ಶಾರೂಖ್ ಖಾನ್ ಮೇಲಿನ ಅಭಿಮಾನದಿಂದ ಭಾರತೀಯ ಪ್ರೊಫೆಸರ್ ಗೆ 'ಹಣ ಪಾವತಿಗೆ ಮುಂಚೆಯೇ' ಟಿಕೆಟ್ ನೀಡಿದ ವ್ಯಕ್ತಿ

Update: 2022-01-03 06:42 GMT
ಶಾರೂಖ್ ಖಾನ್ (PTI)

ಹೊಸದಿಲ್ಲಿ: ಬಾಲಿವುಡ್ ನಟ ಶಾರುಖ್ ಖಾನ್ ಅವರ ಈಜಿಪ್ಟ್ ನಲ್ಲಿನ ಅಭಿಮಾನಿಯೊಬ್ಬರ ಉದಾತ್ತ ಕಾರ್ಯ ಭಾರತೀಯ ಪ್ರೊಫೆಸರ್ ಒಬ್ಬರ ಮನ ಗೆದ್ದಿದೆ. ಈ ಕುರಿತು ಅಶೋಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರೊಫೆಸರ್ ಅಶ್ವಿನಿ ದೇಶಪಾಂಡೆ ಟ್ವೀಟ್ ಮಾಡಿದ್ದಾರೆ. ಈಜಿಪ್ಟ್ ನಲ್ಲಿ ಶಾರುಖ್ ಅಭಿಮಾನಿ, ಟ್ರಾವೆಲ್ ಏಜಂಟ್ ಒಬ್ಬರನ್ನು ತಾವು ಭೇಟಿಯಾಗಿರುವ ಬಗ್ಗೆ ಅವರು ಬರೆದುಕೊಂಡಿದ್ದಾರೆ.

"ಈಜಿಪ್ಟ್ ನಲ್ಲಿ ಟ್ರಾವೆಲ್ ಏಜಂಟ್ ಒಬ್ಬರಿಗೆ ಹಣ ವರ್ಗಾವಣೆ ಮಾಡಬೇಕಿತ್ತು. ಆದರೆ ಸಮಸ್ಯೆ ಎದುರಾಗಿತ್ತು. ಆಗ ಅವರು "ನೀವು ಶಾರುಖ್ ಅವರ ದೇಶದವರಲ್ಲವೇ ನಿಮ್ಮ ಮೇಲೆ ನಂಬಿಕೆಯಿರಿಸುತ್ತೇನೆ. ನಾನು ಬುಕ್ ಮಾಡುತ್ತೇನೆ. ನೀವು ನಂತರ ಪಾವತಿಸಿ. ಬೇರೆ ಕಡೆಯವರಾಗಿದ್ದರೆ ಹೀಗೆ ಮಾಡುತ್ತಿರಲಿಲ್ಲ. ಆದರೆ ಶಾರುಖ್ ಅವರಿಗಾಗಿ ಏನು ಬೇಕಾದರೂ ಮಾಡುತ್ತೇನೆ ಎಂದರು. ಅವರು ಹೇಳಿದಂತೆ ಮಾಡಿದರು,'' ಎಂದು ದೇಶಪಾಂಡೆ ಬರೆದಿದ್ದಾರೆ.

ಅಶ್ವಿನಿ ದೇಶಪಾಂಡೆ ಈ ರೀತಿ ಟ್ವೀಟ್ ಮಾಡಿದ್ದೇ ತಡ ಹಲವು ಟ್ವಿಟರಿಗರು ತಮ್ಮ ಅನುಭವವನ್ನು ಹಂಚಿಕೊಂಡರು.

ಒಬ್ಬರು ತಾವು ಆರ್ಜೆಂಟಿನಾದಲ್ಲಿದ್ದಾಗ ತಮ್ಮ ಫೋನ್ ಸ್ಕ್ರೀನ್‌ನಲ್ಲಿ ಯುಟ್ಯೂಬ್‌ನಲ್ಲಿ ಶಾರುಖ್ ಬಗ್ಗೆ ನೋಡುತ್ತಿದ್ದಾಗ "ಅದು ಮಿಸ್ಟರ್ ಖಾನ್ ಅವರಲ್ಲವೇ,'' ಎಂದು ಅಲ್ಲಿನವರು ಕೇಳಿದ್ದನ್ನು, ಆಗ ತಮಗೆ ಅಬಿಮಾನ ಮೂಡಿದ್ದನ್ನು ನೆನಪಿಸಿಕೊಂಡಿದ್ದಾರೆ.

ಇನ್ನೊಬ್ಬರು ತಮಗೆ ಫ್ರಾನ್ಸ್ ನಲ್ಲಿ ತಾವು ಭಾರತದವರೆಂದು ಹೇಳಿದಾಗ "ಭಾರತ? ನಮಗೆ ಎಸ್‌ಆರ್‌ಕೆ ಮಾತ್ರ ಗೊತ್ತು,'' ಎಂದು ಅಲ್ಲಿನ ಕೆಲವರು ಹೇಳಿದ್ದನ್ನು ಸ್ಮರಿಸಿದ್ದಾರೆ.

ಈಜಿಪ್ಟ್ ನಲ್ಲಿ ಅಲ್ಲಿನ ಜನರು ಭಾರತೀಯರನ್ನು ಭೇಟಿಯಾದರೆ ಅಮಿತಾಭ್ ಬಚ್ಚನ್, ಶಾರುಖ್ ಅವರ ಬಗ್ಗೆ ಮಾತನಾಡುತ್ತಾರೆ ಎಂದು ಇನ್ನೊಬ್ಬ ಟ್ವಿಟರಿಗರು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News