ಹರಿದ್ವಾರ ದ್ವೇಷಭಾಷಣ: ಎಫ್ಐಆರ್ ಗೆ ಯತಿ ನರಸಿಂಹಾನಂದ ಮತ್ತು ಇನ್ನೋರ್ವ ಸಾಧುವಿನ ಹೆಸರುಗಳು ಸೇರ್ಪಡೆ

Update: 2022-01-01 17:05 GMT

ಹೊಸದಿಲ್ಲಿ: ಕಳೆದ ತಿಂಗಳು ನಡೆದ ವಿವಾದಿತ ಕಾರ್ಯಕ್ರಮ ಧರ್ಮ ಸಂಸದ್‌ ನ ಆಯೋಜಕರಲ್ಲೊಬ್ಬರಾದ ಯತಿ ನರಸಿಂಹಾನಂದ್‌ ಅವರ ವಿರುದ್ಧ ಉತ್ತರಾಖಂಡ್‌ ಪೊಲೀಸರು ಧ್ವೇಷ ಭಾಷಣ ಪ್ರಕರಣವನ್ನು ದಾಖಲಿಸಿದ್ದಾರೆ. 

ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಧ್ವೇಷ ಭಾಷಣ ಮಾಡಿದ ಹಾಗೂ ಹಿಂಸಾಚಾರಕ್ಕಾಗಿ ಪ್ರಚೋದಿಸಿದ ಆರೋಪದ ಮೇಲೆ ಇದುವರೆಗೂ ನಾಲ್ವರ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ನರಸಿಂಗಾನಂದ್‌ ಐದನೆಯವರಾಗಿದ್ದಾರೆ ಎಂದು Ndtv.com ವರದಿ ಮಾಡಿದೆ. 

ಸಾಗರ್ ಸಿಂಧು ಮಹಾರಾಜ್, ಸಾಧ್ವಿ ಅನ್ನಪೂರ್ಣ, ಧರಂ ದಾಸ್ ಹಾಗೂ  ವಸೀಂ ರಿಜ್ವಿ ಯಾನೆ ಜಿತೇಂದ್ರ ತ್ಯಾಗಿ ವಿರುದ್ಧ ಈ ಹಿಂದೆ ಎಫ್‌ಐಆರ್‌ ದಾಖಲಾಗಿತ್ತು. ಈ ಐವರ ವಿರುದ್ಧ ಧಾರ್ಮಿಕ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಮತ್ತು ಪೂಜಾ ಸ್ಥಳವನ್ನು ಅಪವಿತ್ರಗೊಳಿಸಲು ಪ್ರಚೋದನೆ ನೀಡಿರುವ ಆರೋಪವನ್ನು ಹೊರಿಸಲಾಗಿದೆ.

ಡಿಸೆಂಬರ್ 17 ರಿಂದ 20 ರವರೆಗೆ ನಡೆದ ಧರ್ಮ ಸಂಸದ್‌ ಕಾರ್ಯಕ್ರಮದಲ್ಲಿ ಮುಸ್ಲಿಮರ ನರಮೇಧಕ್ಕಾಗಿ ಶಸ್ತ್ರಾಸ್ತ್ರಗಳನ್ನು ಕೈಗೆತ್ತಿಕೊಳ್ಳುವಂತೆ ಕರೆ ನೀಡಲಾಗಿತ್ತು. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿತ್ತು. 

ಕಾರ್ಯಕ್ರಮದಲ್ಲಿ ಮಾಡಿದ ಭಾಷಣಗಳ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್‌ ಆಗಿದ್ದು, ಟೆನಿಸ್ ದಂತಕಥೆ ಮಾರ್ಟಿನಾ ನವ್ರಾಟಿಲೋವಾ (Martina Navratilova) ಸೇರಿದಂತೆ ಮಾಜಿ ಮಿಲಿಟರಿ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರ ತೀವ್ರ ಟೀಕೆಗೆ ಗುರಿಯಾಗಿತ್ತು.

ಆರ್‌ಟಿಐ ಕಾರ್ಯಕರ್ತ ಹಾಗೂ ತೃಣಮೂಲ ಕಾಂಗ್ರೆಸ್‌ ನಾಯಕ ಸಾಕೇತ್‌ ಗೋಖಲೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಇದೇ ಸಮಾವೇಶದಲ್ಲಿ ಭಾಗವಹಿಸಿದ್ದ ಹಿಂದೂ ರಕ್ಷಣಾ ಸೇನೆಯ ಪ್ರಬೋಧಾನಂದ ಗಿರಿ, ಬಿಜೆಪಿ ಮಹಿಳಾ ವಿಭಾಗದ ನಾಯಕಿ ಉದಿತಾ ತ್ಯಾಗಿ ಮತ್ತು ಬಿಜೆಪಿ ನಾಯಕಿ ಅಶ್ವಿನಿ ಉಪಾಧ್ಯಾಯ ಅವರು ದ್ವೇಷಪೂರಿತ ಭಾಷಣ ಮಾಡಿದ ಪ್ರಕರಣದ ಆರೋಪಿಗಳಾಗಿದ್ದು, ಜಾಮೀನಿನ ಮೇಲೆ ಹೊರಗಿದ್ದಾರೆ.  ಅದಾಗ್ಯೂ, ಕಾರ್ಯಕ್ರಮದ ಆಯೋಜಕರು ಮತ್ತು ಭಾಷಣಕಾರರು ತಾವು ಯಾವುದೇ ತಪ್ಪು ಮಾಡಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News