ದ್ವೇಷಭಾಷಣದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಜಮಿಯ್ಯತುಲ್‌ ಉಲಮಾ ಹಿಂದ್‌ ಸಂಘಟನೆ

Update: 2022-01-02 06:23 GMT

ಹೊಸದಿಲ್ಲಿ: ಮುಸ್ಲಿಂ ಸಮುದಾಯದ ವಿರುದ್ಧ ದ್ವೇಷ ಭಾಷಣಗಳು ಹೆಚ್ಚಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ  ಜಮೀಯತುಲ್‌ ಉಲಮಾ ಹಿಂದ್ ಸಂಘಟನೆಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದು, ದೂರುಗಳ ಹೊರತಾಗಿಯೂ ರಾಜ್ಯದ ಅಧಿಕಾರಿಗಳು ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ ಎಂದು ಹೇಳಿದ್ದಾಗಿ indianexpress.com ವರದಿ ಮಾಡಿದೆ.

ಜಮಿಯತ್ ಉಲಮಾ-ಇ-ಹಿಂದ್ ಸಂಘಟನೆಯು ಅಧ್ಯಕ್ಷ ಮೌಲಾನಾ ಸೈಯದ್ ಮಹಮೂದ್ ಅಸದ್ ಮದನಿ ಮೂಲಕ ಮನವಿ ಮಾಡಿದ್ದು, "ಇಂತಹ ಭಾಷಣಗಳು ಇನ್ನೊಬ್ಬರ ನಂಬಿಕೆಗಳ ಸಹ್ಯ ವಿಮರ್ಶಾತ್ಮಕ ನಿರಾಕರಣೆಯ ಮಿತಿಯನ್ನು ಮೀರಿವೆ ಮತ್ತು ಖಂಡಿತವಾಗಿಯೂ ಧಾರ್ಮಿಕ ಅಸಹಿಷ್ಣುತೆಯನ್ನು ಪ್ರಚೋದಿಸುವ ಸಾಧ್ಯತೆಯಿದೆ" ಎಂದು ಹೇಳಿದೆ.

"ಪ್ರವಾದಿ ಮುಹಮ್ಮದ್ (ಸ) ಅವರನ್ನು ಅವಮಾನಿಸುವುದು ಇಸ್ಲಾಂ ಧರ್ಮದ ತಳಹದಿಯ ಮೇಲೆ ದಾಳಿ ಮಾಡುವಂತಿದೆ" ಎಂದು ಮನವಿಯಲ್ಲಿ ಹೇಳಲಾಗಿದೆ.

"ಅನೇಕ ಹಿಂಸಾತ್ಮಕ ಕೃತ್ಯಗಳು ನಡೆದಿವೆ, ಇದರಲ್ಲಿ ಅನೇಕ ಅಮೂಲ್ಯ ಜೀವಗಳು ಬಲಿಯಾಗಿವೆ. ಅದರಲ್ಲೂ ಹೆಚ್ಚಾಗಿ ಸಮಾಜದ ದುರ್ಬಲ ವರ್ಗಕ್ಕೆ ಸೇರಿದ ಜನರು, ಹೆಚ್ಚಿನವರು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದಾರೆ" ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಅಡ್ವೊಕೇಟ್ ಎಂ.ಆರ್ ಶಂಶಾದ್ ಅವರು ಸಲ್ಲಿಸಿದ ಅರ್ಜಿಯಲ್ಲಿ, "ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದ ಅಧಿಕಾರಿಗಳು ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ತೋರುತ್ತದೆ" ಎಂದು ಉಲ್ಲೇಖಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News