ ಕಾನ್ಪುರ್, ಲಕ್ನೋ, ಕನೌಜ್, ದಿಲ್ಲಿ, ಮುಂಬೈ ಮತ್ತಿತರೆಡೆಗಳ ಸ್ಥಳಗಳಲ್ಲಿ ದಾಳಿ ನಡೆದಿದೆ. ಹಣಕಾಸು ಅವ್ಯವಹಾರಗಳಿವೆಯೇ ಎಂದು ಪರಿಶೀಲಿಸಲು ದಾಳಿ ನಡೆಸಲಾಗುತ್ತಿದೆ ಎನ್ನಲಾಗಿದೆ.

ಪೊಲೀಸ್ ರಕ್ಷಣೆಯಲ್ಲಿ ಈ ದಾಳಿ ನಡೆಯುತ್ತಿದ್ದು ಪುಷ್ಪರಾಜ್ ಜೈನ್ ಅವರು ಸುಗಂಧದ್ರವ್ಯ ಉದ್ಯಮವಲ್ಲದೆ ಪೆಟ್ರೋಲ್ ಬಂಕ್ ಮತ್ತು ಕೋಲ್ಡ್ ಸ್ಟೋರೇಜ್‍ಗಳನ್ನೂ ಹೊಂದಿದ್ದಾರೆ.

ಇನ್ನೊಬ್ಬ ಸುಗಂಧ ದ್ರವ್ಯ ಉದ್ಯಮಿ ಪಿಯುಷ್ ಜೈನ್ ಅವರಿಗೆ ಸೇರಿದ ಕಡೆಗಳಲ್ಲಿ ಸುಮಾರು ಒಂಬತ್ತು ದಿನಗಳ ದಾಳಿಯ ನಂತರ ಶುಕ್ರವಾರ ಇನ್ನೊಂದು ದಾಳಿ ಆರಂಭಗೊಂಡಿದೆ. ಪಿಯುಷ್ ಜೈನ್ ಬಳಿಯಿಂದ ರೂ 196 ಕೋಟಿ ನಗದು 23 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ.

ಈ ದಾಳಿಗಳ ಬಗ್ಗೆ ಬಿಜೆಪಿ ಹಾಗೂ ಸಮಾಜವಾದಿ ಪಕ್ಷಗಳ ನಡುವೆ ಅರೋಪ ಪ್ರತ್ಯಾರೋಪ ನಡೆಯತ್ತಿದೆ. ಇತ್ತೀಚೆಗೆ ಸಮಾಜವಾದಿ ಪಫ್ರ್ಯೂಮ್ ಆನ್ನು ಪಿಯುಷ್ ಜೈನ್ ಬಿಡುಗಡೆಗೊಳಿಸಿದ್ದರು ಎಂದು ಬಿಜೆಪಿ ಆರೋಪಿಸುತ್ತಿದೆ ಆದರೆ ಸಮಾಜವಾದಿ ಪಕ್ಷದ ಪ್ರಕಾರ ಪುಷ್ಪರಾಜ್ ಜೈನ್ ಅವರು ಸಮಾಜವಾದಿ ಪಫ್ರ್ಯೂಮ್ ಬಿಡುಗಡೆಗೊಳಿಸಿದ್ದರು.

ಅಖಿಲೇಶ್ ಯಾದವ್ ಈ ದಾಳಿಯನ್ನು ಖಂಡಿಸಿ ಈ ಹಿಂದೆ ದಾಳಿ ನಡೆದ ಉದ್ಯಮಿ ಪಿಯುಷ್ ಜೈನ್‍ಗೂ ಕೇಸರಿ ನಾಯಕರಿಗೂ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಆತನ ಮೊಬೈಲ್ ಫೋನ್ ಪರಾಮರ್ಶಿಸಿದರೆ ಹಲವು ಬಿಜೆಪಿ ನಾಯಕರ ಸಂಪರ್ಕದ ಬಗ್ಗೆ ತಿಳಿಯಬಹುದೆಂದೂ ಅವರು ಹೇಳಿದ್ದಾರೆ. ಐಟಿ ಇಲಾಖೆ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಸಂಸ್ಥೆಗಳು ಮೋದಿ-ಶಾ ತಾಳಕ್ಕೆ ತಕ್ಕಂತೆ ಕುಣಿಯುತ್ತಿವೆ ಎಂದು ಅವರು ಆರೋಪಿಸಿದ್ದಾರೆ.

ಕಾಕತಾಳೀಯವೆಂಬಂತೆ ಈ ಹಿಂದೆ ದಾಳಿಗೊಳಗಾದ ಪಿಯುಷ್ ಜೈನ್ ಹಾಗೂ ಶುಕ್ರವಾರ ಐಟಿ ದಾಳಿಗೊಳಗಾದ ಸಮಾಜವಾದಿ ಪರಿಷತ್ ಸದಸ್ಯ ಪುಷ್ಪರಾಜ್ ಜೈನ್ ನಿವಾಸಗಳ ನಡುವಿನ ದೂರ ಕೇವಲ 500 ಮೀಟರ್‍ಗಳಾಗಿವೆ. ಪಿಯೂಷ್‍ಗೂ ತನಗೂ ಸಂಬಂಧವಿಲ್ಲ ಎಂದು ಪುಷ್ಪರಾಜ್ ಈಗಾಗಲೇ ಹೇಳಿದ್ದಾರೆ. ಕಳೆದ ತಿಂಗಳು  ಅಖಿಲೇಶ್ ಯಾದವ್ ಉಪಸ್ಥಿತಿಯಲ್ಲಿ ಪುಷ್ಪರಾಜ್ ಜೈನ್ ಅವರು ಸಮಾಜವಾದಿ ಇತ್ತ್ರ ಅಥವಾ ಸುಗಂಧದ್ರವ್ಯ ಬಿಡುಗಡೆಗೊಳಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News