×
Ad

ಧರ್ಮ ಸಂಸದ್ ಗಳ ವಿರುದ್ಧ ಏನೇ ಕ್ರಮ ಕೈಗೊಂಡರೂ ಬಿಜೆಪಿಗೆ ಚುನಾವಣಾ ಲಾಭ ಖಚಿತ !

Update: 2022-01-02 11:44 IST

ಹರಿದ್ವಾರದಲ್ಲಿ ಇತ್ತೀಚಿಗೆ ನಡೆದ ಧರ್ಮ ಸಂಸದ್ ನಲ್ಲಿ ಮಾಡಲಾಗಿದ್ದ ದ್ವೇಷ ಭಾಷಣಗಳಿಗಾಗಿ ದೇಶದ್ರೋಹ ಪ್ರಕರಣವನ್ನೂ ದಾಖಲಿಸಬಹುದು. ಆದರೆ ಪೊಲೀಸರು ಭಾಷಣಕಾರರ ವಿರುದ್ಧ ಕೇವಲ ಐಪಿಸಿಯ ಕಲಂ 153 ಎ (ಗುಂಪುಗಳ ನಡುವೆ ದ್ವೇಷಕ್ಕೆ ಉತ್ತೇಜನ) ಅಡಿ ಆರೋಪವನ್ನು ದಾಖಲಿಸಿ ಭುಜ ಕೊಡವಿಕೊಂಡಿದ್ದಾರೆ.

ಹಿಂದು ಧರ್ಮದ ರಕ್ಷಣೆ,ಇಸ್ಲಾಮಿಕ್ ಜಿಹಾದ್ ಕುರಿತು ಸತ್ಯವನ್ನು ಹಿಂದುಗಳಿಗೆ ತಿಳಿಸುವುದು, ಆತ್ಮರಕ್ಷಣೆಗಾಗಿ ಮತ್ತು ಜಿಹಾದಿಗಳ ವಿರುದ್ಧ ಹೋರಾಡಲು ಅವರನ್ನು ಸಜ್ಜುಗೊಳಿಸುವುದು ಇವು ಧರ್ಮ ಸಂಸದ್ಗಳ ಮುಖ್ಯ ಉದ್ದೇಶವಾಗಿದೆ ಎಂದು ಆಯೋಜಕರಲ್ಲಿ ಪ್ರಮುಖರಾಗಿರುವ ನರಸಿಂಹಾನಂದ ಯತಿ ಹೇಳಿಕೊಂಡಿದ್ದಾರೆ.

ನರಸಿಂಹಾನಂದ ಅವರೇ ಹೇಳುವಂತೆ ಮೊದಲು ಪ್ರತಿ ಆರು ತಿಂಗಳಿಗೆ ಧರ್ಮ ಸಂಸದ್ ನಡೆಸಲಾಗುತ್ತಿತ್ತು. ಹೀಗಿರುವಾಗಿ ಸರಿಸುಮಾರು ಒಂದು ತಿಂಗಳಲ್ಲಿ ಮೂರು ಧರ್ಮ ಸಂಸದ್ಗಳನ್ನು, ಅವುಗಳ ಪೈಕಿ ಎರಡನ್ನು ಚುನಾವಣೆ ಸನ್ನಿಹಿತವಾಗಿರುವ ಉತ್ತರ ಪ್ರದೇಶದಲ್ಲಿ ನಡೆಸುವ ಯೋಜನೆಯು ಏನನ್ನು ಸೂಚಿಸುತ್ತಿದೆ? ನಿಸ್ಸಂಶಯವಾಗಿ ಇಲ್ಲಿ ಕಣ್ಣಿಗೆ ಕಾಣುವುದಕ್ಕಿಂತ ಹೆಚ್ಚಿನದು ಇದೆ.

ಧರ್ಮ ಸಂಸದ್ಗಳನ್ನು ನಡೆಸುತ್ತಿರುವ ಹಿಂದುತ್ವ ಗುಂಪುಗಳು ಬಿಜೆಪಿಯೊಂದಿಗೆ ಯಾವುದೇ ತೋರಿಕೆಯ ಸಂಬಂಧ ಹೊಂದಿಲ್ಲವಾದರೂ ಜಾತಿಭೇದವಿಲ್ಲದೆ ಹಿಂದು ಮತಗಳನ್ನು ಧ್ರುವೀಕರಿಸುವ ಮೂಲಕ ಪಕ್ಷಕ್ಕೆ ಚುನಾವಣೆಗಳಲ್ಲಿ ಲಾಭವಾಗುವಂತೆ ಮಾಡುವುದು ಈ ಧರ್ಮ ಸಂಸದ್ಗಳ ಅತ್ಯಂತ ಸಂಭಾವ್ಯ ಉದ್ದೇಶವಾಗಿದೆ ಎಂದು thewire.in ವರದಿ ಮಾಡಿದೆ.

ಜಾತಿ ಆಧಾರದಲ್ಲಿ ಹಿಂದುಗಳ ಮತ ವಿಭಜನೆಯು ಉತ್ತರ ಪ್ರದೇಶದಲ್ಲಿ ಬಿಜೆಪಿಯ ಚಿಂತೆಗೆ ಪ್ರಮುಖ ಕಾರಣವಾಗಿದೆ. ಇದೇ ವೇಳೆ ಎಸ್ಪಿ ಮತ್ತು ಬಿಎಸ್ಪಿಯಂತಹ ಪಕ್ಷಗಳಿಗಿರುವ ಬೆಂಬಲ ಜಾತಿಯಾಧಾರಿತವಾಗಿದೆ.

ಹಿಂದುತ್ವ ಗುಂಪುಗಳ ಮನಸ್ಸಿನಲ್ಲಿ ಎರಡು ಕಾರ್ಯತಂತ್ರಗಳು ಇರಬಹುದು. ಮೊದಲನೆಯದು ದೇಶದಲ್ಲಿ ಕೆಲವು ಮುಸ್ಲಿಮರು ಏನಾದರೂ ಬೇಜವಾಬ್ದಾರಿಯ ಹೇಳಿಕೆಗಳನ್ನು ನೀಡುವಂತೆ ಅವರನ್ನು ಪ್ರಚೋದಿಸುವುದು. ಇಂತಹ ಹೇಳಿಕೆಗಳನ್ನು ಹಿಂದುಗಳನ್ನು ಪ್ರಚೋದಿಸಲು ಮತ್ತು ಚುನಾವಣಾ ಲಾಭಕ್ಕಾಗಿ ಅವರನ್ನು ಒಗ್ಗೂಡಿಸಲು ಬಳಸಬಹುದು. ಸಾಮಾಜಿಕ ಮಾಧ್ಯಮಗಳಲ್ಲಿ ಈಗಾಗಲೇ ಕೆಲವು ಮುಸ್ಲಿಂ ನಾಯಕರ ಹೇಳಿಕೆಗಳು ಹರಿದಾಡುತ್ತಿದ್ದು,ಅವರು ಹಿಂದುಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಬೆದರಿಕೆಯೊಡ್ಡುತ್ತಿದ್ದಾರೆ ಎಂಬಂತೆ ಅವುಗಳನ್ನು ಬಿಂಬಿಸಲಾಗುತ್ತಿದೆ ಅಥವಾ ತಿರುಚಲಾಗುತ್ತಿದೆ.

ತಮ್ಮನ್ನು ಬಂಧಿಸುವಂತೆ ಸರಕಾರವನ್ನು ಪ್ರಚೋದಿಸುವುದು ಈ ಹಿಂದುತ್ವ ಗುಂಪುಗಳ ಎರಡನೆಯ ಕಾರ್ಯತಂತ್ರವಾಗಿರಬಹುದು. ಅವರನ್ನು ಬೆಂಬಲಿಸುವ ದೃಶ್ಯ ಮಾಧ್ಯಮಗಳು ಇಂತಹ ಬಂಧನಗಳನ್ನು ಸುಲಭವಾಗಿ ವೈಭವೀಕರಿಸಬಲ್ಲವು. ಈ ನಾಯಕರು ಪೋಲೀಸ್ ವಾಹನವನ್ನು ಹತ್ತುವ ಮುನ್ನ ಕೆಲವು ಹೇಳಿಕೆಗಳನ್ನೂ ನೀಡಬಹುದು ಮತ್ತು ಈ ದೃಶ್ಯ ಮಾಧ್ಯಮಗಳು ಇಂತಹ ಹೇಳಿಕೆಗಳನ್ನು ವಾಕರಿಕೆ ಬರುವಷ್ಟು ಪದೇ ಪದೇ ಪ್ರಸಾರ ಮಾಡುತ್ತವೆ,ತನ್ಮೂಲಕ ಧರ್ಮ ಸಂಸದ್ನಂತೆ ಹಿಂದುತ್ವವಾದಿಗಳ ಉದ್ದೇಶವನ್ನು ಪೂರೈಸುತ್ತವೆ.

 ಈ ಕ್ಲಿಪ್ಗಳನ್ನು ವಾಟ್ಸ್ಆ್ಯಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡಬಹುದು ಮತ್ತು ಈ ನಾಯಕರು ಧರ್ಮದ ರಕ್ಷಣೆಗಾಗಿ ತಮ್ಮ ಸ್ವಾತಂತ್ರವನ್ನೂ ತ್ಯಾಗಮಾಡಿದ್ದಾರೆ ಎಂಬಂತೆ ಬಿಂಬಿಸಬಹುದು ಮತ್ತು ಇದು ಇಸ್ಲಾಮಿನ ಅಪಾಯದ ವಿರುದ್ಧ ಹೋರಾಡಲು ಹಿಂದುಗಳಿಗೆ ಮತ್ತೊಂದು ಸ್ಪಷ್ಟವಾದ ಕರೆಯಾಗುತ್ತದೆ. ಈ ಶ್ರದ್ಧಾವಂತ ಹಿಂದುಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಲು ಮುಂಬರುವ ಚುನಾವಣೆಯನ್ನು ಹೊರತುಪಡಿಸಿ ಬೇರೆ ಯಾವ ಮಾರ್ಗವಿದೆ?

ಘಾಜಿಯಾಬಾದ್ ನಲ್ಲಿ ಎರಡನೆಯ ಧರ್ಮ ಸಂಸದ್ಗೆ ಸರಕಾರವು ಅನುಮತಿ ನೀಡದಿರಬಹುದು ಎಂಬ ಆತಂಕವಿದೆ ಎಂದು ನರಸಿಂಹಾನಂದ ಹೇಳಿದ್ದಾರೆ. ಚುನಾವಣೆಯು ಸಮೀಪಿಸುತ್ತಿರುವಾಗ ಇಂತಹ ನಿರಾಕರಣೆಯು ಸಾಧ್ಯವೂ ಇದೆ. ಡಿ.6ರಂದು ಸಾರ್ವಜನಿಕ ಸಭೆ ಮತ್ತು ಸಂಕಲ್ಪ ಯಾತ್ರೆಯನ್ನು ನಡೆಸಲು ಶ್ರೀಕೃಷ್ಣ ಜನ್ಮಭೂಮಿ ಮುಕ್ತಿ ದಳಕ್ಕೆ ಮಥುರಾ ಜಿಲ್ಲಾಡಳಿತವು ಈಗಾಗಲೇ ಅನುಮತಿ ನಿರಾಕರಿಸಿತ್ತು.

ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಅತ್ಯುತ್ತಮವಾಗಿ ಕಾಯ್ದುಕೊಂಡು ಬಂದಿರುವುದಾಗಿ ಬಿಂಬಿಸಿರುವ ತನ್ನ ಪ್ರಮುಖ ಚುನಾವಣಾ ಪ್ರಚಾರಕ್ಕೆ ಧಕ್ಕೆಯಾಗಬಹುದಾದ ಯಾವುದೇ ಬೆಳವಣಿಗೆಯನ್ನು ಉತ್ತರ ಪ್ರದೇಶ ಸರಕಾರವು ಬಯಸುವುದಿಲ್ಲ. 

ಧರ್ಮ ಸಂಸದ್ ನಡೆಯಲು ಸರಕಾರವು ಅಕಸ್ಮಾತ್ ಅವಕಾಶ ನೀಡಿದರೂ ಅದು ಹಿಂದು ಮತಗಳನ್ನು ಕ್ರೋಡೀಕರಿಸಲು ಮತ್ತೆ ನೆರವಾಗುತ್ತದೆ ಎಂದು ವರದಿ ಉಲ್ಲೇಖಿಸಿದೆ.

 ಅನುಮತಿ ನಿರಾಕರಿಸಿದರೂ ಅದರ ಲಾಭಗಳನ್ನೂ ಧರ್ಮಸಂಸದ್ನ ಆಯೋಜಕರು ಪಡೆಯುತ್ತಾರೆ. ಸರಕಾರವನ್ನು ಮುಜುಗರದಿಂದ ತಪ್ಪಿಸುವ ಜೊತೆಗೆ ಸಾಮಾಜಿಕ ಮಾಧ್ಯಮಗಳ ಮೂಲಕ ಅವರು ತಮ್ಮ ಮತಕ್ರೋಡೀಕರಣ ಅಭಿಯಾನನ್ನು ಮುಂದುವರಿಸಬಹುದಾಗಿದೆ. ಹೀಗೆ ಈ ಹಿಂದುತ್ವ ನಾಯಕರು ಇಡೀ ವಿರೋಧವನ್ನು (ಮತ್ತು ದೇಶವನ್ನು) ಸೋಲು-ಕಳೆದುಕೊಳ್ಳುವ ಸ್ಥಿತಿಯಲ್ಲಿರಿಸಿದ್ದಾರೆ. ಅವರ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡರೂ ಅದು ಹಿಂದು ಮತಗಳನ್ನು ಒಗ್ಗೂಡಿಸುವ ಮೂಲಕ ಬಿಜೆಪಿಗೆ ಚುನಾವಣೆಯಲ್ಲಿ ಲಾಭಗಳನ್ನು ತರಲಿದೆ.

ಕೃಪೆ: thewire.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News