ದಿಲ್ಲಿಯಲ್ಲಿ ಕೋವಿಡ್ ಪ್ರಕರಣಗಳು ವೇಗವಾಗಿ ಏರುತ್ತಿವೆ, ಆದರೆ ಗಾಬರಿಯಾಗಬೇಡಿ: ಅರವಿಂದ ಕೇಜ್ರಿವಾಲ್
ಹೊಸದಿಲ್ಲಿ: ದಿಲ್ಲಿಯಲ್ಲಿ ಕೋವಿಡ್-19 ಪ್ರಕರಣಗಳು ವೇಗವಾಗಿ ಏರುತ್ತಿವೆ. ಆದರೆ ಗಾಬರಿಯಾಗಬೇಡಿ. ಆಸ್ಪತ್ರೆಗೆ ದಾಖಲು ಪ್ರಮಾಣ ಕಡಿಮೆ ಇದೆ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆಂದು NDTV ವರದಿ ಮಾಡಿದೆ.
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್-19 ಪ್ರಕರಣಗಳಲ್ಲಿ ತೀವ್ರ ಏರಿಕೆಯಾಗುತ್ತಿದ್ದು ಮಹಾರಾಷ್ಟ್ರದ ನಂತರ ಹೆಚ್ಚು ಹರಡುವ ಒಮೈಕ್ರಾನ್ ತಳಿಯ ಪ್ರಕರಣಗಳು ದಿಲ್ಲಿಯಲ್ಲಿ ವರದಿಯಾಗುತ್ತಿದೆ. ಶನಿವಾರದಂದು ದಿಲ್ಲಿಯು ಕೊರೋನವೈರಸ್ ಪ್ರಕರಣಗಳಲ್ಲಿ 50 ಪ್ರತಿಶತದಷ್ಟು ಜಿಗಿತವನ್ನು ದಾಖಲಿಸಿದೆ. ಸುಮಾರು 3.64 ಪ್ರತಿಶತದಷ್ಟು 2,716 ಕೋವಿಡ್-19 ಪರೀಕ್ಷೆಗಳು ಪಾಸಿಟಿವ್ ಆಗಿದೆ.
"ದಿಲ್ಲಿಯಲ್ಲಿ ಕೋವಿಡ್-19 ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಆದರೆ ಭಯಪಡುವ ಅಗತ್ಯವಿಲ್ಲ. ಪ್ರಸ್ತುತ, ನಗರದಲ್ಲಿ ಸಕ್ರಿಯ ಪ್ರಕರಣಗಳು 6,360. ಇಂದು, 3,100 ಹೊಸ ಪ್ರಕರಣಗಳನ್ನು ನಿರೀಕ್ಷಿಸಲಾಗಿದೆ. ನಿನ್ನೆ ಕೇವಲ 246 ಆಸ್ಪತ್ರೆಯ ಹಾಸಿಗೆಗಳು ಭರ್ತಿಯಾಗಿವೆ ಹಾಗೂ ಎಲ್ಲಾ ಪ್ರಕರಣಗಳು ಸೌಮ್ಯ ಮತ್ತು ಲಕ್ಷಣರಹಿತವಾಗಿವೆ. ಪ್ರಕರಣಗಳ ಏರಿಕೆಯ ಪರಿಣಾಮವು ಎರಡನೇ ಅಲೆಯ ಸಮಯದಲ್ಲಿದ್ದಕ್ಕಿಂತ ಕಡಿಮೆಯಾಗಿದೆ ಎಂದು ಡೇಟಾ ತೋರಿಸುತ್ತದೆ" ಎಂದು ಕೇಜ್ರಿವಾಲ್ ಹೇಳಿದರು.
"ಈಗ ಆಸ್ಪತ್ರೆಗಳಲ್ಲಿ ಕೇವಲ 82 ಆಮ್ಲಜನಕ ಹಾಸಿಗೆಗಳು ಭರ್ತಿಯಾಗಿವೆ. ದಿಲ್ಲಿ ಸರಕಾರ 37,000 ಹಾಸಿಗೆಗಳನ್ನು ಸಿದ್ಧಪಡಿಸಿದೆ. ಎಲ್ಲಾ ಹೊಸ ಪ್ರಕರಣಗಳು ಸೌಮ್ಯ ರೋಗಲಕ್ಷಣಗಳೊಂದಿಗೆ, ಲಕ್ಷಣರಹಿತವಾಗಿವೆ. ಆದ್ದರಿಂದ ಭಯಪಡುವ ಅಗತ್ಯವಿಲ್ಲ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ" ಎಂದು ಕೇಜ್ರಿವಾಲ್ ಹೇಳಿದರು.